ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Kannada Cinema Archives » Dynamic Leader
October 23, 2024
Home Posts tagged Kannada Cinema
ಸಿನಿಮಾ

 ಅರುಣ್ ಜಿ

ಮಂಗಳೂರು: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ “ರವಿಕೆ ಪ್ರಸಂಗ” ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. “ರವಿಕೆ ಪ್ರಸಂಗ” ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ “ರವಿಕೆ ಪ್ರಸಂಗ”. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು “ರವಿಕೆ ಪ್ರಸಂಗ” ಸಿನಿಮಾದಲ್ಲಿ ಮಾಡಿದ್ದಾರೆ.

‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

ರವಿಕೆ ಪ್ರಸಂಗ ಸಿನಿಮಾವನ್ನು ‘ಮಾಷ್೯ ಡಿಸ್ಟ್ರಿಬ್ಯುಟರ್ಸ್’ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.

ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್  ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ, ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’.

ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.  ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ‘ರವಿಕೆಪ್ರಸಂಗ’ ರಾಜ್ಯಾದ್ಯಂತ ತೆರೆಕಾಣಲಿದೆ.

ಸಿನಿಮಾ

ಅರುಣ್ ಜಿ  

ಸಂಕ್ರಾಂತಿ ಹಬ್ಬದಂದು ಆರಂಭವಾದ ಈ ಚಿತ್ರಕ್ಕೆ ಯೋಗರಾಜ್ ಭಟ್ಟರ ಶಿಷ್ಯ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶನ.

ಮಕರ ಸಂಕ್ರಾಂತಿ ಪರ್ವದಿನದಂದು ಯೋಗರಾಜ್ ಸಿನಿಮಾಸ್ ಹಾಗೂ ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಯೋಗರಾಜ್ ಭಟ್, ವಿದ್ಯಾ ಹಾಗೂ ಸಂತೋಷ್ ಕುಮಾರ ಅವರು ನಿರ್ಮಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ವಿನಾಯಕ ಸತ್ಯ ಗಣಪತಿ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ನೆರವೇರಿತು. ಯೋಗರಾಜ್ ಭಟ್ ಅವರ ಜೊತೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದಲ್ಲಿ  “ಕಾಮಿಡಿ ಕಿಲಾಡಿಗಳು” ಸೀಸನ್ 2 ವಿಜೇತ ಮನು ಮಡೆನೂರ್ ನಾಯಕನಾಗಿ ನಟಿಸುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

“ಕುಲದಲ್ಲಿ ಕೀಳ್ಯಾವುದೋ” ಅಚ್ಚ ಕನ್ನಡದ ಶೀರ್ಷಿಕೆ ಎಂದು ಮಾತು ಆರಂಭಿಸಿದ ಯೋಗರಾಜ್ ಭಟ್,  ಈಗಲೂ ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಹೇಳುವ ಕೊನೆಯ ಮಂಗಳಗೀತೆಯೂ ಹೌದು. ಈ ಶೀರ್ಷಿಕೆ ನಾಲ್ಕು ವರ್ಷಗಳಿಂದ ನನ್ನ ಹತ್ತಿರವಿತ್ತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಯೋಗಿ ಗೌಡ ಮತ್ತು ನಿರ್ದೇಶನ ಮಾಡುತ್ತಿರುವ ಶ್ರೇಯಸ್ ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ಈ ಶೀರ್ಷಿಕೆ  ಇಡಲು ಹೇಳಿದೆ. ಅವರು ಒಪ್ಪಿದರು. ನಾನು, ಸಂತೋಷ್ ಕುಮಾರ್ ಹಾಗೂ ವಿದ್ಯಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಮನು ಮಡೆನೂರ್ ನಾಯಕನಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ ಪ್ರಮುಖ ಪಾತ್ರಧಾರಿಗಳಾಗಿ ನಟಿಸುತ್ತಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನ ಹಾಗೂ ನಿರಂಜನ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.

