ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dynamic Leader Magazine Archives » Page 4 of 5 » Dynamic Leader
January 5, 2025
Home Posts tagged Dynamic Leader Magazine (Page 4)
ರಾಜಕೀಯ

ಕೃಪೆ: The New Indian Express,
ಕನ್ನಡ ಪ್ರಭ, ಬೆಂಗಳೂರು.

ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮೋದಿಯವರು ಅಖಾಡಕ್ಕಿಳಿದಾಗ ಕರ್ನಾಟಕ ಚುನಾವಣೆಯ ಚಿತ್ರಣವೇ ಬದಲಾಗಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಹೊತ್ತಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಮೋದಿಯವರ ಪ್ರಚಾರದಿಂದ ಈ ಬಾರಿ ವಿಧಾನಸಭೆ ಚುನಾವಣೆ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ, ಬದಲಿಗೆ ಮುಂದಿನ ವರ್ಷ ಲೋಕಸಭೆ ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ:

ಪಕ್ಷದ ಪರ ಪ್ರಚಾರವನ್ನು ಮಾಡುತ್ತಿದ್ದೀರಿ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ?
ನನ್ನ ಪ್ರಚಾರದಲ್ಲಿ ವಿಶೇಷವೇನೂ ಇಲ್ಲ. ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ನಿಗದಿಪಡಿಸಿ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಸುಮಾರು 40 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಕಳೆದ 60 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕುಮಾರಸ್ವಾಮಿಯವರು ತಮ್ಮ ಕಾರ್ಯಕ್ರಮಗಳಿಂದ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದ್ದಾರೆ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಕಷ್ಟಪಡುತ್ತಿದ್ದಾರೆ.

ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ಬಹುಮತ ಪಡೆಯುವುದಾಗಿ ಹೇಳಿಕೊಂಡಿವೆ. ನಿಮ್ಮ ಮೌಲ್ಯಮಾಪನ ಏನು?
ನಾನು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇಶದಲ್ಲೇ ಪ್ರಪ್ರಥಮ ಕುಮಾರಸ್ವಾಮಿ ಅವರು ವಿಶಿಷ್ಟ ಕಾರ್ಯಕ್ರಮ ಪಂಚರತ್ನ ರಥಯಾತ್ರೆಯನ್ನು ರಾಜ್ಯದ ಜನತೆಯ ಮುಂದಿಟ್ಟು ಶ್ರಮಿಸುತ್ತಿದ್ದಾರೆ. ಈ ಸಂದೇಶವನ್ನು ಹಳ್ಳಿಗಳ ಜನರಿಗೆ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಮುನ್ನ ಅದನ್ನು ಜನರ ಬಳಿಗೆ ಕೊಂಡೊಯ್ಯಲಿದ್ದಾರೆ. ಇದು ಸಾಕಷ್ಟು ಪರಿಣಾಮ ಬೀರಿದ್ದು, ಜೆಡಿಎಸ್ ಬಹುಮತ ಪಡೆಯುವ ವಿಶ್ವಾಸವಿದೆ.

ಕೃಷಿ ಸಾಲ ಮನ್ನಾ, ವೃದ್ಧಾಪ್ಯ ವೇತನ, ಇನ್ನೂ ಹಲವು ಕ್ರಮಗಳನ್ನು ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೈಗೊಂಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜಕಾರಣಿ ಎಂದು ಅವರ ಶತ್ರುಗಳೂ ಒಪ್ಪಿಕೊಳ್ಳುತ್ತಾರೆ.

ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಅಭಿಪ್ರಾಯವಿದೆ. ಅದು ನಿಜವೇ?
ಕಳೆದ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಒಮ್ಮೆ ನೋಡಿ. ವಿಜಯಪುರ ಮತ್ತು ರಾಯಚೂರಿನಲ್ಲಿ ತಲಾ ಮೂರು, ಬೀದರ್‌ನಲ್ಲಿ ಎರಡು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಂದನ್ನು ಗೆದ್ದಿದ್ದೇವೆ. ನಾವು ಆ ಪ್ರದೇಶದಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ಆ ಪ್ರದೇಶದಲ್ಲಿ ಹೆಚ್ಚು ಗೆಲ್ಲುತ್ತೇವೆ. ಕೆಲವರು ಜೆಡಿಎಸ್ ನ್ನು ಕೇವಲ ಹಳೆಯ ಮೈಸೂರು ಪಾರ್ಟಿ ಎಂದು ಬ್ರಾಂಡ್ ಮಾಡಲು ಬಯಸುತ್ತಾರೆ. ಸತ್ಯ, ವಾಸ್ತವ ಬೇರೆ ಇದೆ.

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅದರಲ್ಲಿ ಏನಾದರೂ ಸತ್ಯವಿದೆಯೇ?
ವರುಣಾದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದರಿಂದ ಯಡಿಯೂರಪ್ಪ ಅವರ ಪುತ್ರ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯೆ ಏನು? ಅದು ಏನನ್ನು ಸೂಚಿಸುತ್ತದೆ?

2024ರ ಚುನಾವಣೆಯ ಮೊದಲು ಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳ ಪ್ರಯತ್ನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳು?
ಇದು ಕಷ್ಟ. ಬಿಜೆಪಿ 303 ಸ್ಥಾನ ಗೆದ್ದಿದ್ದು, ಈ ಬಾರಿ ಅವರಿಗೆ ಕಷ್ಟ. ಇತರರ ನೆರವಿನಿಂದ ಸರ್ಕಾರ ರಚಿಸಬೇಕು. ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜಸ್ಥಾನವನ್ನು ನೋಡಿ, ಅಲ್ಲಿ ಹೋರಾಟ ಮಾಡುತ್ತಿದ್ದಾರೆ. ಇತರ ಪಕ್ಷಗಳು ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ.

