ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Bus Archives » Dynamic Leader
October 23, 2024
Home Posts tagged Bus
ರಾಜಕೀಯ

ಮಂಗಳೂರು: ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದಾಗಿ ಕಾಂಗ್ರೆಸ್ ಪಕ್ಷವು ಇಂದು ಐದನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಮೊದಲ 4 ಗ್ಯಾರಂಟಿ ಯೋಜನೆಯನ್ನು ಸೇರಿ, ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂಬ ಭರವಸೆಯನ್ನು ಸಹ ನೀಡಿದೆ.

ಮಂಗಳೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಮಾವೇಶದಲ್ಲಿ ರಾಹುಲ್‌ ಗಾಂಧಿ 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದರು. ಬಳಿಕ ಮಾತನಾಡಿ ರಾಹುಲ್‌ ಗಾಂಧಿ, “ಮೋದಿ ಅವರೇ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ”? ಎಂದು ಸವಾಲು ಹಾಕಿದರು.

ಸಾಂದರ್ಭಿಕ ಚಿತ್ರ

ಈ ಹಿಂದೆ ಕಾಂಗ್ರೆಸ್ಪಕ್ಷ ಘೋಷಿಸಿದ ನಾಲ್ಕು ಗ್ಯಾರಂಟಿಗಳು:
ಗ್ಯಾರಂಟಿ-1: ಭಾಗ್ಯಜ್ಯೋತಿ ಯೋಜನೆಯಲ್ಲಿ ರಾಜ್ಯದಲ್ಲಿ ಪ್ರತಿ ಮನೆಗೂ 200 ಯೂನಿಟ್‌ನಷ್ಟು ಉಚಿತವಾಗಿ ವಿದ್ಯುತ್‌ ನೀಡಲಾಗುವುದು.

ಗ್ಯಾರಂಟಿ-2: ಗೃಹಲಕ್ಷ್ಮೀ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತಿ ತಿಂಗಳು ರೂ.2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.
ಗ್ಯಾರಂಟಿ-3: ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ ಒಬ್ಬ ವ್ಯಕ್ತಿಗೆ 10 ಕೆ.ಜಿ ಅನ್ನಭಾಗ್ಯ ಅಕ್ಕಿ ನೀಡಲಾಗುವುದು.
ಗ್ಯಾರಂಟಿ-4: ಯುವ ನಿಧಿ ಯೋಜನೆಯಲ್ಲಿ ಪದವೀಧರ ನಿರುದ್ಯೋಗ ಯುವಜನರಿಗೆ ಪ್ರತಿ ತಿಂಗಳು 3 ಸಾವಿರ ಭತ್ಯೆ, ಡಿಪ್ಲೊಮೋ ಮುಗಿಸಿದವರಿಗೆ ಒಂದೂವರೆ ಸಾವಿರ ರೂಪಾಯಿ ಭತ್ಯೆ ನೀಡುವುದಾಗಿ ಭರವಸೆ ನೀಡಿದೆ.

“ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 40% ಕಮೀಷನ್ ಪಡೆಯುವ ಬಿಜೆಪಿಗೆ‌ 40 ಸೀಟ್ ಅಷ್ಟೇ ನೀಡಿ” ಎಂದರು.

“ಇಂದು ಯಾವ ಪರಿಸ್ಥಿತಿ ಇದೆ ಎಂದರೆ, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ; ಏನೇ ಆದರೂ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. 40 ಕೋಟಿ ಜನ ಮತ್ತೆ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ದೇಶದ ಶೇ.1ರಷ್ಟು ಜನರ ಬಳಿ ದೇಶದ 40% ಸಂಪತ್ತು ಇದೆ. 90 ಲಕ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮುಚ್ಚಿವೆ ಇದು ಬಿಜೆಪಿಯ ವಿಕಾಸ. ಭ್ರಷ್ಟಾಚಾರ 40%, ನಿರುದ್ಯೋಗ, ಬೆಲೆ ಏರಿಕೆಯೆ ಬಿಜೆಪಿಯ ಸಾಧನೆ” ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.