ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Kannada News Archives » Dynamic Leader
October 23, 2024
Home Posts tagged Kannada News
ದೇಶ ರಾಜಕೀಯ

ಹೈದರಾಬಾದ್: ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಸ್ವಂತ ಮನೆ ಕಟ್ಟಿಕೊಂಡು ಮಗನಿಗೆ ಮದುವೆಯನ್ನೂ ಮಾಡಿದ್ದೇನೆ ಎಂದು ತೆಲಂಗಾಣ ಬಿಜೆಪಿ ಸಂಸದ ಸೋಯಂ ಬಾಪುರಾವ್ ಹೇಳಿರುವ ಮಾತು ವಿವಾದಕ್ಕೆ ಕಾರಣವಾಗಿದೆ.

ಪ್ರತಿಯೊಬ್ಬ ಸಂಸದರಿಗೂ ಕ್ಷೇತ್ರ ಅಭಿವೃದ್ಧಿ ನಿಧಿ ಯೋಜನೆಯಡಿ (MPLADS) ಮಂಜೂರು ಮಾಡುವ ಹಣವನ್ನು, ಅವರ ಕ್ಷೇತ್ರಗಳಲ್ಲಿ ವರ್ಷಕ್ಕೆ ರೂ.5 ಕೋಟಿ ವರೆಗೆ ಖರ್ಚು ಮಾಡಿ, ಅಭಿವೃದ್ಧಿ ಮತ್ತು ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಬೇಕು. ಇದನ್ನು ಕೇಂದ್ರ ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ.

https://twitter.com/KP_Aashish/status/1670710328638988288?s=20

ಈ ಹಿನ್ನಲೆಯಲ್ಲಿ, ತೆಲಂಗಾಣ ರಾಜ್ಯ ಆದಿಲಾಬಾದ್ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದ ಸೋಯಂ ಬಾಪುರಾವ್, ಇತ್ತೀಚೆಗೆ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ “ಇತ್ತೀಚೆಗೆ ನನ್ನ ಕ್ಷೇತ್ರದ ಅಭಿವೃದ್ಧಿಗೆ 2.5 ಕೋಟಿ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು, ಈ ಹಣದಲ್ಲಿ ಸ್ವಂತವಾಗಿ ಮನೆ ಕಟ್ಟಿದ್ದೇನೆ; ಮಗನ ಮದುವೆಗೆ ಖರ್ಚು ಮಾಡಿದ್ದೇನೆ”  ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ರಾಜಕೀಯ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಆರು ಕುಟುಂಬಗಳಿಗೆ ತಲಾ ರೂ.25 ಲಕ್ಷ ಮೊತ್ತದ ಚೆಕ್ ಗಳನ್ನು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ವಸತಿ ಇಲಾಖೆ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್, ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ, ಮಾಜಿ ಸಚಿವ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮುಂತಾದವರು ಪಾಲ್ಗೊಂಡಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಬಳಿಕ ಸರ್ಕಾರದ ತಾರತಮ್ಯ ನೀತಿಯಿಂದ ವಂಚನೆಗೆ ಒಳಗಾಗಿದ್ದ ಆರು ಕುಟುಂಬಗಳಿಗೆ ತಲಾ ರೂ. 25 ಲಕ್ಷ ಮೊತ್ತದ ಪರಿಹಾರ ಚೆಕ್ ಗಳನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿ ಮಾತನಾಡಿದರು.

“ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯ. ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಸರ್ಕಾರ ಮಾಡಿದ್ದ ತಾರತಮ್ಯವನ್ನು ನಾವು ಸರಿಪಡಿಸಿದ್ದೇವೆ.

ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದೇನೆ” ಎಂದು ಮುಖ್ಯಮಂತ್ರಿ ಹೇಳಿದರು.

