ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
BJP Annamali Archives » Dynamic Leader
October 23, 2024
Home Posts tagged BJP Annamali
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪದಕರು

ಕರ್ನಾಟಕದಲ್ಲಿ ತಮಿಳು ಭಾಷಿಕರು ಸುಮಾರು 1 ಕೋಟಿಗೂ ಮಿಗಿಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಆನೇಕಲ್, ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ರಾಜಾಜಿನಗರ, ಯಶವಂತಪುರ ಹಾಗೂ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಮೈಸೂರು, ಹನೂರು, ಚಾಮರಾಜನಗರ, ಕೊಳ್ಳೇಗಾಲ, ಹಾಗೂ ಕೆಜಿಎಫ್ ಮುಂತಾದ 23 ಕ್ಷೇತ್ರಗಳಲ್ಲಿ ತಮಿಳರ ಮತಗಳೇ ನಿರ್ಣಾಯಕ.

ದಶಕಗಳ ಹಿಂದೆ ಈ ಕ್ಷೇತ್ರಗಳಲ್ಲಿ ತಮಿಳುನಾಡು ಮೂಲದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ದಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಎನ್‌ಡಿಎ ಹಾಗೂ ಯೂಪಿಎ ಮೈತ್ರಿ ಪಕ್ಷಗಳ ಕೋರಿಕೆಯ ಮೇರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಇಲ್ಲಿನ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಚುನಾವಣೆಯಿಂದ ಹಿಂದೆ ಸರಿದವು.

ಯೂಪಿಎ ಮೈತ್ರಿ ಕೂಟದಲ್ಲಿರುವ ಡಿಎಂಕೆ ಮತ್ತು ಸಿದಂಬರಂ ಲೋಕಸಭಾ ಸದಸ್ಯ ತೋಲ್ ತಿರುಮಾವಳವನ್ ನೇತೃವದ “ವಿಡುದಲೈ ಚಿರುತ್ತೈಗಳ್” ಪಕ್ಷಕ್ಕೆ ಕರ್ನಾಟಕದಲ್ಲಿ ಶಾಖೆಗಳಿವೆ. ಮತ್ತು ಅಪಾರವಾದ ಕಾರ್ಯಕರ್ತರಿದ್ದಾರೆ. ವಿಚಾರವಾದಿ ಪೆರಿಯಾರ್ ರವರ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ಆದರೆ, ಎನ್‌ಡಿಎ ಮೈತ್ರಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷವು, ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಪಳನಿಸ್ವಾಮಿ, ಒ.ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಮುಂತಾದವರ ನಾಯಕತ್ವದ ಕಚ್ಚಾಟದಿಂದ ನಾಲ್ಕು ಭಾಗಗಳಾಗಿ ಹೊಡೆದೋಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಕೂಟದಲ್ಲಿರುವ ಬಿಜೆಪಿ ಈಗ ಹೊರಗೆ ನಿಂತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಬಾಯಿಗೆ ಬಂದಂತೆ ವಿಮರ್ಶೆ ಮಾಡಿಕೊಂಡು ತಿರುಗಾಡುತ್ತಿದೆ. ಈರೋಡು ಉಪ ಚುನಾವಣೆಯಿಂದ ಎಐಎಡಿಎಂಕೆ ಮತ್ತು ತಮಿಳುನಾಡು ಬಿಜೆಪಿಯ ಸಂಬಂಧ ಅಷ್ಟೇನು ಸರಿಯಾಗಿಲ್ಲ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಆಡಳಿತ ರೂಡ ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲೇ ಮಿತ್ರ ಪಕ್ಷವಾದ ಎಐಎಡಿಎಂಕೆ ಪಕ್ಷದ ನಾಯಕರುಗಳನ್ನೂ ವಿಮರ್ಶೆ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ದಿನನಿತ್ಯ ಪತ್ರಿಕೆಗಳಲ್ಲಿ, ಟಿ.ವಿ.ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಮಾದ್ಯಮಗಳಲ್ಲಿ ಸುದ್ದಿಯಾಗಬೇಕು ಎಂಬುದಕ್ಕಾಗಿ ಸಾಕ್ಷ್ಯದಾರ ವಿಲ್ಲದ ವಿಷಯಗಳನ್ನು ಮುನ್ನಲೆಗೆ ತಂದು ಅಣ್ಣಾಮಲೈ ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ದಿಎಂಕೆ ನಾಯಕರು ಹೇಳುತ್ತಿದ್ದಾರೆ. 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿ ಪಕ್ಷವು ಸುಮಾರು 2.62% ಮತಗಳನ್ನು ಮಾತ್ರವೇ ಪಡೆದಿತ್ತು. ಆದರೆ, ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರಬಲವಾದ ವಿರೋಧ ಪಕ್ಷ ನಾವೇ ಎಂದು ಎಲ್ಲಡೆಯೂ ಹೇಳಿಕೊಂಡು ಬರುತ್ತಿದ್ದಾರೆ. ತನ್ನನ್ನು ಎಂಜಿಆರ್, ಜಯಲಲಿತಾ ಹಾಗೂ ಕರುಣಾನಿಧಿ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿ ಎಲ್ಲರ ನಗೆಪಾಟಿಗೆ ಕಾರಣರಾಗಿದ್ದಾರೆ.

