ವರದಿ:ಅರುಣ್ ಜಿ.,
ಬೆಂಗಳೂರು: ಸೋನು ಫಿಲಂಸ್ ಲಾಂಛನದಲ್ಲಿ ಕೆ.ಮಂಜುನಾಥ್ ನಾಯಕ್ ಅವರು ನಿರ್ಮಾಣ ಮಾಡಿರುವ ಚಿತ್ರ “ಅರಳಿದ ಹೂವುಗಳು” ಚಿತ್ರದುರ್ಗದ ಶಿಕ್ಷಕರು ಹಾಗೂ ಸಾಹಿತಿಗಳೂ ಆದ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಹೆಣ್ಣು ಅಬಲೆಯಲ್ಲ ಸಬಲೆ, ಆಕೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶ ಹೊತ್ತು ಬರುತ್ತಿರುವ ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವವರು ಬಿ.ಎ.ಪುರುಷೋತ್ತಮ್ ಓಂಕಾರ್. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಮಂಜುನಾಥ್ ಈ ಹಿಂದೆ ಸೀತಮ್ಮನ ಮಗ ಚಿತ್ರ ನಿರ್ಮಿಸಿದ್ದೆ. 100 ಸಿನಿಮಾ ಮಾಡಿದ ಅನುಭವವನ್ನು ಅದೊಂದೇ ಸಿನಿಮಾ ನೀಡಿತು.
ಕಳೆದ ವರ್ಷ ನಾನೇ ಬರೆದ ಕಾದಂಬರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ನಿರ್ಧರಿಸಿ ಈ ಚಿತ್ರಕ್ಕೆ ಕೈ ಹಾಕಿದೆ. ಅಲ್ಲದೆ ಪುರುಷೋತ್ತಮ್ ಅವರ ಪ್ಲಾನ್ ನನಗೆ ಇಷ್ಟವಾಯಿತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಸಮಾಜಕ್ಕೆ ಒಂದು ಸಂದೇಶ ಕೊಡಬೇಕು ಎಂಬುದು ನನ್ನ ಉದ್ದೇಶ. ಚಿತ್ರದ 63 ಸೀನ್‌ಗಳಲ್ಲೂ ಒಂದೊಂದು ಸಂದೇಶ ಹೇಳಿದ್ದೇವೆ. ಪುರುಷೋತ್ತಮ್ ಅವರ ಕಾರಣದಿಂದಲೇ ನಿಂತುಹೋಗಬೇಕಿದ್ದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಜೂನ್ 9ಕ್ಕೆ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಇಡೀ ಚಿತ್ರವನ್ನು ಚಿತ್ರದುರ್ಗದ ಚಂದವಳ್ಳಿಯ ತೋಟ, ಕಾಲೇಜು, ಕೋಟೆಯ ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಎಂದರು.
ನಿರ್ದೇಶಕ ಪುರುಷೋತ್ತಮ್ ಮಾತನಾಡಿ, “ಹೆಣ್ಣು ಅಬಲೆಯಲ್ಲ ಸಬಲೆ, ಅವಮಾನ ಮಾಡಿದವರ, ಆಡಿಕೊಂಡವರ ಮುಂದೆ ಗೆದ್ದು, ಸಾಧನೆ ಮಾಡಿ ಎಲ್ಲರೆದುರು ತಲೆಯೆತ್ತಿ ನಿಲ್ಲಬೇಕು. ಸಾವೇ ಕೊನೆ ಹಂತ ಎಂದು ನಿರ್ಧರಿಸಬಾರದು. ಕಷ್ಟ ಬಂದಿದೆ, ಮೋಸ ಹೋಗಿದ್ದೇನೆಂದು ಹೆದರಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ಛಲದಿಂದ ಗೆಲ್ಲುವುದೇ ಸಾಧನೆ. ಆಗಲೇ ನಮ್ಮ ಜೀವನ ಅರಳಿದ ಹೂವುಗಳು ಆಗುತ್ತದೆ ಎನ್ನುವುದೇ ಈ ಚಿತ್ರದ ಕಥೆ” ಎಂದು ಹೇಳಿದರು.
ಇನ್ನು ಈ ಚಿತ್ರದ ನಾಲ್ಕು ಹಾಡುಗಳಿಗೆ ರಾಜ್ ಭಾಸ್ಕರ್ ಅವರ ಸಂಗೀತ ಸಂಯೋಜನೆ ಇದ್ದು, ಮುತ್ತುರಾಜ್ ಅವರ ಛಾಯಾಗ್ರಹಣ, ಕವಿತಾ ಭಂಡಾರಿ ಅವರ ಸಂಕಲನವಿದೆ. ಚಿತ್ರದ ಸಹ ನಿರ್ಮಾಪಕರಾಗಿ ಸುಮೀತ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಕೆ.ಮಂಜುನಾಥ್ ನಾಯಕ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನಲಕ್ಷ್ಮಿ ಭಾಗ್ಯಶ್ರೀ, ಶಶಿಕಲಾ, ಸುಲೋಚನ, ರಂಜಿತ್, ಗಂಚು ಕುಮಾರ್, ಅಪ್ಪು ಮಂಜುಳಾ, ವಿಶ್ವ ಡುಮ್ಮು ಉಳಿದ ಪಾತ್ರವರ್ಗದಲ್ಲಿದ್ದಾರೆ. ಜಯಲಕ್ಷ್ಮಿ ಫಿಲಂಸ್‌ನ ರಾಜು ಅವರು ಈ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.