ರಾಜಕೀಯ

ಬೆಂಗಳೂರು: ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಂತೆ ತೆಲಂಗಾಣ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರು, ವೈಎಸ್ಆರ್ ತೆಲಂಗಾಣ ಪಕ್ಷದ ನಾಯಕಿಯಾಗಿದ್ದಾರೆ. ತೆಲಂಗಾಣದಲ್ಲಿ ಆಡಳಿತ ಪಕ್ಷದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.

ರಾಜ್ಯಾದ್ಯಂತ ಪಾದಯಾತ್ರೆ ನಡೆಸಿ ಪಕ್ಷವನ್ನು ಬಲಪಡಿಸಿದ್ದಾರೆ. ಶರ್ಮಿಳಾ ಅವರ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಬಲಗೊಳ್ಳಲಿದೆ. ಇದಕ್ಕಾಗಿ ಶರ್ಮಿಳಾ ಜೊತೆ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಶರ್ಮಿಳಾ 2 ಬಾರಿ ಭೇಟಿ ಮಾಡಿದ್ದಾರೆ. ಆದರೆ, ‘ಇದು ಸೌಜನ್ಯದ ಭೇಟಿ, ಇದರಲ್ಲಿ ರಾಜಕೀಯ ಏನಿಲ್ಲ, ಡಿ.ಕೆ.ಶಿವಕುಮಾರ್ ಅವರು ನಮ್ಮ ಕುಟುಂಬದ ಸ್ನೇಹಿತರು’ ಎಂದು ಶರ್ಮಿಳಾ ಹೇಳಿದ್ದಾರೆ.

ತೆಲಂಗಾಣದಲ್ಲಿ ಈ ವರ್ಷ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ. ರಾಮಚಂದ್ರ ರಾವ್ ಮತ್ತು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶರ್ಮಿಳಾ ಅವರೊಂದಿಗೆ ಕಾಂಗ್ರೆಸ್ ಪಕ್ಷ ಸೇರಲು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ.

ತರುವಾಯ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷಕ್ಕೆ ವಿಲೀನಗೊಳಿಸಲು ಶರ್ಮಿಳಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಇದೆ. ಹಾಗೆ ವಿಲೀನವಾದರೆ ತೆಲಂಗಾಣ ರಾಜ್ಯದ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶರ್ಮಿಳಾ ಅವರನ್ನು ಘೋಷಿಸಲಾಗುವುದು ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ.

ಇದು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ದೇಶ ರಾಜಕೀಯ

ಜುನಾಗಢ್: ಗುಜರಾತ್‌ನ ಜುನಾಗಢ್‌ನಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ, ಅಕ್ರಮವಾಗಿ ದರ್ಗಾವನ್ನು ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿರುವ ಮುನ್ಸಿಪಲ್ ಕಾರ್ಪೊರೇಷನ್, ಅದನ್ನು ಕೆಡವಲು ಮುಂದಾಗಿ ನೋಟಿಸ್‌ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ಘರ್ಷಣೆಗಳು ಭುಗಿಲೆದ್ದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ. ಮತ್ತು ಉಪ ಪೊಲೀಸ್ ಅಧೀಕ್ಷಕರು ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಈ ಹಿನ್ನಲೆಯಲ್ಲಿ, ಗುಜರಾತ್‌ನ ಜುನಾಗಢದಲ್ಲಿ ನಡೆದ ಹಿಂಸಾಚಾರದ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ಅಪ್ರಾಪ್ತ ವಯಸ್ಕರ ಮೇಲೆ, ಏಳು ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಸೂಚಿಸಿದೆ. ಶುಕ್ರವಾರ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಅಪ್ರಾಪ್ತ ವಯಸ್ಕರು ಭಾಗವಹಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಭಾನುವಾರ ಜುನಾಗಢ್ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದೆ.

