ಜಿನೀವಾ: ಗಾಜಾ ಮೇಲಿನ ಇಸ್ರೇಲ್ ದಾಳಿಗೆ ಬಲಿಯಾದವರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಪ್ರಕಟಿಸಿದೆ.
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಇನ್ನೂ ನಿಂತಿಲ್ಲ. ಎಲ್ಲೆಡೆ ಬಾಂಬ್‌ಗಳ ಸದ್ದು ಮೊಳಗುತ್ತಿದ್ದು, ಯುದ್ಧದ ಪರಿಣಾಮಗಳ ಬಗ್ಗೆ ವಿಶ್ವದ ರಾಷ್ಟ್ರಗಳು ತೀವ್ರ ಚಿಂತಿತರಾಗಿದ್ದಾರೆ.
ಈ ವೇಳೆ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಬಲಿಯಾದವರ ಸಂಖ್ಯೆ 43,058ಕ್ಕೆ ಏರಿಕೆಯಾಗಿದೆ ಎಂದು ಪ್ಯಾಲೆಸ್ಟೈನ್ ಪ್ರಕಟಿಸಿದೆ. 1,02,684 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ. ವಿಶ್ವ ಸಂಸ್ಥೆಯ ಪ್ರಕಾರ, ಯುದ್ಧದಲ್ಲಿ ಕೊಲ್ಲಲ್ಪಟ್ಟವರಲ್ಲಿ ಸುಮಾರು ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಮಾನವ ಹಕ್ಕುಗಳ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.
ಈ ಬಗ್ಗೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ‘ಗಾಜಾದಲ್ಲಿ ನಡೆಯುತ್ತಿರುವ ಆಕ್ರಮಣವು ಅಮಾನವೀಯ ಕೃತ್ಯವಾಗಿದೆ. ಸತ್ತವರಲ್ಲಿ ಶೇ.80ರಷ್ಟು ಜನರು ಫ್ಲಾಟ್‌ಗಳು ಮತ್ತು ಮನೆಗಳಲ್ಲಿ ವಾಸವಾಗಿದ್ದರು’ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ವರದಿ ಮಾಡಿದೆ.