ಪ್ರಧಾನಿ ಮೋದಿಯವರ ರ್‍ಯಾಲಿ ಕರ್ನಾಟಕದಲ್ಲಿ ಬಿಜೆಪಿ ಅಲೆಯನ್ನು ಬದಲಾಯಿಸಬಹುದು ಎಂದು ಪಕ್ಷ ಆಶಿಸುತ್ತಿದೆ.ಈ ಬಗ್ಗೆ ಏನು ಹೇಳುತ್ತೀರಿ?
ಪ್ರಧಾನಿ ಮೋದಿಯವರ ರ್‍ಯಾಲಿಗಳು ಕರ್ನಾಟಕದಲ್ಲಿ ಅಲೆಯನ್ನು ಬದಲಾಯಿಸಬಹುದು ಎಂದು ಬಿಜೆಪಿ ಆಶಿಸುತ್ತಿದೆ. ಅವರು ಸುಮಾರು 40 ರಿಂದ 50 ಸ್ಥಳಗಳಲ್ಲಿ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರ ಪರಿಣಾಮ ಸಂಸತ್ ಚುನಾವಣೆ ಮೇಲೆ ಹೆಚ್ಚು. ಅಸೆಂಬ್ಲಿ ಚುನಾವಣೆ ಪ್ರಾದೇಶಿಕ ಸಮಸ್ಯೆಯಾಗಿದೆ. ಅವರ ಭಾಷಣಗಳು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ, ಆದರೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದು ಕಷ್ಟ.

ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷ ರೂಪುಗೊಂಡರೆ, ನೀವು ಅದರ ಭಾಗವಾಗುತ್ತೀರಾ?
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅದಾನಿ ಬಗ್ಗೆ ಮಾತನಾಡುತ್ತಿದ್ದರೆ ಮತ್ತೊಬ್ಬರು ಇನ್ನೇನೋ ಮಾತನಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಅರ್ಥವಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಎದುರಿಸುತ್ತಿರುವ ಜೆಡಿಎಸ್ ವಿಶಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪಕ್ಷ ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಇದು ರೈತರ ಪಕ್ಷವಾಗಿದ್ದು, ರೈತನ ಮಗನಾಗಿ ನಾನು ಆ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಜೆಡಿಎಸ್ ರೈತರ ಮತ್ತು ಬಡ ಜನರ ವಿಶ್ವಾಸ ಗಳಿಸಿದೆ. ನಾವು ಯಾವಾಗಲೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ. ಅದನ್ನು ಜನ ಮರೆತಿಲ್ಲ.

ರಾಜ್ಯ ಸರ್ಕಾರವು ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಅದನ್ನು ಜಾರಿಗೆ ತಂದಿದ್ದೆ, ಆದರೆ ಬಿಜೆಪಿ ಅದನ್ನು ರದ್ದುಗೊಳಿಸಿತು. ಬಿಜೆಪಿ ಮಾಡಿದ್ದು ತಪ್ಪು. ಅದನ್ನು ನಾವು ಅಧಿಕಾರಕ್ಕೆ ಬಂದರೆ ಮರುಸ್ಥಾಪಿಸುತ್ತೇವೆ.

ಜನಾದೇಶ ಮುರಿದು ಬಿದ್ದರೆ ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೋಗಲಿದೆಯೇ?
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ನಡೆಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಜೆಡಿಎಸ್ ಸರಳ ಬಹುಮತ ಪಡೆಯಲಿದೆ.

ರಾಜಕೀಯ

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ರವರು ಇಂದು ಸಂಜೆ ಸುಮಾರು 5 ಗಂಟೆಯ ಸಮಯಕ್ಕೆ ಕೊರಟಗೆರೆ ಭೈರೇನಹಳ್ಳಿಯ ಬಳಿ ಸಾವಿರಾರು ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ, ಅಪರಿಚಿತ ಕಿಡಿಗೇಡಿಗಳು ಅವರ ತಲೆಗೆ ಕಲ್ಲು ಹೊಡೆದು ಗಂಭೀರವಾದ ಗಾಯವನ್ನು ಏರ್ಪಡಿಸಿದ್ದಾರೆ. ಇದು ಅಪ್ಪಟ್ಟವಾದ ಕೊಲೆ ಪ್ರಯತ್ನವಾಗಿದೆ.

ಭೈರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆಯಲ್ಲಿ ಪರಮೇಶ್ವರ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿಯುತ್ತಿದ್ದಾಗ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.

ಅವರನ್ನು ನಿರ್ಧಿಷ್ಟವಾದ ಸ್ಥಳಕ್ಕೆ ಕರೆದುಕೊಂಡು ಬಂದು, ದುಷ್ಕರ್ಮಿಗಳು ಕಲ್ಲು ಹೊಡೆಯಲು ಅನುಕೂಲವಾಗುವಂತೆ ಹೂ ಎರಚುವ ನೆಪದಲ್ಲಿ ಅವರನ್ನು ಎತ್ತಿ ಹೆಗಲಮೇಲೆ ಕೂರಿಸಲಾಯಿತೆ? ಎಂಬ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪೊಲೀಸ್ ಇಲಾಖೆ ಆದೇಶಿಸಬೇಕು. ಪರಮೇಶ್ವರ್ ಮೇಲೆ ನಡೆದಿರುವ ಹಲ್ಲೆ ಇದು ಮೊದಲನೆಯದಲ್ಲ; ಎರಡನೆಯದು. ಇದು ಅಪ್ಪಟ್ಟವಾದ ಕೊಲೆ ಪ್ರಯತ್ನವಾಗಿದೆ. ವೈಯಕ್ತಿಕ ದ್ವೇಶದಿಂದ ಈ ದುಷ್ಕೃತ್ಯ ನಡೆದಿದೆಯೇ? ಅಥವಾ ಯಾರಾದರು ಸುಪಾರಿ ನಿಡಿದ್ದಾರೆಯೇ? ಎಂಬುದನ್ನು ಪತ್ತೆಮಾಡಬೇಕು; ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು.

