ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
FCI Archives » Dynamic Leader
November 23, 2024
Home Posts tagged FCI
ರಾಜಕೀಯ ರಾಜ್ಯ

ಮುಕ್ತ ಮಾರುಕಟ್ಟೆ ಯೋಜನೆಯಡಿ ಕೇಂದ್ರ ಸಂಗ್ರಹದಿಂದ ರಾಜ್ಯ ಸರ್ಕಾರಗಳಿಗೆ ಕೈಗೆಟಕುವ ದರದಲ್ಲಿ ಅಕ್ಕಿ, ಗೋಧಿ ಸೇರಿದಂತೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ; ಬಡತನ ರೇಖೆಗಿಂತ ಕೆಳಗಿರುವ ಪ್ರತಿ ವ್ಯಕ್ತಿಗೆ, ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ, ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯನ್ನು ಜುಲೈ 1 ರಿಂದ ಜಾರಿಗೆ ತರಲು ಯೋಜನೆ ಹಾಕಿಕೊಂಡ ಸರ್ಕಾರ, ಕೇಂದ್ರ ಸರ್ಕಾರದ ಬಳಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಗೆ ಬೇಡಿಕೆ ಇಟ್ಟಿತ್ತು. ಅದೇ ರೀತಿ ಹಲವು ರಾಜ್ಯಗಳು ತಮಗೆ ಹೆಚ್ಚಿನ ಅಕ್ಕಿ ಬೇಕು ಎಂದು ಆಗ್ರಹಿಸಿದ್ದವು.

ತಮಿಳುನಾಡಿನಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಅಂಗಡಿಗಳ ಮೂಲಕ ಸರ್ಕಾರ 20 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು ಎಂದು ತಮಿಳುನಾಡು ಸರ್ಕಾರದ ಪರವಾಗಿ ಭಾರತೀಯ ಆಹಾರ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಲ್ಲಿಸಿದೆ.

ಈ ಬಗ್ಗೆ  ಮಾತನಾಡಿದ, ಭಾರತೀಯ ಆಹಾರ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಆಶಿಕ್ ಮೀನಾ, “ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 80 ಕೋಟಿ ಜನರಿಗೆ ಕೈಗೆಟಕುವ ದರದಲ್ಲಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿಯಂತಹ ಧಾನ್ಯಗಳ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು, ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ಅಕ್ಕಿ ಸಿಗುವಂತೆ ಮಾಡಲು ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದರು.

ಕೆಲವು ದಿನಗಳ ಹಿಂದೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರು, ಅಗತ್ಯಬಿದ್ದರೆ ರಾಜ್ಯ ಸರ್ಕಾರಗಳು ಮಾರುಕಟ್ಟೆಯಿಂದ ಅಕ್ಕಿ ಖರೀದಿಸಬಹುದು ಎಂದು ಹೇಳಿದ್ದರು. ಅದರಂತೆ ಮುಂದಿನ ತಿಂಗಳು ಜುಲೈ 5 ರಿಂದ ಮುಕ್ತ ಮಾರುಕಟ್ಟೆ ಯೋಜನೆ ಮೂಲಕ ಅಕ್ಕಿ ಮಾರಾಟ ಆರಂಭಿಸಲಾಗುವುದು. ಇದಕ್ಕೆ ಪ್ರತಿ ಕ್ವಿಂಟಾಲ್‌ಗೆ 3,100 ರೂ. ಬೆಲೆ ನಿರ್ಣಯ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.