ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Electricity Rate Archives » Dynamic Leader
October 23, 2024
Home Posts tagged Electricity Rate
ರಾಜಕೀಯ

ಬೆಂಗಳೂರು: ಎನ್.ಡಿ.ಆರ್.ಎಫ್‌ ನಿಯಮಾನುಸಾರ ಬರ ಪರಿಹಾರ ಬಿಡುಗಡೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದ್ದು, ಈ ಸಂಬಂಧ ತಾವೇ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾದರೆ ನಾನು ನಿಮ್ಮ ಜೊತೆ ಬರುವುದಾಗಿ ಹೇಳಿದ್ದೆ. ಈಗಲೂ ಕಾಲ ಮಿಂಚಿಲ್ಲ ತಾವು ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಮತ್ತು ಈ ಹೊತ್ತಿನ ಅಗತ್ಯ ನಿರ್ಧಾರವಾಗಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.  

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು. ಗೃಹಲಕ್ಷ್ಮಿ ಯೋಜನೆ ನಾಡಿನ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ ಎಂಬುದು ಮಹಾ ಸುಳ್ಳು. ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯದ 1.08 ಕೋಟಿ ಮಹಿಳೆಯರು ಆಗಸ್ಟ್‌ ತಿಂಗಳಲ್ಲಿ ಯಶಸ್ವಿಯಾಗಿ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಫಲಾನುಭವಿಗಳ ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆಯಾಗದಿರುವುದು, ಅರ್ಜಿದಾರರು ಹೆಸರು ಮತ್ತು ವಿಳಾಸದಲ್ಲಿನ ವ್ಯತ್ಯಾಸ ಮುಂತಾದ ಕಾರಣಗಳಿಂದಾಗಿ 9.44 ಲಕ್ಷ ಮಹಿಳೆಯರಿಗೆ ಹಣ ಜಮೆಯಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೊದಲ ತಿಂಗಳ ಕಂತಿನ ಹಣ ಶೇ.88ರಷ್ಟು ನೊಂದಣಿಯಾದ ಫಲಾನುಭವಿಗಳ ಖಾತೆಗೆ ಜಮೆ ಆಗಿರುತ್ತದೆ. ಹಣ ಜಮೆ ಆಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ದೋಷ ಸರಿಪಡಿಸುವ ಕಾರ್ಯವನ್ನು ಇಲಾಖೆಯು ಕೈಗೊಂಡಿದ್ದು, ಬರುವ ತಿಂಗಳು ಶೇ.100 ಅರ್ಜಿದಾರ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ದೇಶದಲ್ಲೇ ಅತಿ ದೊಡ್ಡ ಮೊತ್ತದ ಮಹಿಳಾ ಸಬಲೀಕರಣ ಯೋಜನೆಯನ್ನು ಯಶಸ್ವಿಯಾಗಿ ಪ್ರತಿ ಮನೆಗೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ವಿದ್ಯುತ್‌ ದರ ಹೆಚ್ಚಳವಾಗಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಹಿಂದಿನ ಬಿಜೆಪಿ ಸರ್ಕಾರವನ್ನೇ ಕುರಿತು ಟೀಕೆ ಮಾಡಿದಂತಿದೆ. ಕೆಇಆರ್‌ಸಿ ಮಾರ್ಚ್‌ ತಿಂಗಳಿನಲ್ಲಿ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಮುಂದೆ ಮಂಡಿಸಿತ್ತು, ಈ ಪ್ರಸ್ತಾವನೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರಿಂದ ಮೇ. 12 ಅಂದರೆ ಚುನಾವಣೆಯ ಫಲಿತಾಂಶ ಬರುವ ಹಿಂದಿನ ದಿನವೇ ಹೊಸ ದರವು ಏಪ್ರಿಲ್‌ 1 ರಿಂದ ಪೂರ್ವಾನ್ವಯ ಆಗುವಂತೆ ಕೆಇಆರ್‌ಸಿ ಜಾರಿಗೊಳಿಸಿತು. ಈ ಸಂಬಂಧ ಗಮನಿಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ. ಈ ಹಿಂದೆ ದರ ನಿಗದಿಪಡಿಸಲು ನಾಲ್ಕು ಸ್ಲ್ಯಾಬ್‌ ಗಳು ಇದ್ದವು, ಈಗ ಅದನ್ನು 2 ಸ್ಲ್ಯಾಬ್‌ ಗಳಿಗೆ ಇಳಿಕೆ ಮಾಡಲಾಗಿದೆ.