ದಲಿತ ಸಮುದಾಯದ ಒಬ್ಬ ಹಿರಿಯ ಮುಖಂಡ; ಮಾಜಿ ಗೃಹ ಸಚಿವ ಹಾಗೂ ಮಾಜಿ ಉಪ ಮುಖ್ಯಮಂತ್ರಿಗೆ ಈ ಬಿಜೆಪಿ ಸರ್ಕಾರದಲ್ಲಿ ರಕ್ಷಣೆಯಿಲ್ಲ ಎನ್ನುವುದಾದರೆ, ಜನಸಾಮಾನ್ಯರ ಪಾಡೇನು? ಮುಖ್ಯಮಂತ್ರಿಗಳು ಈ ಕೂಡಲೇ ಉನ್ನತ ಮಟ್ಟದ ಪೊಲೀಸ್ ತನಿಖೆಗೆ ಆದೇಶ ನೀಡಿ, ಡಾ.ಜಿ.ಪರಮೇಶ್ವರ್ ಅವರಿಗೆ ಆದ ಅನ್ಯಾಯಕ್ಕೆ ನ್ಯಾಯವನ್ನು ಕಲ್ಪಿಕೊಡುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ.          

ದೇಶ ರಾಜ್ಯ

ವರದಿ: ರಾಮು ನೀರ ಮಾನ್ವಿ

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಮಾನ್ವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಹಂಪಯ್ಯ ನಾಯಕ, ಜೆಡಿಎಸ್ ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಹಾಗೂ ಆಮ್ ಆದ್ಮಿಯಿಂದ ರಾಜಾ ಶಾಮಸುಂದರ್ ನಾಯಕ ಮುಂತಾದವರು ಚುನಾವಣೆ ಅಖಾಡದಲ್ಲಿ ಇದ್ದಾರೆ.

ದಿನದಿಂದ ದಿನಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರವು ಭರಾಟೆಯಿಂದ ನೆಡೆಯುತ್ತಿದೆ. ಪ್ರಚಾರದಲ್ಲಿ ಯಾವುದೇ ಪಕ್ಷಗಳು ನಾ ಮುಂದೆ ತಾಮುಂದೆ ಅನ್ನುವ ರೀತಿಯಲ್ಲಿ ಪ್ರಚಾರವನ್ನು ಮಾಡುತ್ತಿದೆ. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ರಾಜ ವೆಂಕಟಪ್ಪ ನಾಯಕ ಜಯ ಶಾಲಿಯಾಗಿದ್ದರು. ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ತನುಶ್ರೀ, ಮೂರನೆಯ ಸ್ಥಾನದಲ್ಲಿ ಬಿಜೆಪಿಯ ಶರಣಪ್ಪ ನಾಯಕ ಹಾಗೂ ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಹಂಪಯ್ಯ ನಾಯಕ ಇದ್ದರು. ಆದರೆ ಈ ಸಾರಿ ಮಾನ್ವಿಯ ಮತದಾರರು ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ.

ಪ್ರಸ್ತುತ ಜೆಡಿಎಸ್ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೆಯದಾಗಿ ಕಾಂಗ್ರೆಸ್ ಇದೆ. ಮೂರನೆಯ ಸ್ಥಾನದಲ್ಲಿ ಬಿಜೆಪಿ ಇದ್ದು, ಎಂದಿನಂತೆ ಎಲ್ಲಾ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಎಡಬಿಡದೆ ನಡೆಯುತ್ತಿದೆ. ಮುಂಜಾನೆ ಒಂದು ಪಕ್ಷದಲ್ಲಿದ್ದರೆ ಮಧ್ಯಾಹ್ನ ಒಂದು ಪಕ್ಷದಲ್ಲಿರುತ್ತಾರೆ. ರಾತ್ರಿಯಲ್ಲಿ ಮತ್ತೊಂದು ಪಕ್ಷದಲ್ಲಿ ಕಂಡುಬರುತ್ತಾರೆ. ಅವರಿಗೆ ಪಕ್ಷ ಸಿದ್ದಾಂತ, ತತ್ವ, ನಿಷ್ಟೆ ಯಾವುದೂ ಇಲ್ಲ. ಆರು ಕೊಟ್ಟರೆ ಅತ್ತೆಯ ಕಡೆ; ಹತ್ತು ಕೊಟ್ಟರೆ ಮಾವನ ಕಡೆ ಅನ್ನುವ ಪರಿಸ್ಥಿತಿ ಇಲ್ಲಿದೆ. ಒಟ್ಟಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು, ಮತದಾರರು ಹಾಗೂ ಕಾರ್ಯಕರ್ತರು ನಾಯಕರ ಇಡುಗಂಟು ಕಡೆ ಕಣ್ಣಿಟ್ಟು ಕಾಯುತ್ತಿದ್ದಾರೆ. ಆದರೆ ಯಾರೂ ಹಣ ಬಿಚ್ಚುತ್ತಿಲ್ಲ ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ. ‘ನಾ ಖಾವುಂಗ ನಾ ಖಾನೆ ದುಂಗಾ’ ಅನ್ನುವ ಪರಿಸ್ಥಿತಿ ಇಲ್ಲಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿ ಕೊಂಡಿದ್ದಾರೆ.