ಪೊಲೀಸ್ ವರಿಷ್ಠಾಧಿಕಾರಿಗೆ (SP) ಬರೆದ ಪತ್ರದಲ್ಲಿ ವೀಡಿಯೊವನ್ನು ಉಲ್ಲೇಖಿಸಲಾಗಿದೆ ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಅನೇಕ ಅಪ್ರಾಪ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದನ್ನು ನೋಡಲಾಗಿದೆ ಎಂದು ಹೇಳಲಾಗಿದೆ. ದರ್ಗಾವನ್ನು ಧ್ವಂಸಗೊಳಿಸುವ ಸೂಚನೆಯನ್ನು ಹೊರ ಹಾಕಿದ ನಂತರ, ಕನಿಷ್ಠ 200-300 ಜನರು ದರ್ಗಾದ ಸುತ್ತಲೂ ಜಮಾಯಿಸಿದ್ದರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಿದರು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗುಜರಾತ್ ಜುನಾಗಢ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ್ದ ದರ್ಗಾವನ್ನು ತೆರವುಗೊಳಿಸುವ ವಿಚಾರದಲ್ಲಿ ಗಲಭೆ: ಓರ್ವ ಸಾವು!

NCPCRನ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಎಸ್‌ಪಿಗೆ ಬರೆದ ಪತ್ರದಲ್ಲಿ ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಏಳು ದಿನಗಳೊಳಗೆ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಜೊತೆಗೆ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 83(2) ಮತ್ತು 75ರ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಾಪರಾಧಿ ಕಾಯಿದೆಯ ಸೆಕ್ಷನ್ 83(2) ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು, ಮಕ್ಕಳನ್ನು ಬಳಸಿಕೊಳ್ಳುವ ಯಾವುದೇ ವಯಸ್ಕರು ಅಥವಾ ವಯಸ್ಕ ಗುಂಪುಗಳಿಗೆ ಸುಮಾರು ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಅದೇ ಕಾಯಿದೆಯ ಸೆಕ್ಷನ್ 75ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಮಗುವಿನ ಮೇಲೆ ಆಕ್ರಮಣ, ಕೈಬಿಡುವುದು, ನಿಂದನೆ ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದಕ್ಕಾಗಿ ಶಿಕ್ಷಿಸಬಹುದು.

NCPCR ಎಸ್‌ಪಿಗೆ ತನಿಖೆಯನ್ನು ಪ್ರಾರಂಭಿಸಲು ಮತ್ತು ಸೆಕ್ಷನ್‌ಗಳನ್ನು ಉಲ್ಲಂಘಿಸುವ ಯಾರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೇಳಿದೆ ಮತ್ತು ಏಳು ದಿನಗಳಲ್ಲಿ ಕ್ರಮ-ತೆಗೆದುಕೊಂಡ ವರದಿಯನ್ನು ನೀಡುವಂತೆ ಸೂಚಿಸಿದೆ.

ವಿದೇಶ ಶಿಕ್ಷಣ

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬುದು ಪ್ರಾಚೀನ ಕಾಲದಿಂದಲೂ ಬಿಡಿಸಲಾಗದ ಒಗಟಾಗಿದೆ. ಕೋಳಿ, ಮೊಟ್ಟೆಯಿಂದಲೇ ಬಂದಿದೆ ಎಂದು ಕೆಲವರು ಹೇಳುತ್ತಾರೆ. ಮೊಟ್ಟೆಯನ್ನು ಕೋಳಿಯೇ ಇಟ್ಟಿದ್ದು ಎಂದು ಕೆಲವರು ವಾದಿಸುತ್ತಾರೆ, ಆದ್ದರಿಂದ ಕೋಳಿಯೇ ಮೊದಲು ಬಂದಿತ್ತು ಎಂಬುದು ಕೆಲವರ ವಾದ. ಈ ಒಗಟಿನ ವಾದಗಳಿಗೆ ಈಗ ಸಂಶೋಧಕರು ಉತ್ತರವನ್ನು ಕಂಡುಕೊಂಡಿದ್ದಾರೆ.

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬ ವಾದಕ್ಕೆ ವೈಜ್ಞಾನಿಕವಾಗಿ ಉತ್ತರಿಸಲು, ಮೊದಲು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳನ್ನು ಅಧ್ಯಯನ ಮಾಡಲಾಯಿತು. ಈ ಜೀವಿಗಳನ್ನು ಮೊಟ್ಟೆ ಇಟ್ಟು ಮರಿಮಾಡುವ ಜೀವಿಗಳು (oviparous) ಮತ್ತು ಮರಿಹಾಕುವ ಜೀವಿಗಳು  (viviparous) ಎಂದು ವರ್ಗೀಕರಿಸಲಾಯಿತು.

ಮೀನಿನಂಥ ಜಲಚರಗಳಿಂದ ವಿಕಾಸದಲ್ಲಿ ಕಶೇರುಕ ಆಮ್ನಿಯೋಟ್ಸ್ (Amniotes) ಕಾಣಿಸಿಕೊಂಡಿತು. ಅವು ನೀರಿನಲ್ಲಿ ಮತ್ತು ಭೂಮಿಯಲ್ಲಿ ವಾಸಿಸುವ ಉಭಯಚರಗಳ ಗುಣಲಕ್ಷಣಗಳನ್ನು ಹೊಂದಿದ್ದವು. ಈ ಜೀವಿಗಳು ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ನೀರಿನ ಹತ್ತಿರವೇ ಇದ್ದವು. ಉದಾಹರಣೆಗೆ, ಕಪ್ಪೆಗಳು ಮತ್ತು ಮೊಸಳೆಯಂತಹ (Salamander) ಜೀವಂತ ಜೀವಿಗಳು.

320 ಮಿಲಿಯನ್ ವರ್ಷಗಳ ಹಿಂದೆ ಕಾಣಿಸಿಕೊಂಡ ಆ ಜೀವಿಗಳು, ಜಲನಿರೋಧಕ ಚರ್ಮ ಮತ್ತು ನೀರಿನ ನಷ್ಟವನ್ನು ನಿಯಂತ್ರಿಸಲು ಪಳಗಿಕೊಂಡಿತು. ಆ ಮೂಲಕ ನೀರಿನಿಂದ ಬೇರ್ಪಟ್ಟು ಭೂಮಿಯಲ್ಲಿ ವಾಸಿಸುವ ಅಭ್ಯಾಸವನ್ನು ಬೆಳೆಸಿಕೊಂಡಿತು.

ಈ ಹಿನ್ನಲೆಯಲ್ಲಿ ಅನೇಕ ಹಲ್ಲಿಗಳು ಮತ್ತು ಹಾವುಗಳು, ಮರಿಹಾಕುವ ಸ್ವಭಾವದಿಂದ ಬದಲಾಗಿ ಮೊಟ್ಟೆ ಇಡುವ ಸ್ವಭಾವಕ್ಕೆ ಬದಲಾವಣೆಗೊಂಡಿತು. ಹಾಗೆಯೇ  ಕೋಳಿಯ ಪೂರ್ವಜ ಕೂಡ ಮರಿಹಾಕುವ ಸ್ವಭಾವದಿಂದ ಮೊಟ್ಟೆಯಿಡುವಿಕೆಗೆ ಬದಲಾವಣೆಗೊಂಡಿತು. ಮೊಟ್ಟೆಯ ಚಿಪ್ಪುಗಳು, ಆರಂಭದಲ್ಲಿ ಮೃದುವಾಗಿದ್ದವು ನಂತರ ಗಟ್ಟಿಯಾದ ಚಿಪ್ಪುಗಳಾಗಿ ವಿಕಸನಗೊಂಡಿತು.

ತಾಯಿ ಜೀವಿಗಳು ಮರಿಗಳನ್ನು ದೀರ್ಘಕಾಲದವರೆಗೆ ಗರ್ಭಾಶಯದಲ್ಲಿ ಇಟ್ಟು, ಸಾಕಷ್ಟು ತಾಪಮಾನ ಮತ್ತು ಬೇಕಾದಷ್ಟು ಆಹಾರದ ಸಿದ್ದತೆಯನ್ನು ಮಾಡಿಕೊಂಡ ನಂತರ ಮರಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಿರಬಹುದು. ವಿಜ್ಞಾನಿಗಳು ಇದನ್ನು ವಿಸ್ತೃತ ಭ್ರೂಣ ಧಾರಣೆ (Extended Embryo Retention) ಎಂದು ಕರೆಯುತ್ತಾರೆ.

