ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Karnataka Assembly Election 2023 Archives » Page 3 of 3 » Dynamic Leader
January 15, 2025
Home Posts tagged Karnataka Assembly Election 2023 (Page 3)
ರಾಜಕೀಯ

“ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರೂ ಟಿಕೆಟ್ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಪಕ್ಷ ಕಟ್ಟಿಬೆಳೆಸಿದ ನಾಯಕನ ದುಸ್ಥಿತಿಯಿದು. ಬಳಸಿ ಎಸೆಯುವುದು ಬಿಜೆಪಿಯ ಜನ್ಮಸಿದ್ದ ಹಕ್ಕು. ವಿಶ್ವದ ಅತ್ಯಂತ ದೊಡ್ಡ ಪಕ್ಷ ಎಂದು ಕೊಚ್ಚಿಕೊಳ್ಳುವ ಕರ್ನಾಟಕ ಬಿಜೆಪಿ ಟಿಕೆಟ್ ಘೋಷಣೆ ಮಾಡದೆ ದಿನ ದೂಡುತ್ತಿವೆ.

ರೌಡಿಗಳನ್ನು ಸೆಳೆಯುವ ಪಕ್ಷವು, ತನ್ನನ್ನು ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡಲು ನಾಟಕವಾಡುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಪೇಶ್ವೆಗಳನ್ನು ಮುನ್ನೆಲೆಗೆ ತರಲು ವೇದಿಕೆ ತಯಾರಾಗುತ್ತಿದೆ. ಹೀಗಾಗಿಯೆ ಕರ್ನಾಟಕ ಬಿಜೆಪಿ ತನ್ನ ಟಿಕೆಟ್ ಘೋಷಣೆಗೆ ಮೀನಮೇಷ ಎಣಿಸುತ್ತಿದೆ.

ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲು ನಡೆಸಿದ ಸಭೆಯ ಮುಖ್ಯ ಸೂತ್ರದಾರ ಅಮಿತ್ ಶಾ ತನ್ನ ಮಗನಿಗೆ ಆಯಕಟ್ಟಿನ ಜಾಗ ನೀಡಿದವರು ಎನ್ನುವುದೆ ಪರಿಸ್ಥಿತಿಯ ವ್ಯಂಗ್ಯ. ಎಲ್ಲಾ ಸಮುದಾಯಗಳ ಕೋಪಕ್ಕೆ ಗುರಿಯಾಗಿರುವ BJP ಈ ಬಾರಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. BJP’s list of candidates delayed again, Yediyurappa returns to Bengaluru

ರಾಜಕೀಯ

ಶಿವಮೊಗ್ಗ:ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, “ನಾನು ಸ್ವ– ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ” ಎಂದಿದ್ದಾರೆ.

“ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯ ಉಪ–ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದಿದ್ದಾರೆ.

“ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ! ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಕೆ.ಎಸ್.ಈಶ್ವರಪ್ಪ ಈಗ ಟಿಕೆಟ್‌ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. “I am withdrawing from electoral politics,” KS Eshwarappa said in a letter to BJP president JP Nadda.

ರಾಜಕೀಯ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಛೇರಿಗೆ ಬಿಗಿ ಪೊಲೀಸ್ ಭದ್ರತೆ ಮಾಡಿರುವುದರ ಬಗ್ಗೆ ಜೆಡಿಎಸ್ ವ್ಯಂಗ್ಯವಾಡಿದೆ!

ಇದರ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ “ಈ ವರೆಗೂ ಬಿಜೆಪಿ ಯಾಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂಬುವುದಕ್ಕೆ ಸಾಕ್ಷಿ ಸಿಕ್ಕಿದೆ. ‘ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲು ಕಚೇರಿಗೆ ಬಿಗಿ ಭದ್ರತೆ ಮಾಡಲಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರ ಉಳಿಸಲು ರೌಡಿಗಳನ್ನು, ಕ್ರಿಮಿನಲ್ ಗಳನ್ನು ಸಾಕಿಕೊಂಡಿದ್ದ ಬಿಜೆಪಿಗೆ ಅದುವೆ ತಲೆ ನೋವಾಗಿ ಪರಿಣಮಿಸಿದೆ.

