ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Karnataka Lokayukta Archives » Dynamic Leader
November 21, 2024
Home Posts tagged Karnataka Lokayukta
ರಾಜ್ಯ

ಬೆಂಗಳೂರು: ರಾಜ್ಯದ ಸುಮಾರು 25 ಕಡೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಮಂಗಳೂರು ಸೇರಿದಂತೆ ಹಲವು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿಯಲ್ಲಿ ಶೋಧ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ ಒಟ್ಟು 25 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಭೂ ಹಾಗೂ ಗಣಿ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಅವರ ಮಂಗಳೂರಿನ ವೆಲೆನ್ಸಿಯಾದ ಮನೆ ಹಾಗೂ ಕಚೇರಿಯ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣವೇಣಿ 2 ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿ ಮಂಗಳೂರಿಗೆ ಬಂದಿದ್ದರು. ಇವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ‌ ಇಲಾಖೆ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಕೃಷ್ಣವೇಣಿ ವಿರುದ್ಧ ದೂರು ದಾಖಲಾದ ಹಿನ್ನೆಲೆ ಈ ದಾಳಿ ನಡೆದಿದೆ. ಮಂಗಳೂರು ಲೋಕಾಯುಕ್ತ ಎಸ್​ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್, ಬೆಂಗಳೂರಿನ ಟೌನ್ ಅಂಡ್ ಪ್ಲಾನಿಂಗ್ ಡೈರಕ್ಟರ್ ತಿಪ್ಪೇಸ್ವಾಮಿ, ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಎಸ್​ಪಿ ಮಹೇಶ್ ಮನೆ ಮೇಲೆ‌ ದಾಳಿ ಮಾಡಲಾಗಿದೆ. ಈ ನಾಲ್ವರು ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್ ಕೊಟ್ಟಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಇಂದು ಮಾನ್ಯ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಾಗಿದೆ.

ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಹಾಗೂ “ಡೈನಾಮಿಕ್ ಲೀಡರ್” ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,

“ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2023 (1) ಹಾಗೂ ವಇ 115 ಕೊಮಂಇ ೨೦೧೩ (2)ರ ಪ್ರಕಾರ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು, ರಚಿತವಾಗದ ಆಶ್ರಯ ಸಮಿತಿಯ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನಗರೇಶ್ವರ ನಾಗೇನಹಳ್ಳಿ, ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸುತ್ತಿರುವ 768 (ಜಿ+3) ಮನೆಗಳು

“ಕೊಳಗೇರಿ ಜನರ ಮನೆಗಳನ್ನು ಬೈರತಿ ಬಸವರಾಜ್ ಹಿಂಬಾಲಕರಿಗೆ ಅವರ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅನುಕೂಲಸ್ಥ ವರ್ಗದ ಜನರಿಗೆ ಹಂಚಿಕೆ ಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಂಚನೆಯಲ್ಲಿ ಭಾಗಿಯಾಗಿರುವ ಬೈರತಿ ಬಸವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಬಿ.ವೆಂಕಟೇಶ್ ಹಾಗೂ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್ ಮುಂತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದೆ” ಎಂದು ಹೇಳಿದ್ದಾರೆ.

ಬೈರತಿ ಬಸವರಾಜ್ ಅವರೊಂದಿಗೆ ಸೇರಿಕೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಜಂಟಿಯಾಗಿ ತಯಾರಿಸಿದ 768 ಫಲಾನುಭವಿಗಳ ಪಟ್ಟಿಯಲ್ಲಿರುವವರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡುತ್ತಿರುವುದನ್ನು ಕೂಡಲೆ ತಡೆಗಟ್ಟಿ, ಮಂಡಳಿಯ ನಿಯಮಗಳಂತೆ ನಿಜವಾದ ಘೋಷಿತ ಕೊಳಗೇರಿ ಬಡಜನರಿಗೆ ಸದರಿ ಮನೆಗಳು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಕೋರಲಾಗಿದೆ ಎಂದು ಡಿ.ಸಿ.ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು!