ವರದಿ: ಅರುಣ್ ಜಿ.,
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹೃದಯಶಿವ ನಿರ್ದೇಶನ.
ಮಂಡ್ಯ, ಮುಂಗಾರು ಮಳೆ, ಗಾಳಿಪಟ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡು ಬರೆದಿರುವ ಸಾಹಿತಿ ಹೃದಯಶಿವ ನಿರ್ದೇಶನದ “ಬಿಸಿಲು ಕುದುರೆ” ಚಿತ್ರ ಇದೇ ಏಪ್ರಿಲ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.
“ಕನ್ನಡ ಚಿತ್ರರಂಗದೊಂದಿಗೆ ನನಗೆ ಎರಡು ದಶಕಗಳ ನಂಟು. ಕನ್ನಡದ ಹಲವು ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಹೋದಾಗ ಕಾಡಂಚಿನ ರೈತನ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ. ಇಮ್ತಿಯಾಜ್ ಸುಲ್ತಾನ್ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ಸ್ ಗಳು ಸುಮಧುರವಾಗಿ ಮೂಡಿಬಂದಿವೆ. ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಹಾಡಿದ್ದಾರೆ.
ಸಂಪತ್ ಮೈತ್ರೇಯ, ಸುನೀತಾ, ಕರಿಸುಬ್ಬು, ಮಳವಳ್ಳಿ ಸಾಯಿಕೃಷ್ಣ, ವಿಕ್ಟರಿ ವಾಸು, ಜೊಸೈಮನ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಇದೇ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ ನೋಡಿ ಹಾರೈಸಿ” ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಹೃದಯಶಿವ ತಿಳಿಸಿದರು.
ತುಂಬಾ ಒಳ್ಳೆಯ ಪಾತ್ರ ನಿರ್ವಹಿಸಿರುವ ತೃಪ್ತಿ ಇದೆ ಎಂದರು ನಟ ಸಂಪತ್ ಮೈತ್ರೇಯ.
ಚಿತ್ರದಲ್ಲಿ ನಟಿಸಿರುವ ಸುನೀತಾ, ಕರಿಸುಬ್ಬು, ಜೊಸೈಮನ್, ವಿಕ್ಟರಿ ವಾಸು, ವೆಂಕಟೇಶ್, ಭಾಸ್ಕರ್ ಸೂರ್ಯ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಹಕ ನಾಗಾರ್ಜುನ್.ಡಿ ಹಾಗೂ ಸಂಕಲನಕಾರ ಬಿ.ಎಸ್.ಕೆಂಪರಾಜು “ಬಿಸಿಲು ಕುದುರೆ” ಬಗ್ಗೆ ಮಾತನಾಡಿದರು.