Prime Minister Narendra Modi with Rowdy Sheeter Mallikarjuna alias Fighter Ravi

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ರೌಡಿಯೊಬ್ಬನಿಗೆ ಕೈಮುಗಿದಿದ್ದರು. ಇದೀಗ ಅವರ ಹೆಸರು ಹೇಳಿ ರೌಡಿಗಳು ಕೂಡಾ ಟಿಕೆಟ್ ಕೇಳುತ್ತಿರಬಹುದು. ಮೊದಲೆ ಕ್ರಿಮಿನಲ್ ಗಳ ಪಕ್ಷ, ಇದೀಗ ಹೊಸ ಕ್ರಿಮಿನಲ್ ಗಳ ಸೇರ್ಪಡೆಯಿಂದಾಗಿ, ಟಿಕೆಟ್ ಸಿಗದ ರೌಡಿಗಳ ಭಯದಿಂದ ಕಚೇರಿಗೆ ಬಿಗಿ ಭದ್ರತೆ ಮಾಡಿರಬಹುದು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಪಕ್ಷದ ಕಚೇರಿಗೆ ನೂರಕ್ಕೂ ಹೆಚ್ಚು ಪೊಲೀಸರು ಇರುವ 2 KSRP ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಅಂದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಎಷ್ಟೊಂದು ಡೇಂಜರ್ಸ್ ಆಗಿರಬೇಕಲ್ಲವೇ” ಎಂದು ವ್ಯಂಗ್ಯವಾಡಿದೆ. Karnataka Congress says PM Modi made to fold hands before ‘rowdy sheeter’

ರಾಜಕೀಯ

ವಿಜಯಪುರ: (ಹಗರಬೊಮ್ಮನಳ್ಳಿ) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ರಣಕಹಳೆ ಊದಿದೆ. ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಎಎಪಿ ಹಾಗೂ ಗಾಲಿ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ನೌಕರರು ಅನೇಕರು ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಲಕ್ಷ್ಮಿ ನಾರಾಯಣ ಬಿಜೆಪಿ ಸೇರಿದ್ದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಲಕ್ಷ್ಮೀ ನಾರಾಯಣ ವಿಜಯನಗರದ ಬಿಜೆಪಿ ಕಚೇರಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2023ರ ಚುನಾವಣೆಯಲ್ಲಿ ಅವರು ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲಕ್ಷ್ಮೀ ನಾರಾಯಣ ಹಲವು ದಿನಗಳಿಂದ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಂಘಟನೆ, ಕಾರ್ಯಕರ್ತರ ಭೇಟಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೂಡಾ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಿವೃತ್ತರಾದ ಬಳಿಕ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಬಿಬಿಎಂಪಿ ಆಯುಕ್ತರಾಗಿ, ಕರ್ನಾಟಕ ಗೃಹ ಮಂಡಳಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಬಯಸಿರುವ ಇವರಿಗೆ, ಈ ಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೆಯಾಗದಿರುವುದು ವರದಾನವಾಗಿದ್ದು, ಹಲವು ಇಲಾಖೆಯಲ್ಲಿ ಕೆಸಲ ಮಾಡಿದ ಇವರು ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ಧಿ ನಾಗಲೋಟಕ್ಕೆ ಸಾಗುವುದು ಎಂಬ ಅಭಿಪ್ರಾಯ ಕ್ಷೇತ್ರದ ಜನತೆಯದಾಗಿದೆ. ಹಾಗಾಂತ ಇಲ್ಲಿ ಟಿಕೆಟಿಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಡದಿರುವುದು ಕೂಡ ಪಕ್ಷಕ್ಕೆ ವರದಾನವಾಗಲಿದೆ.

2018ರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾದ ಭೀಮಾ ನಾಯ್ಕ್ ವಿರುದ್ಧ ಕೆ.ನೇಮಿರಾಜ್ ನಾಯಕ್ ಬಿಜೆಪಿ ಅಭ್ಯರ್ಥಿಯಾಗಿ 71105 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಳೆದೆರಡು ಬಾರಿ ಶಾಸಕರಾದ ಭೀಮಾ ನಾಯ್ಕ್ ರವರಿಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಹಾಲಿ ನಗರ ಸಭೆ ಸದಸ್ಯರ ವಿರೋಧವಿದೆ ಎಂದು ಹೇಳಲಾಗುತ್ತಿದ್ದು, ತಾವು ಖರೀದಿ ಮಾಡಿರುವ ಜಾಗದಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇಲ್ಲಿ ಜೆಡಿಎಸ್ ಕೂಡ ಪ್ರಬಲವಾಗಿ ಸ್ಪರ್ಧೆಯೊಡ್ಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಮೂರನೇ ಬಾರಿಗೆ ಆಯ್ಕೆಯಾಗುವ ಭೀಮಾ ನಾಯ್ಕ್ ರವರಿಗೆ ಬಿಜೆಪಿ ಕಬ್ಬಿಣದ ಕಡಲೆಕಾಯಿಯಾಗುವುದಂತೂ ಅಲ್ಲಗಳೆಯುವಂತಿಲ್ಲ.