ಇದರಿಂದ ಕೋಳಿಯಿಂದ ಮೊಟ್ಟೆಯೇ ಬಂದಿತು ಎಂದು ಅಧ್ಯಯನದಲ್ಲಿ ತಿಳಿದುಕೊಂಡಿದ್ದಾರೆ. ಹಾಲಿ ಇರುವ ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪೂರ್ವಜರು ಮೊದಲು ಮೊಟ್ಟೆ ಇಡದೆ ಮರಿಗಳನ್ನು ಹಾಕಿರುವುದು ಇದೀಗ ಕಂಡುಬಂದಿದೆ.

ಈ ಅಧ್ಯಯನದ ವರದಿ `Nature Ecology & Evolution’ ಎಂಬ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕ್ರೈಂ ರಿಪೋರ್ಟ್ಸ್

ಮಾರ ಕಾಸ್ತ್ರಗಳೊಂದಿಗೆ ದರೋಡೆ ಮಾಡಲು ಸಂಚು ರೂಪಿಸಿದ್ದ ರೌಡಿ ಶಿಟರ್ ಮಹೇಶ @ ಸಿದ್ದಾಪುರ ಮಹೇಶನ 5 ಜನ ಸಹಚರರ ಬಂಧನ. ಒಂದು ಪಾರ್ಚೂನರ್ ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬೆಂಗಳೂರು: ಜೂನ್ 17 ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನ KSRTC ಕೇಂದ್ರ ಕಚೇರಿಯ ಪಕ್ಕದ ಬಿಟಿಎಸ್ ಸರ್ವೀಸ್ ರಸ್ತೆಯಲ್ಲಿ, ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರಿಗೆ ಮಾರಕಾಸ್ತ್ರಗಳಾದ ಲಾಂಗು, ಮಚ್ಚು, ಚಾಕು ದೊಣ್ಣೆಗಳಿಂದ ಹಲ್ಲೆ ಮಾಡಿ, ಅವರಿಂದ ನಗದು ಮತ್ತು ಚಿನ್ನಾಭರಣಗಳನ್ನು ದೋಚಲು ಸಜ್ಜಾಗಿದ್ದ ರೌಡಿ ಶೀಟರ್ ಮಹೇಶ @ ಸಿದ್ದಾಪುರದ ಮಹೇಶನ 5 ಜನ ಸಹಚರರನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಇವರುಗಳ ಕಡೆಯಿಂದ ಮಾರಕಾಸ್ತ್ರಗಳನ್ನು ಮತ್ತು ಪಾರ್ಚೂನ್ ಕಾರನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ಇವರುಗಳು ಕಳೆದ ವರ್ಷ ಬನಶಂಕರಿ ಮೆಟ್ರೋ ನಿಲ್ದಾಣ ಹತ್ತಿರ ರೌಡಿ ಶೀಟರ್ ಮದನ್ @ ಪಿಟೀಲ್ ಎಂಬುವವನನ್ನು ಕೊಲೆ ಮಾಡಿದ್ದ ಮಹೇಶ @ ಸಿದ್ದಾಪುರ ಮಹೇಶ್ ಎಂಬುವವನ ಸಹಚರರಾಗಿರುತ್ತಾರೆ.