ಆದರೆ ಬಿಜೆಪಿಯ ದೇವದುರ್ಗದ ಶಿವನಗೌಡ ನಾಯಕರ ಒಂದು ಮಾತು ಈಗ ಎಲ್ಲಡೆ ವೈರಲ್ ಆಗಿದೆ. ‘ರಾಯಚೂರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡುವವರು ಮಾನ್ವಿಯಲ್ಲಿ ಯಾರೂ ಇಲ್ಲ; ದೇವದುರ್ಗದ ನಾವೇ ಬರಬೇಕು’ ಅನ್ನುವ ಮಾತು ಮಾನ್ವಿ ತಾಲೂಕಿನ ಜನತೆಯಲ್ಲಿ ಆಕ್ರೋಷಕ್ಕೆ ಕಾರಣವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಬಹು ದೊಡ್ಡ ಹೊಡೆತವಾಗಲಿದೆ. ಈ ಮಾತುಗಳಿಂದ ತಾಲೂಕಿನ ಜನತೆ ಕೆಂಡದಂತೆ ಹಾಗಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷ ಹಿನ್ನಡೆಗೆ ಕಾರಣವಾಗಿದೆ. ಅಂತಿಮವಾಗಿ ಕಾಂಗ್ರೆಸ್, ಜೆಡಿಎಸ್ ಮಧ್ಯೆ ರಣ ಕಾಳಗ ನಡೆಯುವುದು ಬಹುತೇಕ ಖಚಿತವಾಗಿದೆ.

ಕಳೆದ ಭಾರಿ ಪಕ್ಷೇತರರಾಗಿ ಸ್ಪರ್ದಿಸಿದ ಎಂ.ಈರಣ್ಣನವರ ಸೊಸೆ ಡಾ.ತನುಶ್ರೀ, ಮೂವತ್ತೇಳು ಸಾವಿರ ಮತಗಳನ್ನು ತೆಗೆದುಕೊಂಡು ಸೋತಿದ್ದರು. ಇದು ಒಂದು ರೀತಿಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಬಹುಮುಖ್ಯ ಕಾರಣವಾಗಿತ್ತು. ನೆನ್ನೆ ನೆಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಎಂ.ಈರಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಕಾಂಗ್ರೆಸ್‌ನ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇದರಿಂದ ಕ್ಷೇತ್ರದಲ್ಲಿ ಗೆಲುವು ಯಾರದ್ದು ಎಂಬ ವಿಷಯವು ಗೊಂದಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ; ಮನ್ವಿಯ ಪ್ರಜ್ಞಾವಂತ ಮತದಾರರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ದೇಶ ರಾಜ್ಯ

ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಮತ್ತು ಬಿಜೆಪಿ ರ‍್ಯಾಲಿ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಡಾ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುವಾದಿ ಹಕ್ಕುಗಳು ಇರುತ್ತವೆ’ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಅವರು ಇದನ್ನು ಹೇಗೆ ಹೇಳಬಲ್ಲರು? ಈ ಕುರಿತು ನಾವು ಭಾರತ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ’ ಎಂದು  ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜಕೀಯ

“ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಈ ಮಟ್ಟದಲ್ಲಿ ಪ್ರಧಾನಿ ಸಹಿತ ಕೇಂದ್ರ ಬಿಜೆಪಿ ಸರ್ಕಾರದ ಸಚಿವರು, ದೇಶದ ಹಲವು ಭಾಗದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬೀಡು ಬಿಟ್ಟಿರುವುದು ಇದೇ ಮೊದಲಬಾರಿ ಅನಿಸುತ್ತಿದೆ. ದೇಶದ ಗೃಹ ಸಚಿವ ಅಮಿತ್ ಶಾ ಅವರಂತೂ, ರಾಜ್ಯದ ಭವಿಷ್ಯ ಮೋದಿಯವರ ಕೈಗೆ ಕೊಡುವ ನಿರ್ಧಾರ ಮಾಡುವ ಚುನಾವಣೆ ಇದು ಎಂದಿದ್ದಾರೆ.

ಇದೇನು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರದ ದೇಶವೋ? ಗೃಹ ಸಚಿವರಿಗೆ ಗೊತ್ತಿಲ್ಲದಿರುವುದು ಕ್ರೂರ ವ್ಯಂಗ್ಯ. ರಾಜ್ಯದ ಜನತೆ ಮೋದಿಯವರ ಮುಖ ನೋಡಿ ಮತ ಹಾಕುವುದಾದರೆ, ಇಲ್ಲಿನ ಬಿಜೆಪಿ ಸರ್ಕಾರ ಮತ್ತದರ ಮುಖಂಡರೆಲ್ಲ ಏಕೆ? ಮತ ಹಾಕದಿದ್ದರೆ ರಾಜ್ಯ ಸಂಕಷ್ಟಕ್ಕೀಡಾಗಲಿದೆ ಎಂಬ ಹೆದರಿಸುವ ಒಳಾರ್ಥವೂ ಇದ್ದಂಗಿದೆ!

