ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Chief Justice Archives » Dynamic Leader
October 23, 2024
Home Posts tagged Chief Justice
ದೇಶ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕದ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಅಧಿಕಾರ ಸಮಿತಿಯಲ್ಲಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕೇಂದ್ರ ಸಂಪುಟ ಸಚಿವರನ್ನು ನೇಮಿಸಲು ಹೊಸ ಕಾನೂನನ್ನು ಜಾರಿಗೆ ತರಲಾಯಿತು.

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಮೂಲಕ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಈ ಹೊಸ ಕಾನೂನಿನ ವಿರುದ್ಧ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಮತ್ತು ಇತರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೊಸ ಕಾನೂನಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು.

ಈ ಪ್ರಕರಣವು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠದಲ್ಲಿ ಇಂದು ವಿಚಾರಣೆಗೆ ಬಂದಿತು. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದರು. ‘ದಯವಿಟ್ಟು ಈ ಕಾನೂನಿಗೆ ಮಧ್ಯಂತರ ತಡೆಯಾಜ್ಞೆ ನೀಡಿ. ಇದು ಅಧಿಕಾರ ವಿಭಜನೆಯ ಪದ್ಧತಿಗೆ ವಿರುದ್ಧವಾಗಿದೆ’ ಎಂದು ಅವರು ವಾದಿಸಿದರು.

ಆಗ ಮಾತನಾಡಿದ ನ್ಯಾಯಮೂರ್ತಿಗಳು, ‘ಪ್ರತಿವಾದಿಗಳ ವಾದ ಆಲಿಸದೆ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಅವರಿಗೆ ನೋಟಿಸ್ ಕಳುಹಿಸುತ್ತೇವೆ’ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ಪ್ರತಿಯನ್ನು ಕೇಂದ್ರ ಸರ್ಕಾರದ ವಕೀಲರಿಗೆ ನೀಡುವಂತೆ ವಕೀಲ ವಿಕಾಸ್ ಸಿಂಗ್‌ಗೆ ನ್ಯಾಯಮೂರ್ತಿಗಳು ಸೂಚಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಕಳುಹಿಸುವಂತೆಯೂ ಆದೇಶಿಸಿದರು.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಮಾರ್ಚ್‌ನಲ್ಲಿ ಆದೇಶಿಸಿತ್ತು. ಆದರೆ ಹೊಸ ಕಾನೂನಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಕೈಬಿಡಲಾಗಿದೆ. ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಮಂತ್ರಿ ಸೂಚಿಸಿದ ಕೇಂದ್ರ ಸಚಿವರು ಉಪಸ್ಥಿತರಿರುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ ಮೋದಿ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

1,268 ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಲಾಗಿದೆ. ಇದೊಂದು ಐತಿಹಾಸಿಕವಾದ ಪ್ರಯತ್ನವಾಗಿದೆ. ಇದು ಕನ್ನಡ ಸೇರಿದಂತೆ ಇತರ ರಾಜ್ಯ ಭಾಷೆಗಳ ಹಕ್ಕುಗಳನ್ನು ಎತ್ತಿಹಿಡಿದಂತಾಗಿದೆ. ಈ ಮಹತ್ತರವಾದ ಕಾರ್ಯವನ್ನು ಮಾಡಲು ಇಷ್ಟು ವರ್ಷಗಳು ಕಾಯಬೇಕಿತ್ತೆ? ಎಂದು ಭಾವಿಸಿಕೊಂಡರು, ಅಂತಿಮವಾಗಿ ಆಗಿದೆ ಎಂಬುದೇ ನಮಗೆ ಸಂತೋಷ!

ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆದ ಪ್ರಮುಖ ಬದಲಾವಣೆ ಇದಾಗಿದೆ. ಈ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ‘ಸುಪ್ರೀಂ ಕೋರ್ಟ್ ತೀರ್ಪುಗಳನ್ನು ರಾಜ್ಯ ಭಾಷೆಗಳಲ್ಲಿ ಪ್ರಕಟಿಸಬೇಕು’ ಎಂದು ಬಹಿರಂಗವಾಗಿ ಹೇಳಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಎಲ್ಲಾ ನಾಯಕರೂ ಸ್ವಾಗತಿಸಿದ್ದರು.

ತೀರ್ಪುಗಳನ್ನು ರಾಜ್ಯ ಭಾಷೆಗಳಿಗೆ ಭಾಷಾಂತರಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎಸ್.ಓಕಾ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು ರಚಿಸಲಾಗಿತ್ತು. ‘ಅವರೆಲ್ಲರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

ಸುಪ್ರೀಂ ಕೋರ್ಟ್‌ನ ಎಲೆಕ್ಟ್ರಾನಿಕ್ ವಿಭಾಗದ ಪರವಾಗಿ 34 ಸಾವಿರ ತೀರ್ಪುಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಈ ಎಲ್ಲಾ ತೀರ್ಪುಗಳನ್ನು ಸಾರ್ವಜನಿಕರ ಉಚಿತ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದ ಮೊದಲ ಹಂತವಾಗಿ 1268 ತೀರ್ಪುಗಳು ಕನ್ನಡ ಸೇರಿದಂತೆ ಇತರ ರಾಜ್ಯ ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಭಾರತದ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ 22 ಭಾಷೆಗಳಲ್ಲಿ ಅವುಗಳನ್ನು ಪ್ರಕಟಿಸಲಾಗುವುದು. ‘ಸುಪ್ರೀಂ ಕೋರ್ಟ್‌ನ ಎಲ್ಲಾ ತೀರ್ಪುಗಳನ್ನು ರಾಜ್ಯ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸಲಾಗುವುದು. ಆದ್ದರಿಂದ ವಕೀಲರು ಸುಪ್ರೀಂ ಕೋರ್ಟ್‌ಗೆ ಸಹಕರಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿಕೊಂಡಿದ್ದಾರೆ. ಅದರಂತೆ ಗಣರಾಜ್ಯೋತ್ಸವದಂದು ತೀರ್ಪುಗಳನ್ನು ಪ್ರಕಟಿಸಲಾಗಿದೆ.

ಕಳೆದ ಏಪ್ರಿಲ್ ನಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ‘ಪ್ರಾದೇಶಿಕ ಭಾಷೆಗಳನ್ನು ನ್ಯಾಯಾಲಯದ ಭಾಷೆಯನ್ನಾಗಿ ಮಾಡುವುದು ಮುಖ್ಯ. ಏಕೆಂದರೆ, ದಾವೆದಾರರು ನ್ಯಾಯದ ಆಡಳಿತದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಯಾರಿಗೂ ಅರ್ಥವಾಗದ ಮಂತ್ರ ಪಠಣದಂತೆ ಇರಬಾರದು’ ಎಂದರು. (It is important that regional languages are made languages of the court because the litigant must understand the process of administration of justice. It should not be like chanting of mantra that no one understands.)

ಈಗ ಮೊದಲ ಹಂತದಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ತೀರ್ಪು ಪ್ರಕಟಿಸಲಾಗಿದೆ. ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವವಾದದ್ದು.