ಕೊಯಮತ್ತೂರು: ಕೊಯಮತ್ತೂರಿನಲ್ಲಿ ಎನ್‌ಐಎ ದಾಳಿಯ ಹೆಸರಿನಲ್ಲಿ ಮುಸ್ಲಿಂ ಜನರನ್ನು ಭಯೋತ್ಪಾದಕರಂತೆ ಬಿಂಬಿಸುವುದನ್ನು ಒಪ್ಪಲಾಗದು ಎಂದು ‘ಮನಿದನೇಯ ಮಕ್ಕಳ್ ಕಚ್ಚಿ’ ಮುಖ್ಯಸ್ಥ ಜವಾಹಿರುಲ್ಲಾ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವರ್ಷ ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟ ಘಟನೆಯನ್ನು ಮುಂದಿಟ್ಟುಕೊಂಡು ಎನ್‌ಐಎ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ.
ಕಾರ್ ಬಾಂಬ್ ದಾಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅರೇಬಿಕ್ ಅಧ್ಯಯನ ಮಾಡಿದ ಮಾಜಿ ವಿದ್ಯಾರ್ಥಿಗಳ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಮುಂಜಾನೆ ವೇಳೆಯಲ್ಲಿ ಅವರ ಮನೆಯ ಬಾಗಿಲು ಮುರಿದಂತೆ ಬಡಿದು, ತನಿಖೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ, ಮುಸ್ಲಿಂ ಬಾಂಧವರನ್ನು ಜನರಲ್ಲಿ ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಖಂಡನೀಯ. ಅವರು (ಎನ್ಐಎ) ಇದನ್ನು ಬದಲಾಯಿಸಿಕೊಳ್ಳಬೇಕು” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಜವಾಹಿರುಲ್ಲಾ, “ಅರೇಬಿಕ್ ಭಾಷೆ ವಿಶ್ವದ ಹಲವು ದೇಶಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಅರೇಬಿಕ್ ಅಧ್ಯಯನ ಮಾಡಿದ ಮಾಜಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಕುಟುಂಬಗಳನ್ನು ತನಿಖೆಯ ಹೆಸರಿನಲ್ಲಿ ಎನ್ಐಎ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮುಸ್ಲಿಂ ಬಾಂಧವರ ಭವಿಷ್ಯವನ್ನು ಹಾಳುಮಾಡಿದ್ದಾರೆ. ಅವರ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ನಿರ್ದಿಷ್ಟವಾಗಿ ಅವರನ್ನು ಭಯೋತ್ಪಾದಕರಂತೆ ಚಿತ್ರಿಸಿ, ಮನೆಯನ್ನು ಖಾಲಿ ಮಾಡುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ.
ಕೊಯಮತ್ತೂರು ಭಯೋತ್ಪಾದಕರ ಶಿಬಿರ ಎಂಬ ಚಿತ್ರಣವನ್ನು ಎನ್‌ಐಎ ಸೃಷ್ಟಿಸುತ್ತಿದೆ. ಮಾಲೆಗಾಂವ್ ಸ್ಫೋಟ ನಡೆಸಿದವರು ಯಾರು? ಅಭಿನವ್ ಭಾರತ್ ಎಂಬ ಸಂಘಟನೆಯೇ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಎಂಬ ವಿಷಯವನ್ನು ನಾವೇ (ಇಸ್ಲಾಮಿಕ್ ಸಂಸ್ಥೆಗಳು) ಕಂಡುಹಿಡಿದು ಹೇಳಿದ್ದು. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಎನ್‌ಐಎ ಮೊಕದ್ದಮೆಗಳನ್ನು ದಾಖಲಿಸಿ ಶಿಕ್ಷೆ ನೀಡುತ್ತಿದೆ” ಎಂದರು.
“ಮೊಹಮದ್ ಅಜರುದ್ದೀನ್ ಈಗಾಗಲೇ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಾರು ಸ್ಫೋಟ ಘಟನೆಗೂ, ಅರೇಬಿಕ್ ಭಾಷೆ ಓದಿದ ವಿದ್ಯಾರ್ಥಿಗಳಿಗೂ ಸಂಬಂಧ ಕಲ್ಪಿಸಿ ಎನ್ಐಎ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದು ಹೇಳಿದ್ದಾರೆ. ಪತ್ರಿಕಾ ಘೋಷ್ಠಿಯಲ್ಲಿ ತಂದೆ ಪೆರಿಯಾರ್ ದ್ರಾವಿಡರ್ ಕಳಗಂ ಅಧ್ಯಕ್ಷ ಕೋವೈ ರಾಮಕೃಷ್ಣನ್ ಉಪಸ್ಥಿತರಿದ್ದರು.