ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Karnataka Bundh Archives » Dynamic Leader
November 21, 2024
Home Posts tagged Karnataka Bundh
ರಾಜಕೀಯ

ಬೆಂಗಳೂರು: ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ನಿಲುವು. ಇಂದು ಸಂಜೆ ಕಾನೂನು ಮತ್ತು ನೀರಾವರಿ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

“ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚನೆ ಮಾಡಿದೆ. ಅವುಗಳು ವಾಸ್ತವ ಸ್ಥಿತಿಯ ಅವಲೋಕನ ಮಾಡಿ ತನ್ನ ಅಭಿಪ್ರಾಯವನ್ನು ನೀಡುತ್ತವೆ. ನಾವು ತಮಿಳುನಾಡಿಗೆ ಹರಿಸುವ ನೀರನ್ನು ಬಿಳಿಗುಂಡ್ಲುವಿನಲ್ಲಿ ಕೇಂದ್ರ ಜಲ ಆಯೋಗದ ಸುಪರ್ದಿಯಲ್ಲಿರುವ ಜಲಮಾಪನ ಕೇಂದ್ರ ಲೆಕ್ಕ ಹಾಕುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284.85 ಟಿಎಂಸಿ ನೀರು ಅಗತ್ಯವಿದೆ. ಆದರೆ ಸಂಕಷ್ಟ ಕಾಲದಲ್ಲಿ ನೀರು ಹೇಗೆ ಹಂಚಿಕೊಳ್ಳುವ ಸೂತ್ರವನ್ನು ಸುಪ್ರೀಂಕೋರ್ಟ್ ಇಲ್ಲವೆ ಪ್ರಾಧಿಕಾರ ಸಿದ್ಧಪಡಿಸಿಲ್ಲ” ಎಂದು ದೂರಿದರು.

“ಆಗಸ್ಟ್ ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ನಾವು ಇಲ್ಲಿಯ ವರೆಗೆ 123 ಟಿಎಂಸಿ ನೀರು ಬಿಡಬೇಕಾಗಿತ್ತು, ಈ ವರೆಗೆ 43 ಟಿಎಂಸಿ ನೀರು ಹೋಗಿದೆ. ಈಗ ನಮ್ಮ ರೈತರಿಗೂ ನೀರಿಲ್ಲ, ಕುಡಿಯಲು ಬೇಕಾದಷ್ಟು ಕೂಡಾ ನೀರಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಮ್ಮ ಅಧಿಕಾರಿಗಳು ಮಳೆಯ ಕೊರತೆ, ಜಲಾಶಯಗಳ ನೀರಿನ ಸಂಗ್ರಹ ಇತ್ಯಾದಿ ವಿವರಗಳನ್ನು ಮುಂದಿಟ್ಟು ನಮ್ಮ ವಾದ ಮಂಡಿಸಿದ್ದಾರೆ. ಇದರ ಹೊರತಾಗಿಯೂ ನೀಡಿರುವ ಆದೇಶವನ್ನು ವಿರೋಧಿಸುತ್ತಾ ಬಂದಿದ್ದೇವೆ; ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿ ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು, ನೀರಾವರಿಗೆ 30 ಟಿಎಂಸಿ, ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ ಎಂದು ಹೇಳಿದ್ದೇವೆ. ಒಟ್ಟು 106 ಟಿಎಂಸಿ ನೀರಿನ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಾಗಿದೆ” ಎಂಬುದನ್ನು ಮನವರಿಕೆ ಮಾಡಿಕೊಟ್ಟರು.  

“ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ನೀರು ಕೊಡಬಾರದೆಂಬುದು ನಮ್ಮ ನಿಲುವು. ಅಂತಹ ನಿರ್ಧಾರ ಕೈಗೊಂಡರೆ ಏನಾಗಬಹುದೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದೇ? ನ್ಯಾಯಾಂಗ ನಿಂದನೆ ಆಗಬಹುದೇ? ಸರ್ಕಾರವನ್ನೇ ವಜಾ ಮಾಡಬಹುದೇ? ಈ ಎಲ್ಲ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದ್ದಾರೆ.