0 ಇಂದ 50 ಯುನಿಟ್‌ ವರೆಗೆ ರೂ.4.15, 50 ರಿಂದ 100 ಯುನಿಟ್‌ ವರೆಗೆ ರೂ.5.60, 100 ರಿಂದ 200 ಯುನಿಟ್‌ ವರೆಗೆ ರೂ.7.15 ಹಾಗೂ 250 ಯುನಿಟ್‌ ಗಳಿಗಿಂತ ಹೆಚ್ಚಿನ ಬಳಕೆಗೆ ಯುನಿಟ್‌ ಗೆ ರೂ.8.20 ವಿಧಿಸಲಾಗುತ್ತಿತ್ತು. ಇದನ್ನು ಪರಿಸ್ಕರಿಸಿ ಈಗ ಶೂನ್ಯದಿಂದ 100 ಯುನಿಟ್‌ ಗೆ ರೂ.4.75 ಹಾಗೂ 101 ಗಿಂತ ಮೇಲ್ಪಟ್ಟು ಎಷ್ಟೇ ವಿದ್ಯುತ್‌ ಬಳಕೆ ಮಾಡಿದರೂ ಯುನಿಟ್‌ ಗೆ ರೂ.7 ದರ ವಿಧಿಸಲಾಗುತ್ತಿದೆ. ನಮ್ಮ ಸರ್ಕಾರವು ಬಳಕೆದಾರರ ಹಿಂದಿನ ಒಂದು ವರ್ಷದ ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ಶೇ.10 ಹೆಚ್ಚುವರಿಯಾಗಿ ಸೇರಿಸಿ ಗರಿಷ್ಟ 200 ಯುನಿಟ್‌ ವರೆಗೆ ಉಚಿತ್‌ ವಿದ್ಯುತ್‌ ನೀಡುತ್ತಿರುವುದರಿಂದ ನಿಮ್ಮದೇ ಸರ್ಕಾರ ದರ ಏರಿಕೆ ಮಾಡಿದ್ದರೂ ಆ ಹೊರೆ ನಾಡಿನ 1.58 ಕೋಟಿ ನೊಂದಾಯಿತ ಕುಟುಂಬಗಳನ್ನು ಬಾಧಿಸದಂತೆ ತಡೆದಿದ್ದೇವೆ.

ಕೇಂದ್ರ ಸರ್ಕಾರ 2021ರಲ್ಲಿ ಹೊಸ ಎಲೆಕ್ಟ್ರಿಸಿಟಿ ನಿಯಮ ( Timely Recovery of Costs due to Change in Law ) ವನ್ನು ಜಾರಿಗೆ ತಂದಿತು. ಈ ನಿಯಮದ ಪ್ರಕಾರ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ದರವನ್ನು ರಾಜ್ಯ ಸರ್ಕಾರಗಳು ಭರಿಸದೆ ಬಳಕೆದಾರರ ಮೇಲೆಯೇ ವಿಧಿಸಬೇಕು ಎಂದು ಆದೇಶ ಹೊರಡಿಸಿತು. ಇದನ್ನು 13 ಮಾರ್ಚ್‌ 2023ರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಇಆರ್‌ಸಿ ಏಪ್ರಿಲ್‌ 1 ರಿಂದ ಅನ್ವಯ ಆಗುವಂತೆ ಗ್ರಾಹಕರಿಂದ ವಸೂಲಿ ಮಾಡಲು ನಿರ್ಧರಿಸಿತು. ಆದರೆ ಈ ವೇಳೆಗೆ ಚುನಾವಣಾ ನೀತಿ ಸಂಹಿತ ಜಾರಿಯಲ್ಲಿ ಇದ್ದುದ್ದರಿಂದ ಮೇ. 12 ರಿಂದ ಬಾಕಿ ಹಣವನ್ನು ವಸೂಲಿ ಮಾಡಲು ಆರಂಭಿಸಿತು. ಈ ಎರಡು ಕಾರಣಗಳಿಂದ ವಿದ್ಯುತ್‌ ದರ ಹೆಚ್ಚಳವಾಗಿದೆ ಆದರೆ ಇದಕ್ಕೆ ಕಾರಣ ನಮ್ಮ ಸರ್ಕಾರವಲ್ಲ, ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರವಾಗಿದೆ.

