ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Hubballi Dharwad Archives » Dynamic Leader
November 22, 2024
Home Posts tagged Hubballi Dharwad
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ಮತ್ತು ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಹಿನ್ನಲೆಯುಳ್ಳ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ, ಕೊನೆಯವರೆಗೂ ಸತಾಯಿಸಿ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಯಿತು. ಸ್ವಪಕ್ಷದಿಂದಲೇ ಅವಮಾನಿತರಾಗಿ ಸ್ವಾಭಿಮಾನದಿಂದ ಹೊರನಡೆದ ಶೆಟ್ಟರ್, ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆದು ಚುನಾಚಣೆಯಲ್ಲಿ ಸ್ಪರ್ದಿಸಿದರು.

ಶೆಟ್ಟರ್ ಅವರನ್ನು ಸೋಲಿಸಲೇ ಬೇಕು ಎಂಬ ಹಟಕ್ಕೆ ಬಿದ್ದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಂತಾದ ಗಟಾನುಗಟಿ ನಾಯಕರೆಲ್ಲರೂ ಒಂದೆಡೆ ಸೇರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದ ಪ್ರಚಾರವನ್ನು ಮಾಡಿ, ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವಂತೆ ಮಾಡಿದರು. ಇವರನ್ನು ಸೋಲಿಸುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಹಿಸಿಕೊಂಡು ಅದಕ್ಕಾಗಿ ಹಗಲಿರಳು ಶ್ರಮಿಸಿದರು. ಬಿಜೆಪಿ ಪಕ್ಷವು ಒಬ್ಬ ಹಿರಿಯ ಲಿಂಗಾಯಿತ ರಾಜಕಾರಣಿಯನ್ನು ಸೋಲಿಸಲು ಇನ್ನೊಬ್ಬ ಹಿರಿಯ ಲಿಂಗಾಯಿತ ರಾಜಕಾರಣಿಯನ್ನು ಕಣಕ್ಕಿಳಿಸಿ ತಮ್ಮ ಸೇಡನ್ನು ತೀರಿಸಿಕೊಂಡಿತು.  

“ಕೊನೆಯ ಬಾರಿಗೆ ಅವಕಾಶ ನೀಡಿ, ಶಾಸಕನಾಗಿ ಎರಡು ತಿಂಗಳು ಇದ್ದು, ನಂತರ ರಾಜೀನಾಮೆ ಕೊಟ್ಟು ಹೊರನಡೆಯುತ್ತೇನೆ; ನನಗೆ ಯಾವ ಸ್ಥಾನಮಾನವು ಬೇಡ; ಸ್ವಾಭೀಮಾನದ ಬೀಳ್ಕೊಡುಗೆ ಒಂದೇ ಸಾಕು” ಎಂದು ಬಿಜೆಪಿ ವರಿಷ್ಟರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಮನವೆರಗಳಿಲ್ಲ. ಕೊನೆಯದಾಗಿ, ಸ್ವಾಭಿಮಾನಕ್ಕಾಗಿ; ಕ್ಷೇತ್ರದಲ್ಲಿ ಮಾಡಬೇಕಾದ ಅಭಿವೃದ್ಧಿಯ ಕೆಲಸ ಕಾರ್ಯಗಳಿಗಾಗಿ; ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆದರೂ ಮತದಾರರು ಅವರಿಗೆ ಆಶೀರ್ವಾದ ಮಾಡಲಿಲ್ಲ. ಬಿಜೆಪಿ ನಾಯಕರ ಬಣ್ಣದ ಮಾತುಗಳಿಗೆ ಮಾರುಹೋಗಿ ಮಹೇಶ ಟೆಂಗಿನಕಾಯಿ ಅವರಿಗೆ ಆಶೀರ್ವಾದ ಮಾಡಿದರು.

ಟೆಂಗಿನಕಾಯಿ ಅವರು ಶಾಸಕರಾಗಿರುವ ಈ ವೇಳೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿದೆ ಅಧಿಕಾರಕ್ಕೆ ಬಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ (ಅನುದಾನ) ಸಹಾಯಬೇಕು. ಸಹಾಯ ಬೇಕಾದರೆ ಇಂದು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿರುವ ಶೆಟ್ಟರ್ ಅವರ ಸಹಾಯ ಬೇಕು. ಶೆಟ್ಟರ್ ಅವರನ್ನು ದಾಟಿಹೋಗಿ ಸರ್ಕಾರದಲ್ಲಿ ಏನನ್ನೂ ಮಾಡಲು ಮಹೇಶ ಟೆಂಗಿನಕಾಯಿಗೆ ಸಾಧ್ಯವಾಗುವುದಿಲ್ಲ; ಇದು ವಾಸ್ತವದ ಸಂಗತಿ. ಮಹೇಶ ಟೆಂಗಿನಕಾಯಿ ಗೆದ್ದಿದ್ದರೂ ಸೋತಂತೆ; ಜಗದೀಶ್ ಶೆಟ್ಟರ್ ಸೋತರೂ ಗೆದ್ದಂತೆಯೇ.      

