ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Christmas Archives » Dynamic Leader
December 3, 2024
Home Posts tagged Christmas
ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಕ್ರಿಸ್‌ಮಸ್ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಸೇವೆ ಮಾಡುವಲ್ಲಿ ಕ್ರಿಶ್ಚಿಯನ್ ಸಮುದಾಯದ ಕೊಡುಗೆಯನ್ನು ಭಾರತವು ಹೆಮ್ಮೆಯಿಂದ ಗುರುತಿಸುತ್ತದೆ ಎಂದು ಹೇಳಿದರು. ಇದು ಚುನಾವಣಾ ಕಾಲದಲ್ಲಿ ಅವರಿಗಾದ ತಾತ್ಕಾಲಿಕ ‘ಜ್ಞಾನೋದಯ’ ಅಷ್ಟೇ.

ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಆಗಿರುವ ತಾರತಮ್ಯ ಮತ್ತು ಅನ್ಯಾಯ ಸಣ್ಣದೇನಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರು ಹೆಮ್ಮೆಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಈಗ ಬೊಬ್ಬಿಡುತ್ತಿದ್ದಾರೆ. ಆದರೆ, ಅವರು ಈ ಸೇವೆಯನ್ನು ಮತಾಂತರಗೊಳಿಸಲಿಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಆರೆಸ್ಸೆಸ್-ಬಿಜೆಪಿ ಪರಿವಾರದವರು ಇನ್ನೂ ದೂಷಣೆ ಮಾಡುತ್ತಿದ್ದಾರೆ.

ಗ್ರಹಾಂ ಸ್ಟೇನ್ಸ್ ಮತ್ತು ಕುಟುಂಬ

ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಹಿಂದುತ್ವ ಪರಿವಾರದವರು ಸಜೀವ ದಹನ ಮಾಡಿದರು. ಆ ಹಂತಕರನ್ನು ಆರ್‌ಎಸ್‌ಎಸ್ ಪರಿವಾರ ರಕ್ಷಣೆ ಮಾಡಿತು. ಬುಡಕಟ್ಟು ಜನರ ಸೇವೆ ಮಾಡಿದ ಪಾದ್ರಿ ಸ್ಟಾನ್ ಸ್ವಾಮಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ತಳ್ಳಿತು. ಅವರು ಜಾಮೀನು ಸಿಗದೆ ಜೈಲಿನಲ್ಲೇ ತಮ್ಮ ಕೊನೆಯುಸಿರೆಳೆದರು. ಇದು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಅನುಮೋದಿಸುವ ಸಂಕೇತವಾ?

ಕರ್ನಾಟಕದಲ್ಲಿ ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೆ ತಂದು ಕ್ರೈಸ್ತರಿಗೆ ಅನಾವಶ್ಯಕವಾಗಿ ಕಿರುಕುಳ ನೀಡಲಾಯಿತು. “ಮತಾಂತರ ಮಾಡುತ್ತಿದ್ದಾರೆ; ಬೈಬಲ್ ಹಂಚುತ್ತಿದ್ದಾರೆ” ಎಂದು ಸುಳ್ಳು ಹೇಳಿಕೊಂಡು ಹಲವು ಚರ್ಚ್ ಗಳ ಮೇಲೆ ಹಿಂದೂ ಪರಿವಾರದವರಿಂದ ದಾಳಿ ಮಾಡಲಾಯಿತು. ಪೊಲೀಸರ ಸಹಭಾಗಿತ್ವದಲ್ಲೇ ಹಲವು ಚರ್ಚ್ ಗಳಿಗೆ ನುಗ್ಗಿ ದಾಂಧಲೆ ಮಾಡಿದ ವರದಿಗಳೂ ಇವೆ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಯುತ್ತಿದೆ. ಕ್ರಿಶ್ಚಿಯನ್ನರಲ್ಲಿ ಬಿಜೆಪಿ ಸ್ವೀಕಾರ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ.