ಇದು 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮೊದಲು ಮನು ಮಡೆನೂರ್ ಅವರಿಗೆ ಕಾಮಿಡಿ ಜಾನರ್ ನ ಕಥೆ ಮಾಡುವುದು ಅಂದುಕೊಂಡಿದ್ದೆ. ಮನು ಅವರನ್ನು ಈಗಾಗಲೇ ಕಾಮಿಡಿ ಮೂಲಕವೇ ಜನರು ಗುರುತಿಸಿದ್ದಾರೆ. ಹಾಗಾಗಿ ಆ ಜಾನರ್ ಬೇಡ. ಬೇರೆ ಜಾನರ್ ನ ಕಥೆ ಮಾಡೋಣ ಅಂದುಕೊಂಡು ಈ ಕಥೆ ಸಿದ್ದಮಾಡಿಕೊಂಡಿದ್ದೇನೆ. ಚಿತ್ರದ ಕಥೆ ಸಿದ್ದವಾಯಿತು. ಕ್ಲೈಮ್ಯಾಕ್ಸ್ ಬಗ್ಗೆ ಯೋಚಿಸುತ್ತಿದ್ದೆ. ಗುರುಗಳಾದ ಯೋಗರಾಜ್ ಭಟ್ ಅವರು ಅದ್ಭುತ ಕ್ಲೈಮ್ಯಾಕ್ಸ್ ನೀಡಿದ್ದಾರೆ ಎಂದರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಯೋಗಿ ಗೌಡ.

ನನಗೆ ಮಧ್ಯರಾತ್ರಿ ಸಮಯದಲ್ಲಿ ಯೋಗರಾಜ್ ಸಿನಿಮಾಸ್ ನಿಂದ ಕರೆಮಾಡಿ ನೀವೇ ಈ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಹೇಳಿದಾಗ ಆಶ್ಚರ್ಯವಾಯಿತು. ಅವರು ನಂಬಿ ಕೊಟ್ಟಿರುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದಾಗಿ ನಿರ್ದೇಶಕ ಶ್ರೇಯಸ್ ರಾಜ್ ಶೆಟ್ಟಿ ಹೇಳಿದರು.

ನಾನು ಈ ಮಟ್ಟಕ್ಕೆ ಏರಲು ಕಾರಣ “ಕಾಮಿಡಿ ಕಿಲಾಡಿಗಳು” ಕಾರ್ಯಕ್ರಮ. ಈ ಸಂದರ್ಭದಲ್ಲಿ ನಾನು ಜಗ್ಗೇಶ್, ರಕ್ಷಿತ ಹಾಗೂ ಯೋಗರಾಜ್ ಭಟ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು ನನ್ನ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಯೋಗರಾಜ್ ಭಟ್, ಸಂತೋಷ್ ಕುಮಾರ್ ಹಾಗೂ ವಿದ್ಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ನಾಯಕ ಮನು ಮಡೆನೂರ್ ತಿಳಿಸಿದರು.

ನಾಯಕಿ ಸೋನಾಲ್ ಮೊಂತೆರೊ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ, ಸಂಗೀತ ನಿರ್ದೇಶಕ ಮನೋಮೂರ್ತಿ, ನಿರ್ಮಾಣ ಸಾರಥ್ಯ ಹೊತ್ತಿರುವ ರೇಣುಕಾ ಯೋಗರಾಜ್ ಭಟ್ ಈ ಚಿತ್ರದ ಬಗ್ಗೆ ಮಾತನಾಡಿದರು.

ಯೋಗರಾಜ್ ಭಟ್ ಅವರ ಜೊತೆ ಸಿನಿಮಾ‌ ನಿರ್ಮಿಸುತ್ತಿರುವುದಕ್ಕೆ ನಿರ್ಮಾಪಕರಾದ ಸಂತೋಷ್ ಕುಮಾರ್ ಹಾಗೂ ವಿದ್ಯಾ ಸಂತೋಷ ವ್ಯಕ್ತಪಡಿಸಿದರು.

