ಟೆಹ್ರಾನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಮನೆಯ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇಸ್ಮಾಯಿಲ್ ಕೊಂದವರು ಯಾರು? ಘಟನೆ ನಡೆದಿದ್ದು ಹೇಗೆ? ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇಸ್ರೇಲ್ ಮತ್ತು ಹಮಾಸ್ ನಡುವೆ ತಿಂಗಳುಗಳ ಕಾಲ ಯುದ್ಧ ನಡೆಯುತ್ತಿದೆ. ಇಲ್ಲಿಯವರೆಗೆ ಸಾವನ್ನಪ್ಪಿದ ಪ್ಯಾಲೆಸ್ತೀನಿಯರ ಸಂಖ್ಯೆ 39 ಸಾವಿರ ಮೀರಿದೆ. 90 ಸಾವಿರದ 589ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಸ್ರೇಲಿ ಪಡೆಗಳು ಹಮಾಸ್ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸುತ್ತಲೇ ಇವೆ. ಇಸ್ರೇಲ್ ಭಾಗದಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆಯಲ್ಲಿ, ಹಮಾಸ್‌ನ ಪ್ರಮುಖ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್‌ನಲ್ಲಿ ಹತ್ಯೆಮಾಡಲಾಗಿದೆ. ಇಸ್ಮಾಯಿಲ್ ಜೊತೆಗೆ ಆತನ ಸಹಾಯಕ ಕೂಡ ಸಾವನ್ನಪ್ಪಿದ್ದಾರೆ. ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬಂದಾಗ ಟೆಹ್ರಾನ್‌ನಲ್ಲಿ ಅವರು ತಂಗಿದ್ದ ಮನೆಯನ್ನು ಇಸ್ರೇಲ್ ಪಡೆಗಳು ಗುರಿಯಾಗಿಸಿದ್ದವು. ಈ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಗಳಾಗಿವೆ.
ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ರಕ್ಷಣಾ ಪಡೆ ಈ ಮಾಹಿತಿಯನ್ನು ಖಚಿತಪಡಿಸಿದೆ ಎಂದು ಇರಾನ್ ದೇಶದ ಮಾಧ್ಯಮಗಳು ವರದಿ ಮಾಡಿದೆ. ಇದರಿಂದಾಗಿ ಭಾರೀ ಉದ್ವಿಗ್ನ ಸ್ಥಿತಿ ಉಂಟಾಗಿದೆ.