ವರದಿ: ಅರುಣ್ ಜಿ.,
ಬುಡಕಟ್ಟು ಜನರ ಬದುಕೇ ಹೀಗಾ? ಒಂದಲ್ಲಾ ಒಂದು ಭಯದಲ್ಲೇ ಇವರು ಬದುಕಬೇಕಾ? ಕಾಡು, ಮೃಗಗಳ ನಡುವೆ ಜೀವಿಸುವ ಈ ಜನ ಅಲ್ಲಿನ ಪಶು, ಪ್ರಾಣಿಗಳಿಗಿಂತಾ ಹೆಚ್ಚು ಭಯಪಡೋದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ. ಯಾವ ಹೊತ್ತಿನಲ್ಲಿ ಬೇಕಾದರೂ ಇವರು ಆದಿವಾಸಿಗಳ ಮಾನ, ಪ್ರಾಣ, ಬದುಕುವ ಹಕ್ಕುಗಳಿಗೆ ಸಂಚಕಾರ ತರಬಹುದು.
ʻಗೌಳಿʼ ಎನ್ನುವ ಚಿತ್ರವೊಂದು ಬಿಡುಗಡೆಯಾಗಿದೆ. ಬಹುಕಾಲದ ನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಮರುಪ್ರವೇಶಿಸಿರುವ ಸಿನಿಮಾ ಇದು. ತಾನೇ ಕಟ್ಟಿದ ಹಸು, ಮೇಕೆಗಳನ್ನೂ ಕೊಯ್ಯಲು ಕೊಡದ, ಅವುಗಳು ನೀಡುವ ಹಾಲು, ಸಗಣಿ ಮಾರಿ ಬದುಕುವ ಹೂಮನಸ್ಸಿನ ವ್ಯಕ್ತಿ ಗೌಳಿ. ಏಳನೇ ಕ್ಲಾಸು ಓದಿದ್ದರೂ ಊರಮಕ್ಕಳಿಗೆಲ್ಲಾ ಪಾಠ ಮಾಡುವ ಪತ್ನಿ. ಜೊತೆಗೆ ಮುದ್ದುಮುದ್ದಾದ ಮಗಳು. ಅದೊಂದು ದಿನ ಎದುರಾಗುವ ತಿರುವಿನಿಂದ ಇಡೀ ಕುಟುಂಬದ ನೆಮ್ಮದಿಯೇ ಹಾಳಾಗಿಬಿಡುತ್ತದೆ. ದುಷ್ಟ ಪೊಲೀಸು ಈ ದೇಶದಲ್ಲಿ ಸಂವಿಧಾನ, ಕಾನೂನುಗಳಿವೆ ಅನ್ನೋದನ್ನೇ ಮರೆತು ಏನೇನು ಬೇಕೋ ಅದೆಲ್ಲವನ್ನೂ ಮಾಡಿಬಿಡುತ್ತದೆ. ಜೊತೆಗೆ ಇನ್ಯಾವುದೋ ದುಷ್ಟ ಕೂಟ ಕೂಡಾ ಬೆನ್ನು ಬೀಳುತ್ತದೆ. ಅಂತಿಮವಾಗಿ ಗೌಳಿ ಯಾರನ್ನೆಲ್ಲಾ ಕಾಪಾಡುತ್ತಾನೆ? ಯಾರನ್ನು ಕಳೆದುಕೊಳ್ಳುತ್ತಾನೆ ಅನ್ನೋದೇ ಚಿತ್ರದ ಅಂತ್ಯ.
ನಿರ್ದೇಶಕ ಸೂರಾ ಮೊದಲ ಸಿನಿಮಾಗೇ ಅಪ್ಪಟ ದೇಸೀ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ವರೆಗೆ ಯಾರೂ ಹೇಳದೇ ಉಳಿದಿರುವ ವಿಚಾರಗಳನ್ನು ಟಚ್ ಮಾಡಿದ್ದಾರೆ.