ಇವರುಗಳು ಈ ದಿನ ಮಹೇಶನ ಎದುರಾಳಿಯಾದ ವಿಲ್ಸನ್ ಗಾರ್ಡನ್ ನಾಗ ಅಥವಾ ಆತನ ಸಹಚರರು ಸಿಕ್ಕರೆ ಅವರುಗಳನ್ನು ಹೊಡೆಯಬೇಕೆಂದು ಮತ್ತು ದಾರಿಯಲ್ಲಿ ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಅವರಿಂದ ನಗದು ಹಣ ಅಥವಾ ಒಡವೆಗಳನ್ನು ದೋಚಲು ಹೊಂಚು ಹಾಕುತ್ತಿದ್ದುದಾಗಿ ತಿಳಿಸಿರುತ್ತಾರೆ. ಮೇಲ್ಕಂಡ ಆಸಾಮಿಗಳ ವಿರುದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ರೂಪಿಸಿದ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಕರಣ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿ, ಸಂಘಟಿತ ಅಪರಾಧ ದಳ (ಪಶ್ಚಿಮ) ದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಯಶಸ್ವಿಯಾಗಿ ಆರೋಪಿಗಳನ್ನು ಮಾಲಿನ ಸಮೇತ ವಶಕ್ಕೆ ಪಡೆದುಕೊಂಡಿರುತ್ತಾರೆ.  

ಶಿಕ್ಷಣ

ಬೆಂಗಳೂರು: ಇನ್ ಸೈಟ್ ಐಎಎಸ್ ಅಕಾಡೆಮಿ ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಇನ್ ಸೈಟ್ ಸಂಸ್ಥೆಯ ನಿರ್ದೇಶಕರಾದ ವಿನಯ್ ಕುಮಾರ್ ಹಾಗೂ ಮಧುಕರ್ ನಾಗಣ್ಣ ಅವರು ಉಪಸ್ಥಿತರಿದ್ದರು.

“ಉತ್ತರದಾಯಿತ್ವ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಾಗಿದೆ. ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಆ ಸ್ಥಾನದಲ್ಲಿ, ಆ ಹುದ್ದೆಯಲ್ಲಿರಲು ಅನರ್ಹರು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಹೊಣೆಗಾರಿಕೆ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿರುತ್ತದೆ.

ಬಹುಸಂಖ್ಯಾತ ಸಮುದಾಯ ಅಕ್ಷರ ಕಲಿಕೆಯಿಂದ ವಂಚಿತವಾಗಿದೆ. ಇದಕ್ಕೆ ಸಮಾಜದಲ್ಲಿರುವ ಅಸಮಾನತೆ ಕಾರಣ. ಈ ಅಸಮಾನತೆಯನ್ನು ಅಳಿಸಲು ಸಾಧ್ಯವಾಗದಿದ್ದರೆ, ಆ ದಿಕ್ಕಿನಲ್ಲಿ ಶ್ರಮಿಸದಿದ್ದರೆ ನಾವು ಜನಪ್ರತಿನಿಧಿಗಳಾಗಿ, ಐಎಎಸ್-ಕೆಎಎಸ್ ಅಧಿಕಾರಿಗಳಾಗಿ ಏನು ಪ್ರಯೋಜನ?

ಸಮಾಜದಲ್ಲಿನ ಅಸಮಾನತೆ, ತಾರತಮ್ಯ ಅಳಿಸಲು ಯತ್ನಿಸದೇ ಹೋದರೆ ಈ ದೇಶದ ಜನರೇ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯದ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಎಚ್ಚರಿಕೆಯ ಮಾತನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ಎಚ್ಚರಿಕೆಯ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಅಸಮಾನತೆ, ತಾರತಮ್ಯವನ್ನು ಅಳಿಸಬೇಕು

ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರುತ್ತದೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್ ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ. ಹೀಗಾಗಿ ಹಸಿವು ಗೊತ್ತಿರುವ ಹಳ್ಳಿ ಮಕ್ಕಳನ್ನು ಐಎಎಸ್ ಗಳಾಗಿ ಮಾಡಬೇಕು” ಎಂದು ಸಿದ್ದರಾಮಯ್ಯ ಮಾತನಾಡಿದರು.