ವಿದ್ಯುತ್‌ ಕೊರತೆಯಿದ್ದು, ಇದನ್ನು ನೀಗಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಅವರು ಆರೋಪ ಮಾಡಿದ್ದಾರೆ. ರೈತರಿಗೆ ಮೂರು ಪಾಳಿಯಲ್ಲಿ ನಿರಂತರ 5 ಗಂಟೆಗಳ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದಿಂದ 300 ಮೆ.ವ್ಯಾ ಮತ್ತು ಪಂಜಾಬ್‌ ನಿಂದ 600 ಮೆ.ವ್ಯಾ ವಿದ್ಯುತ್‌ ಖರೀದಿಗೆ ಸೂಚನೆ ನೀಡಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ವಿದ್ಯುತ್‌ ಕಾಯ್ದೆಯ ಸೆಕ್ಷನ್‌ 11 ಜಾರಿ, ರಾಜ್ಯದ ಎಲ್ಲಾ ವಿದ್ಯುತ್‌ ಉತ್ಪಾದನಾ ಘಟಕಗಳು ಗರಿಷ್ಠ ವಿದ್ಯುತ್‌ ಉತ್ಪಾದಿಸಿ ರಾಜ್ಯದ ಗ್ರಿಡ್‌ ಗೆ ಪೂರೈಸುವಂತೆ ಆದೇಶಿಸಲಾಗಿದೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಮರುಚಾಲನೆ ನೀಡಲಾಗಿದೆ. ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ 15 ಲಕ್ಷ ಮೆಟ್ರಿಕ್‌ ಟನ್‌ ಪಡೆಯಲು ಕ್ರಮ ವಹಿಸಲಾಗಿದೆ. ಅಲ್ಪಾವಧಿ ಆಧಾರದಲ್ಲಿ 1300 ಮೆ.ವ್ಯಾ ವಿದ್ಯುತ್‌ ಖರೀದಿಗೆ ಕ್ರಮ ವಹಿಸಲಾಗಿದೆ. ಕೆಪಿಸಿಎಲ್‌ ನ ಅನಿಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.