ಸಂಘಪರಿವಾರದ ಗರಡಿಯಲ್ಲಿ ಪಳಗಿ, ಬಿಜೆಪಿಯ ಕಟ್ಟಾಳುಗಳಲ್ಲಿ ಪ್ರಮುಖರೂ ಆಗಿದ್ದ ಜಗದೀಶ್ ಶೆಟ್ಟರ್, ಸ್ವಾಭಿಮಾನಕ್ಕಾಗಿ ಅವರೆಲ್ಲರ ಸಂಗಾತ್ಯವನ್ನು ತೊರೆದು. ಇಂದು ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನದಿಂದ ಮೆರೆಯುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರು ಬಿಜೆಪಿಯನ್ನು ತೊರೆಯುವುದಾಗಿ ಘೋಷಿಸಿದ ಕೂಡಲೇ ಕೇಂದ್ರ ಸಚಿವರು ಹಾಗೂ ಚುನಾವಣೆ ಉಸ್ತುವಾರಿಯೂ ಆದ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮುಂತಾದವರೆಲ್ಲರೂ ಅವರ ನಿವಾಸಕ್ಕೆ ತೆರಳಿ, ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು. ಆದರೆ, ಅದಕ್ಕೆ ಒಪ್ಪದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.

ಹಾಗಾಗಿ ಶೆಟ್ಟರ್ ಅವರಿಗೆ ಇದೇ ಸರ್ಕಾರದಲ್ಲಿ ಸೂಕ್ತವಾದ ಜವಾಬ್ದಾರಿಯನ್ನು ನೀಡಿ, ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಆದ್ಯ ಕರ್ತವ್ಯವಾಗಿರುತ್ತದೆ. ಶೆಟ್ಟರ್ ವಿರೋಧಿ ಬಣಗಳಿಗೆ ಅಚ್ಚರಿಯನ್ನು ತರುವ ಹಾಗೆ ಅವರನ್ನು ಈ ಸರ್ವಜನರ ಸರ್ಕಾರವು ನಡೆಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ… ವಿಧಾನಸಭೆಯ ಸಭಾಧ್ಯಕ್ಷರಾಗಿ … ಮುಖ್ಯಮಂತ್ರಿಯಾಗಿ… ಸಚಿವರಾಗಿ ಕೆಲಸ ಮಾಡಿದ ಜಗದೀಶ್ ಶೆಟ್ಟರ್, ಒಟ್ಟು 6 ಬಾರಿ ಶಾಸಕರಾಗಿ ಹುಬ್ಬಳ್ಳಿ-ಧಾರವಾಡದ ಜನತೆಗೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಿದ್ದಾರೆ. ವೃತ್ತಿಯಲ್ಲಿ ವಕೀಲರೂ ಆಗಿರುವ ಜಗದೀಶ್ ಶೆಟ್ಟರ್, ವಿಧಾನಸಭೆಯಲ್ಲಿ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿಯಾಗಿದ್ದಾರೆ.

ಜಗದೀಶ್ ಶೆಟ್ಟರ್ ಅವರಿಗೆ ಈ ಸರ್ಕಾರವು ಸಭಾಧ್ಯಕ್ಷರ ಸ್ಥಾನವನ್ನು ನೀಡಿ, ಗೌರವಿಸಿದರೆ ಅದು ಉತ್ತಮವಾದ ಆಯ್ಕೆಯಾಗಿರುತ್ತದೆ ಎಂಬುದು ನಮ್ಮ ಅನಿಸಿಕೆ. ಸಭಾಧ್ಯಕ್ಷರ ಸ್ಥಾನವನ್ನು ಈ ಹಿಂದೆ ಅಲಂಕರಿಸಿದ ಅನುಭವವೂ ಅವರಿಗಿದೆ. ಮತ್ತು ವಿರೋಧ ಪಕ್ಷದ ಸಾಲಿನಲ್ಲಿ ಕೂರುವ ಬಿಜೆಪಿಯವರನ್ನು ಗದರಿಸಿ ಕೂರಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡುವುದೇ ಈ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವಾಗಿರುತ್ತದೆ. ಅವರನ್ನು ಸೋಲಿಸಲು ಟೊಂಕ ಕಟ್ಟಿ ನಿಂತ ಬಿಜೆಪಿಯ ಸದಸ್ಯರು, ವಿಧಾನಸಭೆಯಲ್ಲಿ  ಎದ್ದು ನಿಂತು “ಮಾನ್ಯ ಅಧ್ಯಕ್ಷರೇ” ಎಂದು ಅವರನ್ನು ಕರೆಯುಂವತೆ ಈ ಸರ್ಕಾರ ಮಾಡುವುದಾದರೆ, ಅದು ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವನ್ನು ತಂದು ಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.