ಬಿಜೆಪಿ ಗೆಲ್ಲದಿದ್ದರೆ ಕೋಮು ಗಲಭೆಗಳಾಗಲಿದೆ ಎಂದು ಹೇಳಿರುವ ಅಮಿತ್ ಶಾ ಅವರೆ, ನಿಮ್ಮ ಹುದ್ದೆಯ ಘನತೆ ಗೌಣವಾಗಿಸಬೇಡಿ. ಕೋಮು ಹಿಂಸೆ ಆರಂಭಿಸುವ ಹುನ್ನಾರ ನಿಮ್ಮ ಮಾತಿನಲ್ಲಿ ಅಡಗಿರುವ ಹಾಗಿದೆ! ಇದು ತೀರ ಅಪಾಯಕಾರಿ. ಈಗಾಗಲೇ, ಕನ್ನಡಿಗರು ರಾಜ್ಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಲು ನಿರ್ಧರಿಸಿದ್ದಾರೆ. ನಿಮಗೆ ಸೋಲು ಕಟ್ಟಿಟ್ಟ ಬುತ್ತಿ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.   

ರಾಜಕೀಯ

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,  ‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ ನನಗೇನು ಆತಂಕ ಇಲ್ಲ’ ಎಂದು ಹೇಳಿದರು. ಇದಕ್ಕೆ ಕರ್ನಾಟಕ ಬಿಜೆಪಿ, ‘ನಾವು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ನಮ್ಮ ಪಕ್ಷದ ಪ್ರಚಾರಕ್ಕೆ ಆಹ್ವಾನಿಸಿದರೆ ನಿಮಗೇಕೆ ಈ ಪರಿ ಹೊಟ್ಟೆ ಉರಿ? ಅಂದ ಹಾಗೆ, ನಿಮ್ಮ ರೀತಿ ನಾವು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತು ಮಮತಾ ಬ್ಯಾನರ್ಜಿಯವರನ್ನು ಬೆನ್ನು ಬಗ್ಗಿಸಿ ಬಿನ್ನವಿಸಿಕೊಂಡು ಕರೆತರುವುದಿಲ್ಲ ಬಿಡಿ’ ಎಂದು ಪ್ರತಿಕ್ರಿಯೆ ನೀಡಿತು.

ಇದಕ್ಕೆ ಜೆಡಿಎಸ್ ಪಕ್ಷವು ‘ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುವ ‘ಚುನಾವಣಾಜೀವಿ’ ನರೇಂದ್ರ ಮೋದಿ ಅವರನ್ನು ನೀವು ಹೆಮ್ಮೆ ಎಂದು ಹೇಳುತ್ತಿದ್ದೀರಿ. ಇದನ್ನೆ ನಾವು ಗುಲಾಮಗಿರಿ ಎಂದು ಕರೆಯುವುದು. ಹಿಂದಿ ಮತ್ತು ಗುಜರಾತಿಗಳ ಗುಲಾಮಗಿರಿ ಮಾಡುವ ನಿಮ್ಮಿಂದ ಸ್ವಾಭಿಮಾನ ಕಲಿಯುವ ಅಗತ್ಯತೆ ಕುಮಾರಸ್ವಾಮಿಗೆ ಅವರಿಗೆ ಬಂದಿಲ್ಲ.

ಗುಜರಾತಿನ ಹಿಂದಿ ದೊರೆಗಳ ಮುಂದೆ ನಡುಬಗ್ಗಿಸಿ ನಿಂತು ‘ಜೀ ಹುಜೂರ್’ ಅನ್ನುವುದಕ್ಕೂ, ಮಹಿಳೆಯೊಬ್ಬರಿಗೆ ಗೌರವ ಕೊಡುವುದಕ್ಕೂ ವ್ಯತ್ಯಾಸವಿದೆ. ಓಟಿಗಾಗಿ ಮಾತ್ರ ಸಂಸ್ಕೃತಿ ಪಾಠ ಮಾಡುವ ನಿಮಗೆ, ಮಹಿಳೆಯೊಬ್ಬರಿಗೆ ಮನಸ್ಸಿನಿಂದ ಗೌರವ ನೀಡುವುದನ್ನು ಯೋಚಿಸಲು ಕೂಡಾ ಸಾಧ್ಯವೇ ಇಲ್ಲ. ನಿಮ್ಮದೇನಿದ್ದರೂ ಢಾಂಬಿಕತೆ ಮಾತ್ರ.

ಅಷ್ಟೊಂದು ಸ್ವಾಭಿಮಾನವಿದ್ದರೆ ಅಮಿತ್ ಶಾ ಮುಂದೆ ನಿಂತು ಹಿಂದಿ ಹೇರಿಕೆ ವಿರುದ್ಧ ಒಂದೇ ಒಂದು ಶಬ್ಧ ಮಾತನಾಡಿ. ನೀವು ‘ಚುನಾವಣಾಜೀವಿ’ ಯನ್ನು ಕರೆಸಿರುವುದರಲ್ಲಿ ನಮಗೆ ಯಾವ ತಕರಾರೂ ಇಲ್ಲ. ಆದರೆ, ಇನ್ನೂ ಪೂರ್ಣಗೊಳ್ಳದ ಕಾಮಗಾರಿಯ ಉದ್ಘಾಟನೆ ಹೆಸರಿನಲ್ಲಿ ಅವರನ್ನು ಕರೆಸಿ ಜನರ ತೆರಿಗೆ ಹಣ ಪೋಲು ಮಾಡಿದ್ದೀರಿ ಎಂಬುವುದೇ ನಮ್ಮ ತಕರಾರು’ ಎಂದು ಜೆಡಿಎಸ್ ಪಕ್ಷ ಕಾರವಾಗಿ ಉತ್ತರ ನೀಡಿದೆ.