ಸಿನಿಮಾ

ವರದಿ:ಅರುಣ್ ಜಿ.,

ಬೆಂಗಳೂರು: ಸೋನು ಫಿಲಂಸ್ ಲಾಂಛನದಲ್ಲಿ ಕೆ.ಮಂಜುನಾಥ್ ನಾಯಕ್ ಅವರು ನಿರ್ಮಾಣ ಮಾಡಿರುವ ಚಿತ್ರ “ಅರಳಿದ ಹೂವುಗಳು” ಚಿತ್ರದುರ್ಗದ ಶಿಕ್ಷಕರು ಹಾಗೂ ಸಾಹಿತಿಗಳೂ ಆದ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಹೆಣ್ಣು ಅಬಲೆಯಲ್ಲ ಸಬಲೆ, ಆಕೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶ ಹೊತ್ತು ಬರುತ್ತಿರುವ ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವವರು ಬಿ.ಎ.ಪುರುಷೋತ್ತಮ್ ಓಂಕಾರ್. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಮಂಜುನಾಥ್ ಈ ಹಿಂದೆ ಸೀತಮ್ಮನ ಮಗ ಚಿತ್ರ ನಿರ್ಮಿಸಿದ್ದೆ. 100 ಸಿನಿಮಾ ಮಾಡಿದ ಅನುಭವವನ್ನು ಅದೊಂದೇ ಸಿನಿಮಾ ನೀಡಿತು.

ಕಳೆದ ವರ್ಷ ನಾನೇ ಬರೆದ ಕಾದಂಬರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ನಿರ್ಧರಿಸಿ ಈ ಚಿತ್ರಕ್ಕೆ ‌ಕೈ ಹಾಕಿದೆ. ಅಲ್ಲದೆ ಪುರುಷೋತ್ತಮ್ ಅವರ ಪ್ಲಾನ್ ನನಗೆ ಇಷ್ಟವಾಯಿತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಸಮಾಜಕ್ಕೆ ಒಂದು ಸಂದೇಶ ಕೊಡಬೇಕು ಎಂಬುದು ನನ್ನ ಉದ್ದೇಶ. ಚಿತ್ರದ 63 ಸೀನ್‌ಗಳಲ್ಲೂ ಒಂದೊಂದು ಸಂದೇಶ ಹೇಳಿದ್ದೇವೆ. ಪುರುಷೋತ್ತಮ್ ಅವರ ಕಾರಣದಿಂದಲೇ ನಿಂತುಹೋಗಬೇಕಿದ್ದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಜೂನ್ 9ಕ್ಕೆ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಇಡೀ ಚಿತ್ರವನ್ನು ಚಿತ್ರದುರ್ಗದ ಚಂದವಳ್ಳಿಯ ತೋಟ, ಕಾಲೇಜು, ಕೋಟೆಯ ಸುತ್ತಮುತ್ತ 30 ದಿನಗಳ ಕಾಲ  ಚಿತ್ರೀಕರಿಸಿದ್ದೇವೆ ಎಂದರು.

ನಿರ್ದೇಶಕ ಪುರುಷೋತ್ತಮ್ ಮಾತನಾಡಿ, “ಹೆಣ್ಣು ಅಬಲೆಯಲ್ಲ ಸಬಲೆ, ಅವಮಾನ  ಮಾಡಿದವರ, ಆಡಿಕೊಂಡವರ ಮುಂದೆ ಗೆದ್ದು, ಸಾಧನೆ ಮಾಡಿ ಎಲ್ಲರೆದುರು ತಲೆಯೆತ್ತಿ ನಿಲ್ಲಬೇಕು. ಸಾವೇ ಕೊನೆ ಹಂತ ಎಂದು ನಿರ್ಧರಿಸಬಾರದು. ಕಷ್ಟ ಬಂದಿದೆ, ಮೋಸ ಹೋಗಿದ್ದೇನೆಂದು ಹೆದರಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ಛಲದಿಂದ ಗೆಲ್ಲುವುದೇ ಸಾಧನೆ. ಆಗಲೇ ನಮ್ಮ ಜೀವನ ಅರಳಿದ ಹೂವುಗಳು ಆಗುತ್ತದೆ ಎನ್ನುವುದೇ ಈ ಚಿತ್ರದ ಕಥೆ” ಎಂದು ಹೇಳಿದರು.