ವಿದ್ಯುತ್‌ ಸಮಸ್ಯೆಗಳನ್ನು ಬಗೆಹರಿಸುವ ದೀರ್ಘಾವಧಿಯ ಪ್ರಯತ್ನವಾಗಿ ಪಾವಗಡದಲ್ಲಿ ಹೆಚ್ಚುವರಿಯಾಗಿ 300 ಮೆ.ವ್ಯಾ ಮತ್ತು ಕಲಬುರಗಿಯಲ್ಲಿ 500 ಮೆ.ವ್ಯಾ ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಛತ್ತೀಸ್‌ ಗಡದಲ್ಲಿ ಖಾಸಗಿ / ಜಂಟಿ ಹೂಡಿಕೆಯಡಿ ಕ್ಯಾಪ್ಟೀವ್‌ ಕಲ್ಲಿದ್ದಲು ಗಣಿ ಆರಂಭಕ್ಕೆ ಕ್ರಮ ವಹಿಸಲಾಗುತ್ತಿದೆ. 2013ರಲ್ಲಿ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗ ರಾಜ್ಯದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವು 14,825 ಮೆ.ವ್ಯಾ ಇತ್ತು, 2018ರ ವೇಳೆಗೆ ಇದನ್ನು 26,025 ಮೆ.ವ್ಯಾ ಗೆ ಏರಿಕೆ ಮಾಡಿದ್ದೆವು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಶಾಸಕರು ಎಲ್ಲರೂ 40% ಕಮಿಷನ್‌ ಹಿಂದೆ ಬಿದ್ದಿದ್ದರಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗುವ ಬದಲಿಗೆ, ಹಿಂದಿಗಿಂತಲೂ ಕಡಿಮೆಯಾಗಿತ್ತು.

ರಾಜ್ಯವನ್ನು ತೀವ್ರ ಬರಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರದಿಂದಾಗಿ ಒಟ್ಟು ರೂ.33,710 ಕೋಟಿ ಬೆಳೆಹಾನಿಯಾಗಿದ್ದು, ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ನಮ್ಮ ಸರ್ಕಾರದ ಸಚಿವರುಗಳಾದ ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಅವರು ಕೇಂದ್ರದ ಕೃಷಿ ಕಾರ್ಯದರ್ಶಿಯವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ರಾಜ್ಯದ ಬರಪರಿಸ್ಥಿತಿಯ ಮಾಹಿತಿಯನ್ನು ನೀಡಿದ್ದಾರೆ.

ಇಷ್ಟೆಲ್ಲಾ ಮಾಡಿದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗಲೀ, ಅನುದಾನವಾಗಲೀ ಯಾವುದು ಬಂದಿಲ್ಲ. ಎನ್.ಡಿ.ಆರ್.ಎಫ್‌ ನಿಯಮಾನುಸಾರ ಬರ ಪರಿಹಾರ ಬಿಡುಗಡೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದ್ದು, ಈ ಸಂಬಂಧ ತಾವೇ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾದರೆ ನಾನು ನಿಮ್ಮ ಜೊತೆ ಬರುವುದಾಗಿ ಹೇಳಿದ್ದೆ. ಈಗಲೂ ಕಾಲ ಮಿಂಚಿಲ್ಲ ತಾವು ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಮತ್ತು ಈ ಹೊತ್ತಿನ ಅಗತ್ಯ ನಿರ್ಧಾರವಾಗಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇನೆ. 5/6

ಯಡಿಯೂರಪ್ಪ ಅವರು ಬೆಂಗಳೂರು ನಗರದ ಸಬ್‌ ಅರ್ಬನ್‌ ರೈಲು ಯೋಜನೆಗೆ ಕೇಂದ್ರ ಸರ್ಕಾರವು ರೂ. 450 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ವಾಸ್ತವ ಬೇರೆ ಇದ್ದು ನಾಡಿಗೆ ಆಗುತ್ತಿರುವ ಅನ್ಯಾಯ ಮುಚ್ಚಿಟ್ಟಿರುವುದು ಯಡಿಯೂರಪ್ಪ ಅವರೇ ಹೊರತು ನಾನಲ್ಲ. 2018-19ರ ಕೇಂದ್ರ ಬಜೆಟ್‌ ಭಾಷಣದಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ರೂ.17,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ಯೋಜನೆ ರೂಪಿಸಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಈ ಘೋಷಣೆಯನ್ನು ಬಿಜೆಪಿ ತನ್ನ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಸೇರಿಸಿಕೊಂಡಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, “ಕೇಂದ್ರ ಸರ್ಕಾರ ಘೋಷಿಸಿದ ರೂ.17,000 ಕೋಟಿ ಅನುದಾನ ಬಳಸಿಕೊಂಡು ಬೆಂಗಳೂರಿನ ಉಪನಗರ ರೈಲು ಜಾಲವನ್ನು ಪೂರ್ಣಗೊಳಿಸುತ್ತೇವೆ” ಎಂದು ಹೇಳಿತ್ತು. ಇದರರ್ಥ ಕೇಂದ್ರ ಸರ್ಕಾರವು ಸಬ್‌ ಅರ್ಬನ್‌ ರೈಲು ಯೋಜನೆಗೆ ಬಜೆಟ್‌ ನಲ್ಲಿ 17,000 ಕೋಟಿ ರೂ. ನಿಗದಿಪಡಿಸಿದೆ ಎಂದು ರಾಜ್ಯ ಬಿಜೆಪಿಯೇ ಒಪ್ಪಿಕೊಂಡಿತ್ತು.