‘ರಫೇಲ್ ಕೈಗಡಿಯಾರದ ಬಿಲ್ಲಿನ ವಿಚಾರದಲ್ಲಿ ನಕಲಿ ರಶೀದಿಯನ್ನು ತೋರಿಸಿ, ದಿನಕ್ಕೊಂದು ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ಜನ ಆಕ್ರೋಶವನ್ನು ವ್ಯಕ್ತಪಡಿಸಿ, ಶೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಮೀಮ್ಸ್ ಗಳನ್ನು ಹಾಕಿ ಕೀಟಲೆ ಮಾಡುತ್ತಿರುವುದು ದಿನನಿತ್ಯದ ಟ್ರೆಂಡಿಂಗ್ ಆಗಿದೆ. ‘ರಫೇಲ್ ವಾಚ್‌ಗೆ ಬಿಲ್ಲನ್ನು ಕೇಳಿದರೆ, ಅದಕ್ಕೆ ಪ್ರತಿಯುತ್ತರವಾಗಿ ಡಿಎಂಕೆ ಸರ್ಕಾರದ ಭ್ರಷ್ಟಾಚಾರಗಳನ್ನು ಏಪ್ರಿಲ್ ಒಂದರಂದು ಬಯಲುಗೊಳಿಸುತ್ತೇನೆ ಎಂದು ಹೇಳಿ, ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕೆಲವರ ಆಸ್ತಿ ಪಟ್ಟಿಯನ್ನು ತೋರಿಸಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಮಂತ್ರಿಮಂಡಲದ ಸಹದ್ಯೋಗಿಗಳು ರೂ.1,343,170,000,000 ಕೋಟಿಯಷ್ಟು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಹೇಳುತ್ತಿದ್ದಾರೆ’ ಎಂದು ಅಲ್ಲಿಂದ ವರದಿಗಳು ಹೇಳುತ್ತಿದೆ. ಇದನ್ನೇ ಕಾಯುತ್ತಿದ್ದ ಡಿಎಂಕೆ ಪಕ್ಷವು ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿಯ ಮೂಲಕ ತಕ್ಷಣ ಅಣ್ಣಮಲೈಗೆ ಲೀಗಲ್ ನೋಟೀಸ್ ಕಳುಹಿಸಿ, ‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅವರ ಕುಟುಂಬ ಸದಸ್ಯರು ಮತ್ತು ಡಿಎಂಕೆ ನಾಯಕರ ವಿರುದ್ಧ ಇತ್ತೀಚಿಗೆ ಮಾಡಿದ ಭಾಷಣ ಮತ್ತು ಭ್ರಷ್ಟಾಚಾರ ಆರೋಪಗಳಿಗಾಗಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು 48 ಗಂಟೆಗಳ ಒಳಗೆ 500 ಕೋಟಿ ರೂಪಾಯಿಗಳ ನಷ್ಟವನ್ನು ಪಾವತಿಸಬೇಕು. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಲೀಗಲ್ ನೋಟಿಸ್ ಕಳುಹಿಸಿತು.

