ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Cinema Archives » Dynamic Leader
November 21, 2024
Home Posts tagged Cinema
ಸಿನಿಮಾ

ಬೆಂಗಳೂರು: ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಅವರ ನೆನಪಿಗಾಗಿ ಜೀವಬಿಂಬ ಎಂಬ ಪುಸ್ತಕವನ್ನು ಹೊರತಂದಿದೆ. ಅದರ ಬಿಡುಗಡೆ ಸಮಾರಂಭ ಪ್ರೆಸ್‌ಕ್ಲಬ್ ಆವರಣದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ  ಪತ್ರಕರ್ತರ ಸಂಘದ ಅಧಿಕೃತ  ಜಾಲತಾಣವನ್ನು ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ಹಿರಿಯನಟ ದೇವರಾಜ್, ನಟಿ ಭಾವನಾ ರಾಮಣ್ಣ  ಉದ್ಘಾಟಿಸಿದರು. ವೇದಿಕೆಯಲ್ಲಿ ಮಾತನಾಡಿದ ನಟ ದೇವರಾಜ್ ‘ನಾಗೇಶ್ ಒಬ್ಬ  ಸರಳಜೀವಿ, ನನ್ನ ಮೊದಲ ಫೋಟೋಶೂಟ್ ಅವರೇ ಮಾಡಿದ್ದರು. ಅವರ, ನನ್ನ ಸ್ನೇಹ 35 ವರ್ಷದ್ದು ಎಂದು ಹೇಳಿದರು,  ನಟಿ ಭಾವನಾ ಮಾತನಾಡುತ್ತ  ನನ್ನ ಪ್ರಥಮ ಛಾಯಾಚಿತ್ರವನ್ನು ಕ್ಲಿಕ್ ಮಾಡಿದ್ದು ಡಿಸಿ, ಅದು ಮಯೂರದಲ್ಲಿ ಪ್ರಕಟವಾಗಿತ್ತು. ನನ್ನ ತಂದೆಯ ಜೊತೆ ಸಾಕಷ್ಟು ಬಾರಿ ಅವರ ಮನೆಗೆ ಹೋಗಿದ್ದೆ’ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.  

ಸಂಘದ ಅಧ್ಯಕ್ಷ ಬಿ.ಎನ್.ಸುಬ್ರಹ್ಮಣ್ಯ ಮಾತನಾಡುತ್ತ ‘ನಮ್ಮ ಸಂಘ ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿದೆ. ಸಂಘದ ಜಾಲತಾಣವನ್ನು ಗೆಳೆಯರಾದ ಚಂದ್ರಶೇಖರ್ ಮಾಡಿಕೊಟ್ಟಿದ್ದಾರೆ. ಸಂಘದ ಸದಸ್ಯತ್ವವನ್ನು ಅರ್ಹತೆ ಪರಿಗಣಿಸಿ ನೀಡಲಾಗುತ್ತದೆ. ನೇರವಾಗಿ ಯಾರಿಗೂ ಕೊಡುತ್ತಿಲ್ಲ. ಮುಂದಿನ ದಿನಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುವ ಆಶಯವಿದೆ’ ಎಂದರು.

