ತಂಜಾವೂರು: ಅಷ್ಟ ಖನಿಜಗಳಿಂದ ಮಾಡಲಾದ 28 ಅಡಿ ಎತ್ತರದ ನಟರಾಜನ ಪ್ರತಿಮೆ ದೆಹಲಿಯ ಜಿ-20 ಸಮ್ಮೇಳ ಸಭಾಂಗಣದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ತಂಜಾವೂರಿನ ಸ್ವಾಮಿಮಲೈನಿಂದ ಹೊರಟಿದೆ.
ಜಿ20 ಶೃಂಗಸಭೆ ಮುಂದಿನ ತಿಂಗಳು 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಸ್ಥಳದ ಮುಂಭಾಗದಲ್ಲಿ ಸ್ಥಾಪಿಸಲು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ, ಚೋಳರ ಕಾಲದ ನಟರಾಜನ ಪ್ರತಿಮೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು.
ಅದರ ನಂತರ, ತಂಜಾವೂರು ಜಿಲ್ಲೆಯ ಸ್ವಾಮಿಮಲೈನ ‘ಎಸ್.ದೇವಸೇನಾಪತಿ ಸ್ಥಪತಿ ಸನ್ಸ್’ ಕಂಪನಿಯ ಸ್ಥಪತಿಗಳಾದ ರಾಧಾಕೃಷ್ಣನ್, ಶ್ರೀಕಂಠನ್, ಸ್ವಾಮಿನಾಥನ್ ಮೂವರೂ ಸೇರಿ, ಪ್ರತಿಮೆಯನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಿದರು. ಪ್ರತಿಮೆ ಶೇ.75ರಷ್ಟು ಸಂಪೂರ್ಣವಾದ ಸ್ಥಿತಿಯಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯಸ್ಥ ಆರ್ಥಲ್ ಪಾಂಡ್ಯಾ, ಕೇಂದ್ರ ಅಧಿಕಾರಿಗಳಾದ ಜವಾಹರ್ ಪ್ರಸಾದ್ ಮತ್ತು ಮನೋಗನ್ ದೀಕ್ಷಿತ್ ಪ್ರತಿಮೆಯನ್ನು ಪಡೆದುಕೊಂಡರು.
ನಂತರ ಪ್ರತಿಮೆಯನ್ನು ಪೊಕ್ಲೈನ್ ಯಂತ್ರದ ಮೂಲಕ ಲಾರಿಯಲ್ಲಿ ಇರಿಸಿ ಕಳುಹಿಸಿ ಕೊಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತಾದಿಗಳು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿಕೊಟ್ಟರು. ನಟರಾಜನ ಪ್ರತಿಮೆ ಉಳುಂದೂರುಪೇಟೆ, ಸೇಲಂ, ಬೆಂಗಳೂರು, ನಾಗ್ಪುರ, ಆಗ್ರಾ ಮೂಲಕ ದೆಹಲಿಗೆ ದಿನಾಂಕ 28 ರಂದು ತಲುಪಲಿದ್ದು, ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದರ ಬಗ್ಗೆ ಮಾತನಾಡಿದ ಸ್ಥಪತಿಗಳು, “ತಾಮ್ರ, ಹಿತ್ತಾಳೆ, ಚಿನ್ನ, ಬೆಳ್ಳಿ, ಕಬ್ಬಿಣ, ಪಾದರಸ ಮುಂತಾದ ಅಷ್ಟ (ಎಂಟು) ಖನಿಜಗಳಿಂದ ವಿಗ್ರಹ ನಿರ್ಮಿಸಲಾಗಿದ್ದು, ವಿಶೇಷತೆ ಪಡೆದುಕೊಂಡಿರುವ ಈ ವಿಗ್ರಹವು 28 ಅಡಿ ಎತ್ತರ, 21 ಅಡಿ ಅಗಲ ಮತ್ತು ಸುಮಾರು 25 ಸಾವಿರ ಕೆಜಿ ತೂಕದ 51 ಜ್ವಾಲೆಗಳು ತಿರುವಾಚಿಯಲ್ಲಿ ನೆಲೆಗೊಂಡಿವೆ. ರೂ.10 ಕೋಟಿ ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ” ಎಂದು ಹೇಳಿದ್ದಾರೆ.