ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dharmapuri Archives » Dynamic Leader
November 21, 2024
Home Posts tagged Dharmapuri
ದೇಶ ರಾಜಕೀಯ

ಡಿ.ಸಿ.ಪ್ರಕಾಶ್

“ನಾವು ಗೋಮೂತ್ರ ರಾಜ್ಯಗಳು ಎಂದು ಕರೆಯುವ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿ ಗೆಲ್ಲುತ್ತಿದೆ” ಎಂದು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಧರ್ಮಪುರಿ ಡಿಎಂಕೆ ಸಂಸದ ಸೆಂಥಿಲ್‌ಕುಮಾರ್ ಅವರ ಈ ಮಾತು ಬಿಜೆಪಿಯೊಳಗೆ ಮಾತ್ರವಲ್ಲದೆ ‘ಇಂಡಿಯಾ’ ಮೈತ್ರಿಕೂಟದಲ್ಲೂ ಭಾರೀ ಕೋಲಾಹಲ ಉಂಟು ಮಾಡಿದೆ.

ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಎಂಬ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ಬಿಜೆಪಿ ತಮ್ಮದಾಗಿಸಿಕೊಂಡಿದೆ. ತೆಲಂಗಾಣ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

2024ರ ಸಂಸತ್ ಚುನಾವಣೆಗೆ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಈ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ ಪಕ್ಷ ಹಾಗೂ ‘ಇಂಡಿಯಾ’ ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ, ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಐದು ರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತು ಮಾತಡಿದ ಡಿಎಂಕೆ ಸಂಸದ ಸೆಂಥಿಲ್‌ಕುಮಾರ್,

“ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳೆಂದು (Gaumutra States) ಕರೆಯುವ ಹಿಂದಿ ಭಾಷಿಕ ಉತ್ತರದ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿಯೇ ಬಿಜೆಪಿಯ ಶಕ್ತಿ ಅಡಗಿದೆ ಎಂಬುದನ್ನು ದೇಶದ ಜನತೆ ಅರಿಯಬೇಕು!” ಎಂದು ಟೀಕಿಸಿದ್ದರು. ಆಗ ಬಿಜೆಪಿ ಸಂಸದರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಅದನ್ನು ಅನುಸರಿಸಿ, ಡಿಎಂಕೆ ಸದಸ್ಯರಾಗಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಕೂಡ ಸೆಂಥಿಲ್‌ಕುಮಾರ್ ಭಾಷಣಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, “ಇದು ಬಹಳ ಅಗೌರವದ ಮಾತು. ಅವರು ಕೂಡಲೇ ಕ್ಷಮೆಯಾಚಿಸಬೇಕು. ಅವರು ಮಾಡಿರುವ ಟೀಕೆಗಳನ್ನು ವಾಪಸ್ ಪಡೆಯಬೇಕು!” ಎಂದರು.

ಅದೇ ರೀತಿ ಮತ್ತೊಬ್ಬ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, “ಸಂಸತ್ತಿನಲ್ಲಿ ಅವರ ಭಾಷಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಅವರ ಸ್ವಂತ ಅಭಿಪ್ರಾಯ” ಎಂದು ಜಾರಿಕೊಂಡರು.

ಅಲ್ಲದೆ, ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, “ಡಿಎಂಕೆ ರಾಜಕೀಯವೇ ಬೇರೆ; ಕಾಂಗ್ರೆಸ್ ರಾಜಕಾರಣವೇ ಬೇರೆ. ಈ ರಾಜಕೀಯವನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷವು ಸನಾತನ ಧರ್ಮ ಮತ್ತು ಗೋಮಾತೆಯನ್ನು ನಂಬುತ್ತದೆ. ನಾವೂ ಸಹ ನಂಬುತ್ತೇವೆ. ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಯೋಣ” ಎಂದು ಹೇಳಿದರು.

ಇದೇ ವೇಳೆ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ವೈಕೊ ಅವರು, “ಅವರು ಹೇಳಿದ್ದು ಸರಿಯಿದೆ; ಅವರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ” ಎಂದು ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಬಿಜೆಪಿ ಸರ್ಕಾರ ಈ ವಿಷಯವನ್ನು ಪ್ರಮುಖ ಚರ್ಚೆಯ ವಿಷಯವಾಗಿ ತೆಗೆದುಕೊಂಡು ಕಾಂಗ್ರೆಸ್-ಡಿಎಂಕೆ ವಿರುದ್ಧ ಪ್ರಚಾರವನ್ನು ಆರಂಭಿಸಿದೆ.

ಈ ಹಿನ್ನಲೆಯಲ್ಲಿ, ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ, “ಧರ್ಮಪುರಿ ಸಂಸದ ಸೆಂಥಿಲ್‌ಕುಮಾರ್ ತಪ್ಪಾಗಿ ಅರ್ಥೈಸಬಹುದಾದ ಪದ ಬಳಸಿದ್ದಾರೆ. ಇದನ್ನು ತಿಳಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೆಂಥಿಲ್‌ಕುಮಾರ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಸಭ್ಯತೆ ಮತ್ತು ಸಂಸ್ಕೃತಿಯನ್ನು ಕಾಪಾಡುವ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಅಖಿಲ ಭಾರತ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವಾಗ ದಯವಿಟ್ಟು ವೈಯಕ್ತಿಕ ಅಭಿಪ್ರಾಯಗಳನ್ನು ತಪ್ಪಿಸುವಂತೆ ಕೇಳಿಕೊಳ್ಳುತ್ತಿದ್ದೇನೆ!” ಎಂದು ಅವರು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿರುವ ಧರ್ಮಪುರಿ ಸಂಸದ ಸೆಂಥಿಲ್‌ಕುಮಾರ್ ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ನಾನು ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ ತಪ್ಪು ಅರ್ಥವನ್ನು ನೀಡುವ ಪದವನ್ನು ಬಳಸಿದ್ದೇನೆ. ಆ ಪದವನ್ನು ಯಾವುದೇ ಒಳ ಉದ್ದೇಶದಿಂದ ಬಳಸಲಿಲ್ಲ. ಅದು ತಪ್ಪು ಅರ್ಥವನ್ನು ನೀಡಿದೆ ಎಂಬುದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸುತ್ತಿದ್ದೇನೆ!” ಎಂದು ಹೇಳಿ, ಕ್ಷಮೆಯಾಚಿಸಿದರು. ಅಲ್ಲದೇ ನೆನ್ನೆಯ ಸಂಸದೀಯ ಸಭೆಯಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.