ರಾಜಕೀಯ

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಕ್ಕ ಉತ್ತರವನ್ನು ನೀಡಿದ್ದಾರೆ.

“ಗೃಹ ಸಚಿವ ಅಮಿತ್ ಶಾ ಅವರೇ, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಲು ಮುಸ್ಲಿಮರ ಮೀಸಲಾತಿಯನ್ನು ಇಲ್ಲವೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗ-ಲಿಂಗಾಯತರ ಮೀಸಲಾತಿ ಕಡಿತಗೊಳಿಸಬೇಕಾಗಿಲ್ಲ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಈ ವಿವಾದವನ್ನು ಸುಲಭದಲ್ಲಿ ಬಗೆಹರಿಸಬಹುದು. ಬಿಜೆಪಿಗೆ ಒಕ್ಕಲಿಗರು-ಲಿಂಗಾಯತರ ಮೀಸಲಾತಿ ಹೆಚ್ಚಿಸುವ ಸದುದ್ದೇಶ ಇರಲಿಲ್ಲ. ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡುವ ದುರುದ್ದೇಶವಷ್ಟೇ ಇತ್ತು. ಇದನ್ನು ಅರ್ಥಮಾಡಿಕೊಂಡೇ ಸುಪ್ರೀಂ ಕೋರ್ಟ್ ಸರ್ಕಾರದ ಮೀಸಲಾತಿ ನೀತಿಗೆ ತಡೆಯಾಜ್ಞೆ ನೀಡಿರುವುದು.

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಲ್ಲಿಯೇ ಜಾತಿ-ಜಾತಿ ಮತ್ತು ಧರ್ಮ-ಧರ್ಮದ ನಡುವೆ ಜಗಳ ಹಚ್ಚುವ ದುಷ್ಟ ಆಲೋಚನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ದಡ್ಡರಲ್ಲ. ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ ಈ ರಾಜ್ಯದ ಮಹಾಜನತೆ ‘ಕಿತ್ತು ತಿನ್ನುವ ದುಷ್ಟರಲ್ಲ’, ‘ಹಂಚಿ ತಿನ್ನುವ ಔದಾರ್ಯ ಸಜ್ಜನರು’ ಎನ್ನುವುದನ್ನು ಅಮಿತ್ ಶಾ ಅವರಿಗೆ ವಿನಮ್ರವಾಗಿ ತಿಳಿಸಬಯಸುತ್ತೇನೆ.

ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ನಮ್ಮ ಪಕ್ಷ ಮೀಸಲಾತಿ ಹೆಚ್ಚಳದ ಪರವಾಗಿದೆ. ಬಿಜೆಪಿ ಸರ್ಕಾರ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನಷ್ಟೇ ವಿರೋಧಿಸುತ್ತಿದ್ದೇವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದೊಂದೇ ಈಗಿನ ಮೀಸಲಾತಿಯ ಗೊಂದಲ-ವಿವಾದವನ್ನು ಪರಿಹರಿಸಲು ಇರುವ ಸರಿಯಾದ ಮಾರ್ಗ. ಮೀಸಲಾತಿಗೆ ಈಗ ವಿಧಿಸಲಾಗಿರುವ ಶೇಕಡಾ 50ರ ಮಿತಿ ಸಂವಿಧಾನದಲ್ಲಿ ಹೇರಲಾದ ಮಿತಿ ಅಲ್ಲ, ಅದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗ.

ಈಗಾಗಲೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು ಮತ್ತು ಈ ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಬೇಕು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 50ರಿಂದ ಶೇಕಡಾ 75ರ ವರೆಗೆ ಹೆಚ್ಚಿಸಿ ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುತ್ತೇವೆ. ನಮ್ಮಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ವೈಜ್ಞಾನಿಕವಾಗಿ ಗಣತಿ ಮಾಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಅದರ ಆಧಾರದಲ್ಲಿ ಮೀಸಲಾತಿ ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಕೊಳ್ಳಬಹುದು ಎಂಬ ಭರವಸೆ ನನಗಿದೆ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

1994ರಲ್ಲಿ ಎಂ.ವೀರಪ್ಪ ಮೊಯಿಲಿ ಸರ್ಕಾರ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 73ಕ್ಕೆ ಹೆಚ್ಚಿಸಿ ಆದೇಶ ಮಾಡಿತ್ತು. ಅದಿನ್ನು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅಲ್ಲಿಯೂ ರಾಜ್ಯ ಸರ್ಕಾರ ಜಾತಿಗಣತಿಯ ವರದಿಯನ್ನು ಮುಂದಿಟ್ಟು ಮೀಸಲಾತಿ ಹೆಚ್ಚಳಕ್ಕೆ ಅನುಮತಿ ಕೋರಿದರೆ ನ್ಯಾಯಾಲಯ ಖಂಡಿತ ಒಪ್ಪಿಗೆ ನೀಡಬಹುದು. ಸಾಮಾಜಿಕ ಅನ್ಯಾಯವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡು ಬಂದ ಬಿಜೆಪಿ ಪಕ್ಷಕ್ಕಾಗಲಿ, ಅದರ ಅಧ್ಯಕ್ಷರಿಗಾಗಲಿ ಸಾಮಾಜಿಕ ನ್ಯಾಯ ಅರ್ಥವಾಗಲಾರದು. ನಮ್ಮದು ಕೋಮುವಾದವನ್ನು ಉಸಿರಾಡುವ ಗುಜರಾತ್ ಅಲ್ಲ, ಬಸವವಾದವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ಎನ್ನುವುದನ್ನು ಅಮಿತ್ ಶಾ ಅವರಿಗೆ ನೆನಪಿಸಬಯಸುತ್ತೇನೆ.