ಕೊನೆಯಲ್ಲಿ ಮಾತನಾಡಿದ  ನಾಗಾಭರಣ,’ಬಹಳ ಅರ್ಥಪೂರ್ಣವಾಗಿ ಜೀವಬಿಂಬವನ್ನು ಬಿಡುಗಡೆ ಮಾಡಿದ್ದಾರೆ. ನನ್ನ ಸಿನಿಮಾ, ಜೀವನ ಪಯಣವನ್ನೂ ಸಹ ಡಿಸಿ ತನ್ನ ಬಿಂಬದಲ್ಲಿ ದಾಖಲಿಸಿ ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಪ್ರಗತಿ ಸ್ಟುಡಿಯೋ ಕಟ್ಟಿಕೊಟ್ಟಿದ್ದರೂ,.ಅದನ್ನು ಡಿಸಿ ಮುಂದುವರೆಸಿಕೊಟ್ಟಿದ್ದಾರೆ. ಆತ ಬಹುಮುಖ ವ್ಯಕ್ತಿತ್ವ ಹೊಂದಿದ ಬಿಂಬಗ್ರಾಹಿ, ಆತನಲ್ಲೊಂದು ತುಡಿತವಿತ್ತು. ಆತನಿಂದ ಬೆಳ್ಳಿಹೆಜ್ಜೆಯ ಸ್ವರೂಪ ಬೇರೆಯದೇ ರೂಪ ಪಡೆಯುತ್ತಿತ್ತು. ಆತ ದಾಖಲೆಗಳ ಸೃಷ್ಟಿಕರ್ತ. ತಪಸ್ಸನ್ನು ಮಾಡಿದಂಥ ವ್ಯಕ್ತಿ. ಲಕ್ಷಾಂತರ ಮನಸುಗಳಿಗೆ ಆತ ಬೇಕಾದವನಾಗಿ ಬದುಕಿದ್ದಾನೆಂದು ಡಿಸಿ ಸ್ಮರಿಸಿದ ನಂತರ, ಚಲನಚಿತ್ರ ಅಕಾಡೆಮಿ ಮಾಡಲಾಗದ ಹಲವು ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ. ಪತ್ರಕರ್ತರ ಸಂಘ ಹಿಂದೆಯೂ ಇತ್ತು. ನಾವೆಲ್ಲ ಆಗ ಬೇರೆಬೇರೆ ಕಾರಣಗಳಿಂದಾಗಿ ಪತ್ರಕರ್ತರ ಸಂಘವನ್ನು ಒಂದು ಮಾನದಂಡವಾಗಿ ಪರಿಗಣಿಸುತ್ತಿದ್ದೆವು’ ಎಂದು  ಹೇಳಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಮಾತನಾಡುತ್ತ ಅವರು ತಮ್ಮ ಹಾಗೂ ಡಿಸಿ ಜೊತೆಗಿನ ಒಡನಾಟದ ಸಂದರ್ಭವನ್ನು ನೆನಪು ಮಾಡಿಕೊಂಡರು. ಕಾರ್ಯಾಧ್ಯಕ್ಷರು ಹಾಗೂ ಕೃತಿಯ ಸಂಪಾದಕರೂ ಆದ ಚೇತನ್‌ ನಾಡಿಗೇರ್‌, ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಜಿ., ಕಾರ್ಯದರ್ಶಿ ಜಗದೀಶ್‌ ಕುಮಾರ್‌, ದೃಶ್ಯ ಮಾದ್ಯಮದ ಪತ್ರಕರ್ತ ಮಾಲತೇಶ್ ಜಗ್ಗಿನ್, ಅವಿನಾಶ್, ಕೇಶವಮೂರ್ತಿ, ರವಿಕಾಂತ ಕುಂದಾಪುರ, ವಿಕಾಸ ನೇಗಿಲೋಣಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಶಶಿಧರ ಚಿತ್ರದುರ್ಗ ಸ್ವಾಗತ ಮಾತುಗಳನ್ನಾಡಿದರೆ, ಶರಣು ಹುಲ್ಲೂರು ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ದೇಶ ಸಿನಿಮಾ

ಹೈದರಾಬಾದ್: ಖ್ಯಾತ ನಟಿ ಜಮುನಾ (86) ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ನಿಧನರಾದರು. ನಟಿ ಜಮುನಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಮುಖ ನಟರೊಂದಿಗೆ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ತೆನಾಲಿ ರಾಮಕೃಷ್ಣ, ಭೂಕೈಲಾಸ ಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ (Hampi) ಜನಿಸಿದ್ದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು.

ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ  ದೂರ ಉಳಿದರು. 

ಸಿನಿಮಾ
  • ಪ್ರತಿಬನ್ ಪ್ರಕಾಶ್

ಒಟಿಟಿಯಿಂದ ಚಿತ್ರರಂಗ ನಾಶವಾಗುತ್ತದೆ ಎಂದು ಕೇರಳದ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಎಚ್ಚರಿಸಿದ್ದಾರೆ.

‘ಸ್ವಯಂವರಂ’, ‘ಎಲಿ ಪತ್ತಾಯಂ’, ‘ನಾಲು ಪೆನ್ನುಗಳ್’ ಮುಂತಾದ 12ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ದೇಶಿಸಿ, 16 ರಾಷ್ಟ್ರೀಯ ಪ್ರಶಸ್ತಿ, 18 ಕೇರಳ ರಾಜ್ಯ ಪ್ರಶಸ್ತಿ, 2004ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು ಅಡೂರು ಗೋಪಾಲಕೃಷ್ಣನ್ (80)

ಕೆಲವು ದಿನಗಳ ಹಿಂದೆ ಅವರು ನೀಡಿದ ಸಂದರ್ಶನವೊಂದರಲ್ಲಿ ‘ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡುವುದೆಂಬುದು ಒಂದು ಸಾಮಾಜಿಕ ಅನುಭವ. ಅದನ್ನು ಕಿರು ತೆರೆಯಲ್ಲಿ ನೋಡುವುದು ಹೇಗೆ? ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡ ನಾವು, ಒಟಿಟಿಗೆ ಒಗ್ಗಿಕೊಂಡೆವು. ಆದರೇ ಸಿನಿಮಾ ಜೀವಂತವಾಗಿರಬೇಕಾದರೆ, ಅದು ಕಿರುತೆರೆಯನ್ನು ನಂಬಿರಬಾರದು. ನಿರ್ದಿಷ್ಟವಾಗಿ ಹೇಳಬೇಕಾದರೆ, ಒಟಿಟಿಗಾಗಿ ತಯಾರಿಸಲ್ಪಡುವ ಸಿನಿಮಾಗಳು, ಸಿನಿಮಾ ಸಂಸ್ಕೃತಿಯನ್ನೇ ನಾಶಮಾಡಿಬಿಡುತ್ತದೆ’ ಎಂದು ಎಚ್ಚರಿಸಿದ್ದಾರೆ.