ಆದರೆ ಆ ಆರ್ಥಿಕ ವರ್ಷ ಬಿಡಿಗಾಸು ಹಣವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. 2019ರ ಜುಲೈನಲ್ಲಿ ಆಪರೇಷನ್‌ ಕಮಲದ ಮೂಲಕ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಕರ್ನಾಟಕ ಬಿಜೆಪಿ, ಜನರಿಗೆ ದ್ರೋಹ ಬಗೆಯಲು ಮುಂದಾಯಿತು. ಕೇಂದ್ರ ಸರ್ಕಾರವು ಯೋಜನೆಗೆ ಅನುದಾನ ಕೊಡಲು ಮನಸ್ಸಿಲ್ಲದೆ ಫೆಬ್ರವರಿ 2020ರಲ್ಲಿ ಮಂಡಿಸಿದ 2020-21ರ ಕೇಂದ್ರ ಬಜೆಟ್‌ ನಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ತಾನು ಕೇವಲ 20% ಅನುದಾನ ನೀಡುವುದಾಗಿ, ಮತ್ತೆ 20% ರಾಜ್ಯ ಸರ್ಕಾರ ಹಾಗೂ ಉಳಿದ 60% ಹಣವನ್ನು ರಾಜ್ಯಕ್ಕೆ ಸಾಲ ಕೊಡಿಸುವುದಾಗಿ ಘೋಷಿಸಿತು. ಅಂದಿನ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಚಕಾರವೆತ್ತದೆ ಸಮ್ಮತಿಸಿತು. ಈ ಹೊಸ ಬದಲಾವಣೆಯ ನಂತರ 2022-23ರಲ್ಲಿ ಕೇಂದ್ರ ಸರ್ಕಾರ ರೂ.450 ಕೋಟಿ ಅನುದಾನವನ್ನು ನಿಗದಿ ಮಾಡಿತ್ತು, ಆದರೆ ಕೊಟ್ಟಿದ್ದು ರೂ.50 ಕೋಟಿ ಮಾತ್ರ. ನಂತರ ಪ್ರಸಕ್ತ ಸಾಲಿನಲ್ಲಿ ರೂ.1350 ಕೋಟಿ ನಿಗದಿ ಮಾಡಿ, ಈ ವರೆಗೆ ಕೇವಲ ರೂ.450 ಕೋಟಿ ಬಿಡುಗಡೆ ಮಾಡಿದೆ. ಅಂದು ಮೋದಿ ಸರ್ಕಾರದ ಜೊತೆ ಸೇರಿ ನಾಡಿಗೆ ಅನ್ಯಾಯ ಮಾಡಿದ್ದ ಯಡಿಯೂರಪ್ಪ ಅವರೇ ಇಂದು ಸಬ್‌ ಅರ್ಬನ್‌ ರೈಲು ಯೋಜನೆಗೆ ಕಾಂಗ್ರೆಸ್‌ ನಿರಾಸಕ್ತಿ ತೋರುತ್ತಿದೆ ಎಂದು ಆರೋಪ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದ್ದಾರೆ.