ಸಾಧನೆಯ ಬಲದಿಂದಾಗಲಿ, ಸವಕಲುಗೊಂಡಿರುವ ಕೋಮುವಾದದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಈ ಅಡ್ಡಕಸುಬಿ ಮೀಸಲಾತಿ ನೀತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಘೋಷಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಇಲ್ಲವೇ ಲಿಂಗಾಯತರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಮುಸ್ಲಿಮ್ ಮತ್ತು ಒಕ್ಕಲಿಗ-ಲಿಂಗಾಯತರ ನಡುವೆ ದ್ವೇಷ ಹುಟ್ಟಿಸುವುದೇ ಆಗಿದೆ.

ಗೃಹ ಸಚಿವ ಅಮಿತ್ ಶಾ ಅವರ ಪ್ರಶ್ನೆಯಲ್ಲಿಯೇ ಬಿಜೆಪಿಯ ದುಷ್ಟ ಆಲೋಚನೆ ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವ ಮುಸ್ಲಿಮರು ಮೀಸಲಾತಿ ರದ್ದತಿಯಿಂದ ಅಧೀರರಾಗಲಿಲ್ಲ, ಪ್ರಚೋದನೆಗೂ ಒಳಗಾಗಲಿಲ್ಲ. ಅದೇ ರೀತಿ ಇದು ಕನ್ನಡಿಯೊಳಗಿನ ಗಂಟು ಎನ್ನುವುದನ್ನು ಅರ್ಥಮಾಡಿಕೊಂಡಿರುವ ಜಾಗೃತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೂಡಾ ಹೊಸ ಮೀಸಲಾತಿ ಘೋಷಣೆಯಿಂದ ಸಂಭ್ರಮಗೊಳ್ಳಲಿಲ್ಲ. ಇದು ನಮ್ಮ ಕರ್ನಾಟಕ.

ಈಗ ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಹೊಸ ಮೀಸಲಾತಿಯನ್ನು ಜಾರಿಗೆ ತರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಗೃಹಸಚಿವರು ಚುನಾವಣಾ ಭಾಷಣದಲ್ಲಿ ಅದರ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಗೃಹಸಚಿವ ಅಮಿತ್ ಶಹಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಪ್ರೀತಿಸುವ, ಪೊರೆಯುವ ಮತ್ತು ಕಟ್ಟುವ ‘ಕರ್ನಾಟಕ ಮಾದರಿ’ಯೇ ನಡೆಯುವುದು. ಅಮಿತ್ ಶಾ ಅವರ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ರಾಜಕೀಯ

ಬೆಂಗಳೂರು: ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಪ್ರಚಾರ ಮಾಡಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಶಾಸಕ ಎಸ್.ಆರ್.ವಿಶ್ವನಾಥ್ ಛೂ ಬಿಟ್ಟಿರುವ ಈ ಗೂಂಡಾಗಳು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯ ವರೆಗೂ ದೌರ್ಜನ್ಯ ನಡೆಸಿದ್ದಾರೆ. ಬೊಮ್ಮಾಯ್ ಅವರೆ ಇದೇನು ಉತ್ತರ ಪ್ರದೇಶವೆ? ಸೋಲುವ ಭೀತಿಯಿಂದ ಬಿಜೆಪಿ ಇಂತಹ ಕೃತ್ಯಕ್ಕೆ ಇಳಿದಿದೆ. ನಳೀನ್ ಕುಮಾರ್ ಕಟೀಲ್ ಅವರೆ ಇದಲ್ಲವೆ ಬಿಜೆಪಿಯ ಗೂಂಡಾಗಿರಿ ಸಂಸ್ಕೃತಿ. ನಮ್ಮದು ಶಾಂತಿ ಮತ್ತು ಸಮಾನತೆಯ ದಾರಿಯಾಗಿದ್ದು, ನೀವೆಷ್ಟೇ ಪ್ರಚೋದಿಸಿದರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಗೂಂಡಾಗಿರಿಗೆ ಚುನಾವಣೆಯ ದಿನ ಮತದಾರರು ಉತ್ತರ ನೀಡಲಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ನಮ್ಮ ಕಾರ್ಯಕರ್ತರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಲಿದ್ದೇವೆ. ಅವರ ಗೂಂಡಾಗಿರಿಗೆ ನಾವು ಬೆದರುವುದಿಲ್ಲ; ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಾರಿ ಯಲಹಂಕಕ್ಕೆ ಮುನೇಗೌಡರೇ ಶಾಸಕ ಎಂದು ಜನರು ತೀರ್ಮಾನಿಸಿದ್ದಾರೆ. ಡಿಜಿಪಿ ಅವರೇ ದೌರ್ಜನ್ಯ ಎಸಗಿದ ಬಿಜೆಪಿಯ ಎಲ್ಲಾ ಗೂಂಡಾಗಳನ್ನೂ ಕಾನೂನಿನ ಕುಣಿಕೆಗೆ ತನ್ನಿ. ಎಂದು ಜೆಡಿಎಸ್ ಒತ್ತಾಯಿಸಿದೆ.  