ರಾಜಕೀಯ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಕೋಟ್ಯಂತರ ರೂ. ಹಣ ಚುನಾವಣೆಗೆ ಹೊಂದಿಸಿಟ್ಟಿದ್ದು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ದುಡ್ಡು ಚುನಾವಣೆಗಾಗಿ ಸಂಗ್ರಹವಾಗಿದೆ ಅಂದ್ರೆ, ಬಿಜೆಪಿ ಸರ್ಕಾರದ ಸಚಿವರ ಕತೆ ಏನು? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮಾಡಾಳ್ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಹಣದ ಥೈಲಿಯಲ್ಲಿ ಬಿಜೆಪಿ ಸರ್ಕಾರ ಮುಳುಗಿರುವುದು ಗುಟ್ಟಾಗಿ ಉಳಿದಿಲ್ಲ. 40% ಕಮಿಷನ್ ದಂಧೆಯಲ್ಲಿ ಇವರೆಲ್ಲ ಎಷ್ಟು ದುಡ್ಡು ಲೂಟಿ ಹೊಡೆದಿದ್ದಾರೆ? ಚುನಾವಣೆಯಲ್ಲಿ ನೀರಿನ ರೀತಿ ಹಣ ಖರ್ಚು ಮಾಡುವುದಕ್ಕೆ ಭೂಮಿಕೆ ಸಿದ್ಧವಾಗಿದೆ.

ಕಳಪೆ ಆಡಳಿತ, ಜನರ ತೆರಿಗೆ ಹಣದ ಸುಲಿಗೆ, ಕೋಮು ರಾಜಕಾರಣ ಇವೇ ಮುಂತಾದ ಕುಕೃತ್ಯಗಳನ್ನು ಮಾಡಿ ಹೇಳಿಕೊಳ್ಳಲು ಒಂದು ಕೆಲಸವಿಲ್ಲದ ಕೆಟ್ಟ ಸರ್ಕಾರವಿದು. ಈಗ ಕೋಟಿಗಟ್ಟಲೆ ಹಣ ಸಂಗ್ರಹಿಸಿ ಚುನಾವಣೆಗೆ ಸುರಿಯಲು ಮುಂದಾಗಿದ್ದಾರೆ. ರಾಜ್ಯದ ಜನತೆಯನ್ನು ದುಡ್ಡಿನಲ್ಲಿ ಕೊಳ್ಳಲು ಸಾಧ್ಯವಿಲ್ಲ. ಈ ಸಲ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷ ಸರಣಿ ಟ್ವೀಟ್ ಮಾಡಿದೆ.

ರಾಜಕೀಯ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ ಮತ್ತು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟ ಏಪ್ರಿಲ್ 20 ರಂದು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.  ಮೇ 10 ರ ಬುಧವಾರ ಮತದಾನ ನಡೆಯಲಿದ್ದು, ಮೇ 15 ರೊಳಗೆ ಮತದಾನದ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈಶಾನ್ಯದ ಮೂರು ರಾಜ್ಯಗಳ ಚುನಾವಣೆ ಸಕ್ಸಸ್ ಆಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಪ್ರಯತ್ನ. ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241. ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ.

ರಾಜ್ಯದಲ್ಲಿ ಈ ಬಾರಿ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ.

ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯರಿಗಾಗಿ 1320 ಮತಗಟ್ಟೆಗಳು ಸೇರಿ ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ

ಚುನಾವಣಾ ಆಯೋಗದ ಆ್ಯಪ್‌ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ವಿವರ ಲಭ್ಯವಿರುತ್ತದೆ. ಅಭ್ಯರ್ಥಿಯ ಅಫಿಡವಿಟ್ ಕೂಡ ಆ್ಯಪ್‌ನಲ್ಲೇ ಲಭ್ಯವಿರಲಿದ್ದು, ಚುನಾವಣಾ ಅಕ್ರಮದ ಬಗ್ಗೆ ಆ್ಯಪ್‌ನಲ್ಲೇ ಮತದಾರರು ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ಚುನಾವಣಾ ಅಕ್ರಮ ತಡೆಗೆ 2400 ತಂಡಗಳ ರಚನೆ ಮಾಡಲಾಗಿದೆ.

ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ದಿನಾಂಕಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆʼ  ಜಾರಿಗೆ ಬಂದಿದೆ. ರಾಜಕೀಯ ನಾಯಕರು, ಪಕ್ಷಗಳು, ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ.

ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗ ಕ್ರಮ ಕೈಗೊಳ್ಳಲಿದೆ. ಬೆಂಗಳೂರಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಇದನ್ನು ತಡೆಯಲು ಪರಿಹಾರ ಕಂಡುಕೊಳ್ಳಲು ಎಲೆಕ್ಟ್‌ಥಾನ್ ಕೈಗೊಳ್ಳಲು ಮುಂದಾಗಿದ್ದೇವೆ. ಐಐಎಸ್ಸಿ ಇದರಲ್ಲಿ ಕೈಜೋಡಿಸಿದೆ ಎಂದು ಮಾಹಿತಿ ನೀಡಿದ್ದಾರೆ. Election Commission to announce Karnataka assembly election schedule today.

ರಾಜಕೀಯ

ವರದಿ: ರಾಮು, ನೀರಮಾನ್ವಿ

ಮಾನ್ವಿ: ರಾಯಚೂರು ಜಿಲ್ಲೆ, ಮಾನ್ವಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯು ದಿನದಿಂದ ದಿನಕ್ಕೆ ಹಲವಾರು ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರದಲ್ಲಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಸದರಿ ಜನಾಂಗದಲ್ಲಿಯೇ ತೀವ್ರ ಪೈಪೋಟಿ ನೆಡೆಯುತ್ತಿದೆ. ಜೆಡಿಎಸ್ ನಿಂದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಈ ಬಾರಿಯೂ ಜೆಡಿಎಸ್ ಟಿಕೆಟ್ ನೀಡುವುದು ಖಚಿತವಾಗಿದೆ. ಅವರು ಮತ್ತೊಮ್ಮೆ ಆರಿಸಿ ಬರಲು ತೆರೆಮರೆಯಲ್ಲಿ ಕಸರತ್ತು ಮಾಡಿಕೊಂಡು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯ ಎಫೆಕ್ಟು ಇವರಿಗೆ ಕೈ ಕೊಡುವುದೇ ಎಂದು ಕಾದು ನೋಡೋಣ.

ಕಾಂಗ್ರೆಸ್ ನಲ್ಲಿ ಗೊಂದಲದ ವಾತಾವರಣ ಇದೆ. ಆ ಪಕ್ಷದಿಂದ ಜಿ.ಹಂಪಯ್ಯ ನಾಯಕ, ಶರಣಪ್ಪ ನಾಯಕ ಗುಡದಿನ್ನಿ, ರಾಜ ವಸಂತ್ ನಾಯಕ, ದೇವದುರ್ಗದ ಮಾಜಿ ಸಂಸದರಾದ ಬಿ.ವಿ.ನಾಯಕ ಮುಂತಾದವರು ತಮ್ಮದೇ ಆದ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಟಿಕೆಟ್ ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಗುಟ್ಟನ್ನು ಬಿಟ್ಟುಕೊಡದೆ, ಆಕಾಂಕ್ಷಿಗಳನ್ನು ತುದಿಕಾಲಮೇಲೆ ನಿಲ್ಲುವಂತೆ ಮಾಡಿದೆ. ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕ, ಮಾನಪ್ಪ ನಾಯಕ, ಮ್ಯಾಕಲ್ ಅಯ್ಯಪ್ಪ ನಾಯಕ ಸೇರಿದಂತೆ ಹಾಲಿ ಸಚಿವರಾದ ಶ್ರೀರಾಮುಲು ಹಾಗೂ ದೇವದುರ್ಗ ಶಾಸಕರಾದ ಶಿವನಗೌಡ ನಾಯಕ ಅವರು ಟಿಕೆಟ್ ಗಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಮ್ ಅದ್ಮಿ ಪಕ್ಷದಿಂದ ರಾಜ ಶ್ಯಾಮ್ ಸುಂದರ್ ನಾಯಕ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇನ್ನು ಜನಾರ್ದನ ರೆಡ್ಡಿಯ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯು ಕೂಡ ಕಣದಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ ಡಾ.ತನುಶ್ರೀ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಹರಸಾಹಸ ಪಡುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಕೊಡದಿದ್ದರೆ ಹಿಂದಿನಂತೆ; ಮುಂದೆಯೂ ಪಕ್ಷೇತರರಾಗಿ ಸ್ಪರ್ಧಿಸುವುಸು ನಿಶ್ಚಿತ.

