ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Congress Leaders Archives » Dynamic Leader
November 25, 2024
Home Posts tagged Congress Leaders
ದೇಶ

ಬೆಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದ ಉಮ್ಮನ್ ಚಾಂಡಿ (ವಯಸ್ಸು 79) ಇಂದು ಮುಂಜಾನೆ 4.25ಕ್ಕೆ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಉಮ್ಮನ್ ಚಾಂಡಿ ಕೇರಳ ರಾಜ್ಯದಲ್ಲಿ ಕಾಂಗ್ರೆಸ್‌ನ ಮುಖವಾಗಿದ್ದರು. ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1970ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದರು. 1971 ರಿಂದ 2021 ರವರೆಗೆ 12 ಬಾರಿ ಕೇರಳ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾಗಿದ್ದರು. ಪುದುಪಳ್ಳಿ ವಿಧಾನಸಭಾ ಕ್ಷೇತ್ರವನ್ನು ತಮ್ಮ ಭದ್ರಕೋಟೆಯನ್ನಾಗಿ ಉಳಿಸಿಕೊಂಡಿದ್ದರು.

ಉಮ್ಮನ್ ಚಾಂಡಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. “ಹಿರಿಯ ರಾಜಕೀಯ ಮುತ್ಸದ್ದಿ, ಕೇರಳದ ಮಾಜಿ ಮುಖ್ಯಮಂತ್ರಿ‌ ಉಮ್ಮನ್ ಚಾಂಡಿ ಅವರ ನಿಧನ ಅತೀವ ದುಃಖವುಂಟುಮಾಡಿದೆ. ಚಾಂಡಿಯವರ ನಿಧನದಿಂದ ಸಂವಿಧಾನ, ಪ್ರಜಾಪ್ರಭುತ್ವ, ದುರ್ಬಲ ಜನರ ಪರವಾದ ಗಟ್ಟಿಧ್ವನಿಯೊಂದು ಇಲ್ಲವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಚಾಂಡಿಯವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಇದೇ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಅದೇ ದಿನ ದೆಹಲಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (NDA) ಸಮಾಲೋಚನಾ ಸಭೆಯೂ ನಡೆಯಲಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ, ಕಾಂಗ್ರೆಸ್ ಸೇರಿದಂತೆ 17 ಪ್ರತಿಪಕ್ಷಗಳು ಒಗ್ಗೂಡಿ ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಸಮಾಲೋಚನಾ ಸಭೆ ನಡೆಸಿದ್ದವು. ಆ ವೇಳೆ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಹಾಗೂ ಅದಕ್ಕೆ ರಣತಂತ್ರ ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು.

ಈ ಹಿನ್ನಲೆಯಲ್ಲಿ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಮಣಿಸಲು, ಆಡಳಿತಾರೂಢ ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಪಕ್ಷಗಳ ಸಮಾಲೋಚನಾ ಸಭೆಯನ್ನು ಇದೇ 18 ರಂದು ದೆಹಲಿಯಲ್ಲಿ ನಡೆಸಲಾಗುತ್ತಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ರಾಷ್ಟ್ರೀಯ ನಾಯಕರ ಪ್ರಕಾರ, 18 ರಂದು ದೆಹಲಿಯಲ್ಲಿ ಎನ್‌ಡಿಎ ಪಕ್ಷಗಳ ಮುಖಂಡರ ಸಭೆ ನಡೆಯಲಿದೆ. ಆ ಸಭೆಯಲ್ಲಿ, ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್, ಶಿವಸೇನೆಯಿಂದ ಬೇರ್ಪಟ್ಟಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಈ ಇಬ್ಬರು ನಾಯಕರ ನೇತೃತ್ವದ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿವೆ. ಮಾಜಿ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ ನಾಯಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅವರ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಮತ್ತೆ ಸೇರಿಕೊಳ್ಳಲಿದೆ.

ಓಂ ಪ್ರಕಾಶ್ ರಾಜ್‌ಬರ್ ಅವರ ಸುಹೇಲ್‌ದೇವ್ ನೇತೃತ್ವದ ಭಾರತೀಯ ಸಮಾಜ ಪಕ್ಷ ಮತ್ತು ವಿಕಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಾಹ್ನಿ ಅವರೊಂದಿಗೆ ಸಿದ್ದಾಂತದ ಆಧಾರದ ಮೇಲೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ ಪಕ್ಷಗಳ ಮುಖಂಡರು ಈ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತೊಬ್ಬ ಪ್ರಭಾವಿ ದಲಿತ ನಾಯಕ ಜಿತನ್ ರಾಮ್ ಮಾಂಝಿ ಅವರು ಎನ್‌ಡಿಎಗೆ ಮರು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಅಂತೆಯೇ, ಸಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಯುತ್ತಿರುವುದರಿಂದ ಅವರೂ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 5 ರಾಜ್ಯಗಳ ಚುನಾವಣೆಯಲ್ಲೂ ಹಿನ್ನಡೆ ಎದುರಿಸಲಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಬಿಡಿ ಪಕ್ಷಗಳನ್ನು ಸೇರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. 18 ರಂದು ನಡೆಯಲಿರುವ ಎನ್‌ಡಿಎ ಪಕ್ಷಗಳ ಸಭೆಯಲ್ಲಿ ಯಾವ್ಯಾವ ಪಕ್ಷಗಳು ಭಾಗವಹಿಸಲಿವೆ ಹಾಗೂ ಯಾವ ಪಕ್ಷಗಳು ಬಹಿಷ್ಕಾರ ಮಾಡಲಿವೆ ಎಂಬುದು ತಿಳಿಯುತ್ತದೆ.