ರಾಜಕೀಯ

ಚಿಕ್ಕೋಡಿ: ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು; ಆ ಹಣವನ್ನು ಪಡೆದು ಬಿಜೆಪಿಗೆ ವೋಟ್‌ ಹಾಕಿ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಥಣಿ ಕ್ಷೇತ್ರದ ಮತದಾರರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಸವದಿ ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನೂ ನೀಡಲಾಗಿದೆ. ಆದರೆ ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿ ಇಲ್ಲಿಂದ ಹೋಗಿದ್ದಾರೆ. ಬಿ.ಎಲ್.ಸಂತೋಷ್‌ ಮತ್ತು ಉಮೇಶ್ ಕತ್ತಿಗೂ ಮೋಸ ಮಾಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕು ಎಂದು ಸವದಿಯ ವಿರುದ್ಧ ಮತದಾರರನ್ನು ಎತ್ತಿಕಟ್ಟಿದ್ದಾರೆ.

ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ, ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು ಎಂದು ಹೇಳುವ ರಮೇಶ್ ಜಾರಕಿಹೋಳಿ, ಬಿಜೆಪಿಯನ್ನು ಭ್ರಷ್ಟ ಪಕ್ಷವೆಂದು ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ಮಾಡದೇ ಹಣ ಬರುತ್ತದೆಯೇ? ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿಯಿಂದ ಹಣವನ್ನು ಪಡೆದುಕೋಂಡು ಬಿಜೆಪಿಗೆ ವೋಟ್‌ ಹಾಕಿ ಎಂದು ಮತದಾರರಿಗೆ ಆಮಿಷ ಮತ್ತು ಪ್ರಚೋದನೆ ನೀಡುವುದು ಅಪರಾಧವಲ್ಲವೇ? 

“ಅವರಿಂದ ಹಣ ಪಡೆದುಕೊಂಡು ನಮಗೆ ವೋಟ್ ಹಾಕಿ” ಎಂದು ಅಭ್ಯರ್ಥಿಗಳು ಹೇಳುವುದು ಸರ್ವ ಸಾಮಾನ್ಯವಾಗಿದೆ. ಈ ರೀತಿ ಹೇಳುವುದು ಚುನಾವಣೆ ನೀತಿಗಳಿಗೆ ವಿರುದ್ಧವಲ್ಲವೇ? ಇದು ಅಪರಾದ ಕ್ರಮವಲ್ಲವೇ? ಇದರ ಬಗ್ಗೆ ಚುನಾವಣಾ ಅಯೋಗವು ಏನು ಕ್ರಮ ತೆಗೆದುಕೊಂಡಿದೆ. ಈ ರೀತಿ ಹೇಳುವುದು ಅಪರಾಧ ಎನ್ನುವುದಾದರೆ, ಮೊದಲು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿ ಹೊಳಿಯ ವಿರುದ್ಧ, ಕ್ರಮ ಜರುಗಿಸುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕೆಂದು ಮತದಾರರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. 

ರಾಜಕೀಯ

ಗೌರೀಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆ, ಗೌರೀಬಿದನೂರು ತಾಲ್ಲೂಕು, ತೊಂಡೇಬಾವಿ ಹೋಬಳಿ, ಅಲ್ಲಿಪುರ ನಿವಾಸಿ ಅಬ್ಬಾಸ್ ರಜಾ ಅವರನ್ನು ರಾಜ್ಯ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಸೈಯದ್ ರೋಷನ್ ಅಬ್ಬಾಸ್ ರವರ ಆದೇಶದ ಮೇರೆಗೆ, ಗೌರೀಬಿದನೂರು ತಾಲ್ಲೂಕು ಅಲ್ಪಸಂಖ್ಯಾತರ ಯುವ ಕಾರ್ಯದರ್ಶಿಯಾಗಿ, ಗೌರೀಬಿದನೂರು ತಾಲ್ಲೂಕು ಅಧ್ಯಕ್ಷರಾದ ಸಿ.ಮಜುನಾಥ ರೆಡ್ಡಿ ರವರು ದಿನಾಂಕ: 03-04-2023 ರಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ತತ್ ಕ್ಷಣದಿಂದಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಪಕ್ಷದ ಸಂಘಟನೆಯಲ್ಲಿ ಭಾಗವಹಿಸಬೇಕೆಂದು ಅವರಿಗೆ ಸೂಚಿಸಲಾಗಿದೆ. ಯುವಕರು, ಉತ್ಸಾಹಿಯೂ ಆಗಿರುವ ಅಬ್ಬಾಸ್ ರಜಾ ಜೆಡಿಎಸ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಪಂಚರತ್ನ ಯಾತ್ರೆಯ ಯಶಸ್ಸು ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿರುವ ನಾಡಿನ ಸ್ವಾಭಿಮಾನಿ ಮತದಾರರು ಈ ಬಾರಿ ಬದಲಾವಣೆಯನ್ನು ತರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತರ ಸಾಮಾಜಿಕ ಹಕ್ಕುಗಳಿಗಾಗಿ ಮತ್ತು ಗೌರೀಬಿದನೂರು ತಾಲ್ಲೂಕಿನ ಸರ್ವಜನರ ಏಳಿಗೆಗಾಗಿ ಒತ್ತುಕೊಟ್ಟು ಶ್ರಮಿಸಬೇಕೆಂದು ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಿ.ಮಜುನಾಥ ರೆಡ್ಡಿ ರವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿ ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಶಮವಹಿಸಬೇಕೆಂಬುದು ಸ್ಥಳೀಯರ ಆಶಯವಾಗಿದೆ.