ಇನ್ನು ಈ ಚಿತ್ರದ ನಾಲ್ಕು ಹಾಡುಗಳಿಗೆ ರಾಜ್ ಭಾಸ್ಕರ್ ಅವರ ಸಂಗೀತ ಸಂಯೋಜನೆ ಇದ್ದು, ಮುತ್ತುರಾಜ್  ಅವರ ಛಾಯಾಗ್ರಹಣ, ಕವಿತಾ ಭಂಡಾರಿ ಅವರ ಸಂಕಲನವಿದೆ. ಚಿತ್ರದ ಸಹ ನಿರ್ಮಾಪಕರಾಗಿ ಸುಮೀತ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಕೆ.ಮಂಜುನಾಥ್ ನಾಯಕ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನಲಕ್ಷ್ಮಿ ಭಾಗ್ಯಶ್ರೀ, ಶಶಿಕಲಾ, ಸುಲೋಚನ, ರಂಜಿತ್, ಗಂಚು ಕುಮಾರ್, ಅಪ್ಪು ಮಂಜುಳಾ, ವಿಶ್ವ ಡುಮ್ಮು ಉಳಿದ ಪಾತ್ರವರ್ಗದಲ್ಲಿದ್ದಾರೆ. ಜಯಲಕ್ಷ್ಮಿ ಫಿಲಂಸ್‌ನ ರಾಜು ಅವರು ಈ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತ ಬಂದಿರುವ ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. 

ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ. ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಡೈಮಂಡ್ ಬಟನ್ ಸಿಕ್ಕಿದೆ. 

ಮೇ 24, ಆನಂದ್ ಆಡಿಯೋ ಮಾಲೀಕರಾದ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ.  ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಧನ್ಯವಾದಗಳನ್ನು ತಿಳಿಸಿದ್ದಾರೆ

ಸಿನಿಮಾ

ವರದಿ: ಅರುಣ್ ಜಿ.,

‘ಸೈಂಧವ್’ ಸಿನಿಮಾ ಮೂಲಕ ಟಾಲಿವುಡ್ ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ; ವಿಕ್ಟರಿ ವೆಂಕಟೇಶ್‌ಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್.

ಬಾಲಿವುಡ್ ಕಂಡ ಅತ್ಯದ್ಭುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರು‌ ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ, ಸೈಂಧವ್ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರೀಯತ್ತ ಹೆಜ್ಜೆ ಇಟ್ಟಿದ್ದಾರೆ. 

ಇದನ್ನೂ ಓದಿ: ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು “ಸೈರನ್” ಟ್ರೇಲರ್: ಮೇ 26 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆ!

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’. ಶೈಲೇಶ್ ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ,  ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. 

ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ.ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್.ಮಣಿಕಂಡನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.

ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ: ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’ ಉಚಿತ!

ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ‘ಸೈಂಧವ್‌’ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ‘ಸೈಂಧವ್’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಡಿಸೆಂಬರ್ 22 ರಂದು ಕ್ರಿಸ್ಮಸ್ ಹಬ್ಬದಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.‌

ಸಿನಿಮಾ

ವರದಿ: ಅರುಣ್ ಜಿ.,

ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ “ಸೈರನ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ‌ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ‌. ಚಿತ್ರ ಮೇ 26 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಡೆಕ್ಕನ್ ಕಿಂಗ್ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ರಾಜಾ ವೆಂಕಯ್ಯ ಕೆಲಸ ಮಾಡಿದ್ದಾರೆ. “ಸೈರನ್” ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ್, ‘ಪ್ರವೀರ್ ಶೆಟ್ಟಿ ಅವರನ್ನು ಮೊದಲು ನೋಡಿದಾಗ ಚಿಕ್ಕ ಹುಡುಗ. ಈಗ ಹೀರೋ ಆಗಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹೆಚ್ಚಾಗಿ ಅವಕಾಶ ಸಿಗಲಿ’ ಎಂದು ಹಾರೈಸಿದರು.

ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ: ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’ ಉಚಿತ!

‘ಕನ್ನಡ ಎಂದು ಬಂದಾಗ ಹೋರಾಟ ನೆನಪಾಗುತ್ತದೆ. ನಾನು ಹಲವಾರು ವರ್ಷಗಳಿಂದ ಪ್ರವೀಣ್ ಶೆಟ್ಟಿ ಅವರನ್ನು ನೋಡುತ್ತಾ ಬಂದಿದ್ದೇನೆ. ಅವರ ಮನೆಯಿಂದ ಚಿತ್ರರಂಗಕ್ಕೆ ಒಂದು ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು ಜೊತೆಗೆ ತಾಳ್ಮೆ ಇರಬೇಕು’ ಎಂದರು ರಾಕ್ ಲೈನ್ ವೆಂಕಟೇಶ್. 

ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ‘ನಾನು ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆ.  ಶ್ರೀಮುರಳಿ ಅವರು ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಿದೆ. ನಿರ್ದೇಶಕರು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು. 

‘ಮೂಲತಃ ನಾನು ಚೆನ್ನೈನವನು. “ಸೈರನ್” ಚಿತ್ರದ ಮೂಲಕ ಪ್ರವೀರ್ ಶೆಟ್ಟಿ ಲಾಂಚ್ ಆಗುತ್ತಿದ್ದಾರೆ. ಒಳ್ಳೆಯ  ನಟನಾಗುವ ನಿರೀಕ್ಷೆ ಇದೆ’ ಎಂದರು ತಮಿಳು ನಟ ದೀನಾ, ಚಿತ್ರದ ನಾಯಕಿ ಲಾಸ್ಯ, ನಟಿ ಸ್ಪರ್ಶ ರೇಖಾ, ಸಂಗೀತ ನಿರ್ದೇಶಕ ಭಾರದ್ವಾಜ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಸಿನಿಮಾ

ವರದಿ: ಅರುಣ್ ಜಿ.,

ಇಂದಿನ ವಿದ್ಯಾರ್ಥಿಗಳೆ ಮುಂದಿನ ಸತ್ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು  ಕುರಿತಾದ ಕಥಾಹಂದರ ಹೊಂದಿರುವ “SCAM (1770)” ಚಿತ್ರ ಬರುತ್ತಿದೆ. 

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ,  ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು  20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು. ಆ ತಂಡಗಳ ನಾಯಕರು (ವಿದ್ಯಾರ್ಥಿಗಳು) “SCAM (1770)” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ  ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾನೆ SCAM (1770) ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ. 

ಡಿ.ಕ್ರಿಯೇಷನ್ಸ್ ಇತ್ತೀಚೆಗೆ ಆಕ್ಟ್-1978 ಮತ್ತು 19.20.21 ಎಂಬ ಸದಭಿರುಚಿ ಚಿತ್ರಗಳನ್ನು ನೀಡಿದ್ದು,  ದೇವರಾಜ್ ಆರ್ ಅವರ ನಿರ್ಮಾಣದ ಈ ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ನೇತ್ರಾವತಿ (ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರ ಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ. ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್ (ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಈಗಾಗಲೇ “SCAM (1770)” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ದವಾಗಲಿದೆ.

ಏಪ್ರಿಲ್ 15 ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.