ಡಿ.ಸಿ.ಪ್ರಕಾಶ್
ತಿರುಮಂಗಲಂ: ತಮಿಳುನಾಡಿನ ತಿರುಮಂಗಲಂ ನಗರ ಪುರಸಭೆಯು ಸಾರ್ವಜನಿಕರಿಂದ ಸಂಗ್ರಹಿಸುವ ತಾಜ್ಯವನ್ನು ವಿಂಗಡಣೆ ಮಾಡಿ ಕೊಳೆತ ಹಸಿ ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರವನ್ನು ತಯಾರಿಸಿ ರೈತರಿಗೆ ಉಚಿತವಾಗಿ ವಿತರಿಸುತ್ತಿರುವುದು ಸುದ್ದಿಯಾಗಿದೆ.
ತಿರುಮಂಗಲಂ ಪುರಸಭೆಯಲ್ಲಿ ಪ್ರತಿದಿನ 12 ಮೆಟ್ರಿಕ್ ಟನ್ ಕಸವನ್ನು ಸ್ವಚ್ಚತಾ ಕಾರ್ಯಕರ್ತರಿಂದ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಲಾದ ಕಸವನ್ನು ಸಂಗ್ರಹ ಕೇಂದ್ರಕ್ಕೆ ತಂದು, ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವೆಂದು ಇಬ್ಬಾಗವಾಗಿ ವಿಂಗಡಿಸಲಾಗುತ್ತದೆ. ನಂತರ ಸಂಗ್ರಹ ಕೇಂದ್ರದಲ್ಲಿರುವ ಗ್ರೈಂಡಿಂಗ್ ಯಂತ್ರಗಳ ಮೂಲಕ ಸಣ್ಣ ಸಣ್ಣ ತುಂಡುಗಳಾಗಿ ಪುಡಿಮಾಡಲಾಗುತ್ತದೆ.
ನಂತರ ಈ ಕೇಂದ್ರದಲ್ಲಿರುವ ತೊಟ್ಟಿಗಳಲ್ಲಿ ಇಎಂ ದ್ರಾವಣವನ್ನು (ಸಲ್ಯೂಷನ್) ಬಳಸಿ 21 ದಿನಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ನಂತರ ಅವುಗಳನ್ನು ತೊಟ್ಟಿಯಿಂದ ಹೊರತೆಗೆದು ಮತ್ತೆ 24 ದಿನಗಳವರೆಗೆ ಒಣಗಿಸಿ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈ ನೈಸರ್ಗಿಕ ಗೊಬ್ಬರಗಳನ್ನು ಮನೆಯಲ್ಲಿ ಬೆಳೆಸುವ ಗಿಡಗಳು, ಬಳ್ಳಿಗಳು ಮತ್ತು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ನೈಸರ್ಗಿಕ ಗೊಬ್ಬರ ಬೇಕಾದವರು ನಗರಸಭೆಯ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂದೂ ಪ್ರಕಟಣೆಯನ್ನೂ ನೀಡಲಾಗಿದೆ. ನಗರಸಭೆ ಮೂಲಕ ದೊರೆಯುವ ನೈಸರ್ಗಿಕ ಗೊಬ್ಬರವನ್ನು ಪಡೆಯಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಇದಲ್ಲದೇ ಒಣ ತ್ಯಾಜ್ಯಗಳಾದ ರಟ್ಟು, ಹಾಲಿನ ಪ್ಯಾಕೆಟ್, ಪ್ಲಾಸ್ಟಿಕ್ ಕವರ್ ಇತ್ಯಾದಿಗಳನ್ನು ಸ್ವಚ್ಛತಾ ಕಾರ್ಮಿಕರೇ ತೆಗೆದುಕೊಳ್ಳುತ್ತಾರೆ. ಉಳಿದ ತ್ಯಾಜ್ಯಗಳಾದ ರಬ್ಬರ್, ಟೈರ್ ಮತ್ತು ಹಳೆಯ ಶೂಗಳನ್ನು ತಿರುಮಂಗಲಂ ಪುರಸಭೆಯ ಮೂಲಕ ಸಿಮೆಂಟ್ ಕಂಪೆನಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ತಂತ್ರಗಾರಿಕೆ ನಮಗೆ ತಿಳಿದಿದ್ದರೂ ನಾವು ಆ ಪ್ರಯತ್ನಕ್ಕೆ ಕೈಹಾಕಲಿಲ್ಲ ಎಂದು ಭಾವಿಸುತ್ತೇನೆ. ನಾವು ಯಾಕೆ ಇಂತಹ ಪ್ರಯತ್ನವನ್ನು ಮಾಡಬಾರದು ಎಂಬುದು ನನ್ನ ಪ್ರಶ್ನೆಯಾಗಿದೆ.
ಬೆಂಗಳೂರು ನಗರದಲ್ಲಿ ಸಂಗ್ರಹಿಸಲಾಗುವ ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಿ ಹಂಚಿಕೆ ಮಾಡಿದರೆ, ನಮ್ಮ ಅಕ್ಕಪಕ್ಕದಲ್ಲಿರುವ ಎಲ್ಲಾ ಜಿಲ್ಲೆಗಳಿಗೂ ಉಚಿತವಾಗಿ ನೈಸರ್ಗಿಕ ಗೊಬ್ಬರವನ್ನು ಹಂಚಿಕೆಮಾಡಬಹುದು ಅಲ್ಲವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಮ್ಮ ಸುತ್ತಮುತ್ತ ಇರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಇದರ ಬಗ್ಗೆ ಯೋಚಿಸಬೇಕು.