ತೆರೆಯಲ್ಲಿ ಕತೆ ಟೇಕಾಫ್ ಸ್ವಲ್ಪ ತಡವಾಗಿದೆ. ಮೊದಲ ಭಾಗದಲ್ಲಿ ಚಿತ್ರಕತೆ, ನಿರೂಪಣೆ ಶೈಲಿ ಗ್ರಾಫ್ಗೆ ಸರಿಯಾಗಿ ಕೂತಿಲ್ಲ. ಈ ಸಿನಿಮಾದ ಕ್ಲೈಮ್ಯಾಕ್ಸ್ ಎಷ್ಟು ಸುದೀರ್ಘವಾಗಿದೆಯೆಂದರೆ, ದ್ವಿತೀಯ ಭಾಗವನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ನಿರ್ದೇಶಕರು ಕ್ಯಾರೆಕ್ಟರ್ ಡಿಸೈನ್ಗೆ ಕೊಟ್ಟ ಗಮನವನ್ನು ಕಂಟೆಂಟ್ಗೂ ಕೊಡಬಹುದಿತ್ತು ಅಂತನ್ನಿಸುತ್ತದೆ. ಇದರ ಹೊರತಾಗಿ ಗೌಳಿ ಕನ್ನಡದ ಮಟ್ಟಿಗೆ ನೀಟಾದ ಸಿನಿಮಾ. ಸಿಕ್ಕಿರುವ ಕಡಿಮೆ ಸೌಲಭ್ಯಗಳಲ್ಲಿ ಮೌಲ್ಯಯುತ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಆಯ್ಕೆ ಮಾಡಿಕೊಂಡಿರುವ ಬ್ಯಾಕ್ ಡ್ರಾಪ್ಗೆ ಜೊತೆಗೆ ಸಂದೀಪ್ ವಲ್ಲೂರಿ ಅವರ ಕ್ಯಾಮೆರಾ ವರ್ಕ್ ಸೇರಿ ದೃಶ್ಯಗಳ ಒಟ್ಟಂದವನ್ನು ಹೆಚ್ಚಿಸಿದೆ. ಗೌಳಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿರೋದು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ. ಹಿನ್ನೆಲೆ ಸಂಗೀತ ಸಿನಿಮಾದ ಫೀಲ್ ಹೆಚ್ಚಿಸಿದೆ. ವಿಕ್ರಂ ಮೋರ್ ಮತ್ತು ಅರ್ಜುನ್ ಸಂಯೋಜಿಸಿರುವ ಸಾಹಸ ದೃಶ್ಯಗಳು ಗೌಳಿಯ ತಾಕತ್ತು ಹೆಚ್ಚಿಸಿವೆ. ಕಿಟ್ಟಿ-ಪಾವನಾ ನಟನೆಯ ಬಗ್ಗೆ ಮಾತಾಡಂಗಿಲ್ಲ. ಶರತ್ ಲೋಹಿತಾಶ್ವ ದುಷ್ಟ ಪೊಲೀಸ್ ಆಗಿ ಭಯ ಪಡಿಸುತ್ತಾರೆ. ಯಶ್ ಶೆಟ್ಟಿ ಕಣ್ಣುಗಳು, ಭಾವಾಭಿನಯಗಳೆಲ್ಲಾ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ರಂಗಾಯಣ ರಘು ತಮ್ಮ ಮಾಮೂಲಿ ಶೈಲಿಗಿಂತಾ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಓಟಿಟಿಗೆ ಬರೋ ತನಕ ಕಾಯದೆ, ಕಾಸು ಕೊಟ್ಟು ನೋಡಲು ಅರ್ಹವಾಗಿರುವ ಸಿನಿಮಾ ಗೌಳಿ. ತಪ್ಪದೇ ನೋಡಿ.
ಸಿನಿಮಾ ರೇಟಿಂಗ್: 3.5/5