ಡಿ.ಸಿ.ಪ್ರಕಾಶ್
ಬಿಜೆಪಿ ಆಡಳಿತದಲ್ಲಿ ನಿರ್ಮಾಣ ದೋಷಗಳಿಗೆ ಕೊರತೆ ಇಲ್ಲ ಎಂಬುದು ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಅದರಲ್ಲೂ ವಿಶೇಷಚಾಗಿ ನಿರ್ಮಾಣ ಪೂರ್ಣಗೊಂಡು ವರ್ಷ ಕಳೆಯುವುದರೊಳಗೆ ಕಟ್ಟಡಗಳು ಕುಸಿದು ಬೀಳುವುದು, ನಿರ್ಮಾಣದಲ್ಲಿ ಲೋಪಗಳು ಕಂಡುಬರುವುದೆಲ್ಲ ತೀರಾ ಸಾಮಾನ್ಯ ಸುದ್ದಿಗಳಾಗಿವೆ.
ಭಾರತದ ನೂತನ ಸಂಸತ್ತಿನ ಮೇಲ್ಛಾವಣಿಯಲ್ಲಿ ನೀರಿನ ಸೋರಿಕೆ, ಉತ್ತರ ಪ್ರದೇಶದ ರಾಮಮಂದಿರದ ಮೇಲ್ಛಾವಣಿಯಲ್ಲಿ ನೀರು ಸೋರಿಕೆ, ದೆಹಲಿಯ ಸುರಂಗದಲ್ಲಿ ನೀರಿನ ಸೋರಿಕೆ, ಮಹಾರಾಷ್ಟ್ರ ಮೇಲ್ಸೇತುವೆಯಲ್ಲಿ ಬಿರುಕುಗಳು, ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ ಮುಂತಾದ ಘಟನೆಗಳು ಇದಕ್ಕೆ ಉದಾಹರಣೆಗಳಾಗಿ ಹೇಳಬಹುದು.
ಮೇಲಿನ ಪ್ರತಿ ನಿರ್ಮಾಣಕ್ಕೂ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಇದುವೇ ಬಿಜೆಪಿ ಪ್ರಸ್ತಾಪಿಸುತ್ತಿರುವ ನಿರ್ಮಾಣ ಅಭಿವೃದ್ಧಿ ಆಗಿದೆ. ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ನಿರ್ಮಾಣ ದೋಷವೆಂದರೆ ಅದು ಮಳೆ, ಗಾಳಿಯನ್ನೂ ಸಹ ತಡೆದುಕೊಳ್ಳಲು ಸಾಧ್ಯವಿಲ್ಲದ ಮಹಾರಾಷ್ಟ್ರದಲ್ಲಿ ನಿರ್ಮಾನಗೊಂಡಿರುವ ಛತ್ರಪತಿ ಶಿವಾಜಿಯ ಪ್ರತಿಮೆಯಾಗಿದೆ.
35 ಅಡಿ ಎತ್ತರದ ಪ್ರತಿಮೆಗೆ ಸರ್ಕಾರ ಸುಮಾರು 3,600 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸರ್ಕಾರ ಖರ್ಚು ಮಾಡಿದೆ ಎಂದರೆ ಜನ ತೆರಿಗೆಯಾಗಿ ಕೊಟ್ಟ ಹಣವನ್ನು ಖರ್ಚು ಮಾಡಿದೆ ಎಂದರ್ಥ. ಈ ಮೂಲಕ 8 ತಿಂಗಳ ಹಿಂದೆ 3,600 ಕೋಟಿ ರೂ.ಗಳ ಜನರ ಹಣದಲ್ಲಿ ನಿರ್ಮಿಸಲಾದ ಈ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮೈತ್ರಿಕೂಟದಲ್ಲಿರುವ ಶಿವಸೇನೆ (ಶಿಂಧೆ) ಪಕ್ಷದ ನಾಯಕ ಏಕನಾಥ್ ಶಿಂಧೆ ಅವರ ಒತ್ತಾಯದ ಮೇರೆಗೆ ಪ್ರತಿಮೆ ನಿರ್ಮಾಣದ ಟೆಂಡರ್ ಕಾರ್ಯವನ್ನು ಜೈದೀಪ್ ಆಪ್ತೆ (Jaideep Apte) ಅವರಿಗೆ ನೀಡಲಾಯಿತು.
ಕೇವಲ 24 ವರ್ಷ ವಯಸ್ಸಿನ ಜೈದೀಪ್ ಆಪ್ತೆ, ಏಕನಾಥ್ ಶಿಂಧೆ ಅವರ ಆಪ್ತ ಗೆಳೆಯನ ಅರ್ಹತೆ ಹೊಂದಿರುವುದನ್ನು ಬಿಟ್ಟರೆ ಅವರಿಗೆ ಮೂರ್ತಿ ತಯಾರಿಕೆಯಲ್ಲಿ ಪೂರ್ವಾನುಭವವಿಲ್ಲ ಎಂಬ ಆರೋಪ ಬಲವಾಗಿ ಕೇಳ ತೊಡಗಿದೆ.
ಹೀಗೆ ಸ್ನೇಹಿತರು, ಪರಿಚಿತರು, ದಾನಿಗಳು ಎಂಬ ಕಾರಣಕ್ಕೆಲ್ಲ ಟೆಂಡರ್ ನೀಡಿ, ಪೂರ್ವಾನುಭವವಿಲ್ಲದ ವ್ಯಕ್ತಿಗಳು ನಿರ್ಮಿಸುವ ನಿರ್ಮಾಣಗಳು ವರ್ಷ ಕಳೆಯುವುದರೊಳಗೆ ಕುಸಿದು ಬೀಳುತ್ತಿರುವುದು ಕೇಂದ್ರ ಬಿಜೆಪಿ ಸರ್ಕಾರದ ನಿರ್ಮಾಣ ವೈಫಲ್ಯವನ್ನು ತೋರಿಸುತ್ತಿದೆ.
ಹಾಗಾಗಿ ಸುಮಾರು 3,600 ಕೋಟಿ ರೂ.ಗಳನ್ನು ವ್ಯರ್ಥಮಾಡಿ, ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಿಸಿದ NDA ಸರ್ಕಾರವೇ ಪ್ರತಿಮೆಯ ಧ್ವಂಸಕ್ಕೆ ಹೊಣೆಯಾಗಬೇಕು.