ಫಾದರ್ ಸ್ಟಾನ್ ಸ್ವಾಮಿ

ಚುನಾವಣೆಗೂ ಮುನ್ನ ಮಣಿಪುರದಲ್ಲಿ ಬಿಜೆಪಿ ಒಕ್ಕೂಟ ಆಡಳಿತ ನಡೆಸಿತ್ತು. ಮುಖ್ಯಮಂತ್ರಿಯ ಬೆಂಬಲದೊಂದಿಗೆ ಕ್ರೈಸ್ತ ಜನಾಂಗದ ಕುಕಿಗಳ ವಿರುದ್ಧ ಮತಾಂಧ ಮತ್ತು ಜನಾಂಗೀಯ ದಾಳಿಯನ್ನು ಪ್ರಾರಂಭಿಸಲಾಯಿತು. ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ, ಬೀದಿಯಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈಗಲೂ ಆ ರಾಜ್ಯದಲ್ಲಿ ಕ್ರಿಶ್ಚಿಯನ್ ಜನರ ಮೇಲೆ ದಾಳಿ ಮುಂದುವರಿದಿದೆ. ಆ ರಾಜ್ಯದ ಕಡೆ ತಿರುಗಿಯೂ ನೋಡದ ಪ್ರಧಾನಿ ಈ ರೀತಿ ಮಾತನಾಡುತ್ತಿರುವುದು ಆಘಾತಕಾರಿಯಾಗಿದೆ. ಆದರೆ ಈ ರೀತಿ ಮಾತನಾಡುವುದು ಅವರಿಗೆ ಹೊಸದೇನಲ್ಲ.

ಮಾತು ಒಂದು, ಕ್ರಿಯೆ ಇನ್ನೊಂದು ಆರೆಸ್ಸೆಸ್ ಸಂಘಟನೆಯ ಲಕ್ಷಣ. ಆ ಶಾಲೆಯಲ್ಲಿ ಓದಿದ ನರೇಂದ್ರ ಮೋದಿ ಹೀಗೆ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಅವರ ಕ್ರಿಸ್‌ಮಸ್ ದಿನದ ಭಾಷಣ ಎಷ್ಟು ಸುಳ್ಳಾಗಿತ್ತು ಎಂಬುದು ಕ್ರೈಸ್ತರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವರ ಮಾತಿನಿಂದಲ್ಲ, ಅವರು ಅನುಭವಿಸುವ ಯಾತನೆಗಳ ಆಧಾರದ ಮೇಲೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ದೇಶ

ನವದೆಹಲಿ: “ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ಕ್ರೈಸ್ತ ಸಮುದಾಯ ಮುಂಚೂಣಿಯಲ್ಲಿದೆ. ಅವರು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಮಾಡಲು ಅನೇಕ ಶಾಲೆಗಳನ್ನು ನಡೆಸುತ್ತಿದ್ದಾರೆ” ಎಂದು ಕ್ರಿಶ್ಚಿಯನ್ನರಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದೆಹಲಿಯ ತಮ್ಮ ನಿವಾಸದಲ್ಲಿ ಪಾದ್ರಿಗಳು ಸೇರಿದಂತೆ ಪ್ರಮುಖ ಕ್ರಿಶ್ಚಿಯನ್ ಧಾರ್ಮಿಕ ಮುಖಂಡರುಗಳನ್ನು ಭೇಟಿ ಮಾಡಿದರು. ಅವರ ನಡುವೆ ಮಾತನಾಡಿದ ಮೋದಿ ಅವರು,”ಕ್ರಿಸ್‌ಮಸ್ ಹಬ್ಬದಂದು ವಿಶ್ವದ ಜನರಿಗೆ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಶುಭಾಶಯಗಳು. ಇಂತಹ ವಿಶೇಷವಾದ ಶುಭದಿನದಂದು ನೀವೆಲ್ಲರೂ ನನ್ನ ನಿವಾಸಕ್ಕೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಕ್ರಿಸ್ಮಸ್ ಹಬ್ಬ ಬಡವರ ಕಲ್ಯಾಣಕ್ಕಾಗಿ. ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ಕ್ರೈಸ್ತ ಸಮುದಾಯ ಮುಂಚೂಣಿಯಲ್ಲಿದೆ.

ಕ್ರೈಸ್ತರು ಸಾಮಾಜಿಕ ನ್ಯಾಯದ ಪರ ನಿಂತಿರುವ ಜನರು. ಅವರು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಮಾಡಲು ಅನೇಕ ಶಾಲೆಗಳನ್ನು ನಡೆಸುತ್ತಿದ್ದಾರೆ. ದೇಶಕ್ಕೆ ನಿಮ್ಮ ಕೊಡುಗೆಯನ್ನು ಭಾರತ ಹೆಮ್ಮೆಯಿಂದ ಅನುಮೋದಿಸುತ್ತದೆ. ಕೆಲವು ವರ್ಷಗಳ ಹಿಂದೆ ಪೋಪ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದು ನನಗೆ ಬಹಳ ಸ್ಮರಣೀಯ ಕ್ಷಣವಾಗಿತ್ತು.

ನಾವು ಸಾಮಾಜಿಕ ಸಾಮರಸ್ಯ, ಜಾಗತಿಕ ಭ್ರಾತೃತ್ವ, ಹವಾಮಾನ ಬದಲಾವಣೆ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅಂತರ್ಗತ ಅಭಿವೃದ್ಧಿ ಕುರಿತು ಚರ್ಚಿಸಿದ್ದೇವೆ” ಎಂದು ಹೇಳಿದರು.