ಕೆಲವು ದಿನಗಳ ಹಿಂದೆ ಮಾತನಾಡಿದ ಅಣ್ಣಾಮಲೈ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿಯನ್ನು ಮುಂದುವರಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಗರ್ವದಿಂದ ಕೇಂದ್ರದ ಬಿಜೆಪಿ ವರಿಷ್ಠರಿಗೆ ಬೆದರಿಕೆಯ ಸಂದೇಶವನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮುಂದಿನ ಚುನಾವಣೆ ಎಐಎಡಿಎಂಕೆ ಜೊತೆಯಲ್ಲೇ’ ಎಂದು ಪ್ರತಿಕ್ರಿಯೆ ನೀಡಿದರು. ಇಷ್ಟಕ್ಕೆ ತನ್ನಗಾಗದ ಅಣ್ಣಾಮಲೈ ‘ಡಿಎಂಕೆ ಮಾತ್ರವಲ್ಲ ತಮಿಳುನಾಡಿನಲ್ಲಿ ಅಧಿಕಾರ ಚಲಾಯಿಸಿದ ಹಿಂದಿನ ಪಕ್ಷಗಳ ಭ್ರಷ್ಟಾಚಾರವನ್ನೂ ಬಯಲಿಗೆಳೆಯುತ್ತೇನೆ’ ಎಂದು ಎಐಎಡಿಎಂಕೆ ಪಕ್ಷಕ್ಕೆ ದಮಕಿ ಹಾಕಿದರು. ಇದರಿಂದ ಎಐಎಡಿಎಂಕೆ ಮತ್ತು ಬಿಜೆಪಿಯ ಸಂಬಂಧ ಅಳಸಿಹೋಗಿರುವುದು ಸುಳ್ಳೇನಲ್ಲ. ಇವರ ನಡವಳಿಕೆಯಿಂದ ಬೇಸತ್ತ ತಮಿಳುನಾಡು ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು ಸುಮಾರು ಜನ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎನ್‌ಡಿಎ ಮಿತ್ರ ಪಕ್ಷವಾದ ಎಐಎಡಿಎಂಕೆ, ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯವಿರುವ ಕಡೆಗಳಲ್ಲಿ ಸ್ಪರ್ದಿಸಲು 4 ರಿಂದ 6 ಕ್ಷೇತ್ರಗಳನ್ನು ಒದಗಿಸಿಕೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕೇಳಿತ್ತು. ಆದರೆ ಇದಕ್ಕೆ ಅಮಿತ್ ಶಾ ಒಪ್ಪಿಗೆ ನೀಡಲಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಎಐಎಡಿಎಂಕೆ ಕೊನೆಯ ಕ್ಷಣದಲ್ಲಿ ಪುಲಿಕೇಶಿನಗರದಲ್ಲಿ ತಮ್ಮ ಅಭ್ಯರ್ಥಿ ಟಿ.ಅನ್ಬರಸನ್ ಅವರನ್ನು ಕಣಕ್ಕಿಳಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತ ಪಡಿಸಿತು. ಈಗ ಬಿಜೆಪಿ ವರಿಷ್ಠರ ಕೋರಿಕೆಯ ಮೇರೆಗೆ ಅಲ್ಲಿ ತಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದುಕೊಂಡಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿರುವ  ಬಿಜೆಪಿಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾದ ಅಣ್ಣಾಮಲೈ ಅವರಿಂದ ತಮಿಳರ ಪ್ರಾಬಲ್ಯವಿರುವ 23 ಕ್ಷೇತ್ರಗಳಲ್ಲಿ ತಮಿಳರ ಮತಗಳು ಕೈತಪ್ಪಿ ಹೋಗುವುದು ಬಹುತೇಕ ಖಚಿತವಾಗಿದೆ. ಕಾರಣ ಇಲ್ಲಿನ ಬಹುಪಾಲು ತಮಿಳರು ಇನ್ನು ಡಿಎಂಕೆ, ಎಐಎಡಿಎಂಕೆ, ವಿಡುದಲೈ ಚಿರುತ್ತೈಗಳ್, ದ್ರಾವಿಡರ್ ಕಳಗಂ ಹಾಗೂ ದ್ರಾವಿಡರ್ ವಿಡುದಲೈ ಕಳಗಂ ಮೂಂತಾದ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಬೆರಳೆನಿಕೆಯ ತಮಿಳರೆ ಇದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿಎಂಕೆ ವರಿಷ್ಠ ದಿವಂಗತ ಎಂ.ಕರುಣಾನಿಧಿ ಅವರ ಆಡಳಿತಾವದಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದರಿಂದ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮೇಲೆ ಇಲ್ಲಿನ ತಮಿಳರು ಅಪಾರವಾದ ಗೌರವವನ್ನು ಇಟ್ಟಿದ್ದರು. ಈಗ ಅಣ್ಣಾಮಲೈಯಿಂದ ಅದೂ ಇಲ್ಲದಂತೆ ಆಗಿದೆ. ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವಾದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಹಾಗೂ ವಿರೋಧ ಪಕ್ಷವಾದ ಎಐಎಡಿಎಂಕೆಯನ್ನು ಕಟುವಾಗಿ ಟೀಕಿಸಿಕೊಂಡು ಇಲ್ಲಿಗೆ ಬಂದು ತಮಿಳರಲ್ಲಿ ಮತ ಕೇಳಿದರೆ ಯಾರುತಾನೇ ಓಟು ನೀಡುತ್ತಾರೆ.