ರಾಜಕೀಯ

“ಹಿಂದುತ್ವ – ಜನರನ್ನ ಧರ್ಮದ ದಾರಿಯಲ್ಲಿ ಸಾಗಿಸುವ ಬದಲಿಗೆ ಸಮಾಜವನ್ನು ಇಬ್ಬಾಗಿಸುವ ದ್ವೇಷ ಹಾಗೂ ಅಸೂಯೆಯ ಕೂಪಕ್ಕೆ ತಳ್ಳಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ದ್ವೇಷಕ್ಕೆ ಜನರನ್ನ ದೇವರ ಬಳಿ ಕರೆದೊಯ್ಯಲು ಸಾಧ್ಯವಿಲ್ಲ. ಆದರೆ, ಪ್ರೀತಿ ಹಾಗೂ ಕಾಂಗ್ರೆಸ್ ನ ಶಕ್ತಿ ಜನರನ್ನ ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ. “ಶಕ್ತಿ” ಯೋಜನೆಯಿಂದಾಗಿ ದೇವಸ್ಥಾನ ಹಾಗೂ ಪೂಜಾ ಕೇಂದ್ರಗಳಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆಯನ್ನು ಸಬಲಗೊಳಿಸಲಾಗಿದೆ.

ಇದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳ ಸುತ್ತಲಿನ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ನೇರ ಅನುಕೂಲ ಸಿಗಲಿದ್ದು, ಅಲ್ಲಿನ ಆರ್ಥಿಕ ಪ್ರಗತಿಯ ವೇಗ ಕೂಡ ದ್ವಿಗುಣಗೊಳ್ಳಲಿದೆ. ದ್ವೇಷ ಕೇಂದ್ರಿತ ಅಧರ್ಮವನ್ನು ಸೋಲಿಸಿ, ಪ್ರೀತಿ ಹಾಗೂ ಸಹಬಾಳ್ವೆ ಕೇಂದ್ರಿತ ಧರ್ಮವನ್ನು ಗೆಲ್ಲಿಸಲು ನಾವು ‘ಶಕ್ತಿ’ಯುತ ಹೆಜ್ಜೆ ಇಟ್ಟಿದ್ದೇವೆ” ಎಂದರು.

ದೇಶ

ಚೆನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿ ಸಲ್ಲಿಸಿದ ಅರ್ಜಿಗೆ 8 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಭಾಗವಹಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸನಾತನ ಧರ್ಮದ ಶ್ರೇಯಸ್ಸನ್ನು ವಿವರಿಸುತ್ತಾ, ಅದನ್ನು ಅನುಸರಿಸುವುದು ಮುಖ್ಯ ಎಂದು ನಿರಂತರವಾಗಿ ಹೇಳುತ್ತಿದ್ದರು. ಸನಾತನ ಧರ್ಮದ ಉಲ್ಲೇಖಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ, ಚೆನ್ನೈ ಮೂಲದ ಹಿರಿಯ ವಕೀಲ ಎಸ್.ದುರೈಸ್ವಾಮಿ ಅವರು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಅರ್ಜಿ ಸಲ್ಲಿಸಿ, ಸನಾತನ ಧರ್ಮದ ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ರಾಜಭವನ ಕಚೇರಿಯ ಮಾಹಿತಿ ಅಧಿಕಾರಿ, ‘ವಕೀಲರು ಎತ್ತಿರುವ ಪ್ರಶ್ನೆಗಳು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಮಾಹಿತಿ ತಮ್ಮ ಕಛೇರಿಯಲ್ಲಿ ಲಭ್ಯವಿಲ್ಲ’ ಎಂಬ ಮಾಹಿತಿಯನ್ನು ಒದಗಿಸಿದ್ದರು.

ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಅಪೂರ್ಣವಾದ ಮಾಹಿತಿಯ ವಿರುದ್ಧ, ವಕೀಲ ಎಸ್.ದುರೈಸ್ವಾಮಿ ಅವರು ಕಳೆದ ವರ್ಷ ನವೆಂಬರ್ 3 ರಂದು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಸಕ್ಷನ್ 19(1) ರಡಿಯಲ್ಲಿ ಮೇಲ್ಮನವಿ ಸಲ್ಲಿಸಿದರು.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ

 ಅರ್ಜಿಯಲ್ಲಿ, ‘ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಸೂಕ್ತ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಸನಾತನ ಧರ್ಮದ ಬಗ್ಗೆ ಮಾತನಾಡಲು ಆಧಾರವೇನು ಎಂಬುದನ್ನು ತಿಳಿಸಬೇಕು’ ಎಂದು ಕೋರಿದ್ದರು.

ಈ ಮೇಲ್ಮನವಿಯ ಮೇಲೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ ಕ್ರಮ ಕೈಗೊಳ್ಳದ ಕಾರಣ, ವಕೀಲ ದುರೈಸ್ವಾಮಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು. ನ್ಯಾಯಮೂರ್ತಿ ಎಂ.ತಂಡಪಾಣಿ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು.ಅರ್ಜಿದಾರರ ಪರವಾಗಿ ವಕೀಲ ಇಳಂಗೋವನ್ ವಾದ ಮಂಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ವಕೀಲ ದುರೈಸ್ವಾಮಿ ಅವರ ಮೇಲ್ಮನವಿ ಕುರಿತು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ 8 ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಆದೇಶಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

The Madras High Court has directed the appellant authority of Tamil Nadu Raj Bhavan to take action against the RTI application seeking an explanation about the Sanatan Dharma quotes used by the Governor during his speeches, within 8 weeks.

ದೇಶ ರಾಜ್ಯ

ರಾಯಚೂರಿನಲ್ಲಿ ಏಮ್ಸ್‌ (All India Institute of Medical Sciences) ಸ್ಥಾಪಿಸುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಮನ್‌ ಸುಖ್‌ ಮಾಂಡವೀಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪತ್ರ ಬರೆದಿದ್ದಾರೆ.

“ದೇಶದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಒಂದಾಗಿರುವ ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣದ ಮಟ್ಟ ಮತ್ತು ತಲಾ ಆದಾಯವು ಇತರ ಪ್ರದೇಶಗಳಿಗಿಂತ ಕಡಿಮೆ ಇದೆ. ವಿಪರೀತ ಹವಾಗುಣದಿಂದಾಗಿ ಭೌಗೋಳಿಕವಾಗಿಯೂ ಪ್ರತಿಕೂಲ ವಾತಾವರಣ ಹೊಂದಿದೆ. ಈ ಎಲ್ಲ ಕಾರಣಗಳಿಂದಾಗಿ ರಾಯಚೂರಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ.

ಏಮ್ಸ್‌ ಸ್ಥಾಪನೆಯಿಂದ ಈ ಭಾಗದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ಒದಗಿಸಿದಂತಾಗುತ್ತದೆ. ಏಮ್ಸ್‌ ಸ್ಥಾಪನೆಗೆ ಈ ಭಾಗದ ಜನತೆ ಹಾಗೂ ಜನಪ್ರತಿನಿಧಿಗಳ ಬೇಡಿಕೆ ಹೆಚ್ಚುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಅತ್ಯಾದ್ಯತೆಯ ವಿಷಯವಾಗಿದೆ. ಆದ್ದರಿಂದ ಸಂಬಂಧಿಸಿದವರಿಗೆ ಈ ಕುರಿತು ಕ್ರಮ ವಹಿಸಲು ಸೂಚನೆ ನೀಡುವಂತೆ ಕೋರುತ್ತೇನೆ” ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ ಸುಖ್‌ ಮಾಂಡವೀಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪತ್ರ ಬರೆದಿದ್ದಾರೆ.

Chief Minister Shri.Siddaramaiah has written a letter to Ministry of Health & Family Welfare to establish an All India Institute of Medical Sciences in Raichur. AIIMS in Raichur will be a game changer to comprehensively address the healthcare issues of the region.