ಈ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹಂಪಯ್ಯ ನಾಯಕ, ಬಿಜೆಪಿಯಿಂದ ಶರಣಪ್ಪ ನಾಯಕ, ಜೆಡಿಎಸ್ ನಿಂದ ರಾಜಾ ವೆಂಕಟಪ್ಪ ನಾಯಕ, ಪಕ್ಷೇತರ ಅಭ್ಯರ್ಥಿ ಎಂ.ಈರಣ್ಣನವರ ಸೊಸೆ ಡಾ.ತನುಶ್ರೀ ಅವರ ಮದ್ಯ ತೀವ್ರ ಸ್ವರೂಪದ ಪೈಪೋಟಿ ಇತ್ತು. ಆದರೆ ಎಲ್ಲವನ್ನು ಹಿಮ್ಮೆಟ್ಟಿಸಿ ಗೆದ್ದ ನಿಂತವರು ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ. ಆದರೇ ಆಗಿನ ಪರಿಸ್ಥಿತಿಯೇ ಬೇರೆಯದಾಗಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಎಂ.ಈರಣ್ಣನವರು ತಮ್ಮ ಮಡದಿಯನ್ನು ಅಧ್ಯಕ್ಷೆಯಾಗಿ ಮಾಡಲು ಶತಃ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ, ರಾಯಚೂರು ಜಿಲ್ಲಾ ಮುಖಂಡರು ಅದಕ್ಕೆ ಎಳ್ಳು ನೀರು ಬಿಟ್ಟು, ರಾಜಕೀಯ ಗಂದ ಗಾಳಿ ಗೊತ್ತಿಲ್ಲದ ಬಿಜೆಪಿ ಪಕ್ಷದ ಅದಿ ವೀರಲಕ್ಷ್ಮಿ ಎನ್ನುವ ಅಭ್ಯರ್ತಿಯನ್ನು ತಂದು ವಾಮ ಮಾರ್ಗದಲ್ಲಿ ಗೆಲ್ಲಿಸಿಕೊಂಡರು. ಇದರಿಂದ ಕೆಂಡಾಮಂಡಲರಾದ ಎಂ.ಈರಣ್ಣ, ಅಧ್ಯಕ್ಷರ ಚುನಾವಣೆಯಲ್ಲಿ ಕುತಂತ್ರ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಕ್ಕ ಪಾಠವನ್ನು ಕಲಿಸಬೇಕೆನ್ನುವ ಜಿದ್ದಿಗೆ ಬಿದ್ದು, ಸೊಸೆ ಡಾ.ತನುಶ್ರೀಯನ್ನು ಪಕ್ಷೇತರ ಅಭ್ಯರ್ತಿಯಾಗಿ ಕಣಕ್ಕೆ ಇಳಿಸಿ, ಕಾಂಗ್ರೆಸ್ ಸೋಲಿಸುವಲ್ಲಿ ಯಶಶ್ವಿಯಾದರು. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಗೆಲುವು ಸುಲುಭವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಿದ ಕೀರ್ತಿ ಎಂ.ಈರಣ್ಣನವರಿಗೆ ಸಲ್ಲುತ್ತದೆ.

ಎಂ.ಈರಣ್ಣ

ಕಳೆದ ಬಾರಿ ನೆಡದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹಂಪಯ್ಯ ನಾಯಕ, ಜೆಡಿಎಸ್ ನಿಂದ ರಾಜ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಮೊದಲಿಗೆ ಮಾನಪ್ಪ ನಾಯಕಗೆ ಟಿಕೆಟ್ ಘೋಷಿಸಿ, ನಂತರ ಶರಣಪ್ಪ ನಾಯಕ ಗುಡದಿನ್ನಿ ಅವರಿಗೆ ನೀಡಲಾಯಿತು. ಶರಣಪ್ಪ ನಾಯಕ ಈಗ ಕಾಂಗ್ರೆಸ್ ನಲ್ಲಿ ಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಂ.ಈರಣ್ಣ ಹಾಗೂ ಅವರ ಸೊಸೆ ಡಾ.ತನುಶ್ರೀಯ ಪಾತ್ರ ನಿರ್ನಾಯಕವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಬಾರಿ ಇದ್ದಂತ ವಾತವಾರಣ ಈಗಿಲ್ಲ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಇದರಿಂದಾಗಿ ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಯಾಕ್ಷ ಪ್ರಶ್ನೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗೊಂದಲವಿದೆ. ಇವರೆಡರ ಮದ್ಯ ಎಂ.ಈರಣ್ಣನವರ ನೆಡೆ ಗುಪ್ಪವಾಗಿದೆ. ಹಾಗಾದರೆ ಗೆಲ್ಲುವ ಅಭ್ಯರ್ತಿ ಯಾರು ಎಂಬುದು ರಾಯಚೂರಿನಲ್ಲಿ ಮಾತ್ರವಲ್ಲ ಮಾನ್ವಿಯಲ್ಲೂ ಪ್ರತಿಧ್ವನಿಸುತ್ತಿದೆ.