• ಅರುಣ್ ಜಿ
ಸಂಕ್ರಾಂತಿ ಹಬ್ಬದಂದು ಆರಂಭವಾದ ಈ ಚಿತ್ರಕ್ಕೆ ಯೋಗರಾಜ್ ಭಟ್ಟರ ಶಿಷ್ಯ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶನ.
ಮಕರ ಸಂಕ್ರಾಂತಿ ಪರ್ವದಿನದಂದು ಯೋಗರಾಜ್ ಸಿನಿಮಾಸ್ ಹಾಗೂ ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಯೋಗರಾಜ್ ಭಟ್, ವಿದ್ಯಾ ಹಾಗೂ ಸಂತೋಷ್ ಕುಮಾರ ಅವರು ನಿರ್ಮಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ವಿನಾಯಕ ಸತ್ಯ ಗಣಪತಿ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ನೆರವೇರಿತು. ಯೋಗರಾಜ್ ಭಟ್ ಅವರ ಜೊತೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದಲ್ಲಿ “ಕಾಮಿಡಿ ಕಿಲಾಡಿಗಳು” ಸೀಸನ್ 2 ವಿಜೇತ ಮನು ಮಡೆನೂರ್ ನಾಯಕನಾಗಿ ನಟಿಸುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.
“ಕುಲದಲ್ಲಿ ಕೀಳ್ಯಾವುದೋ” ಅಚ್ಚ ಕನ್ನಡದ ಶೀರ್ಷಿಕೆ ಎಂದು ಮಾತು ಆರಂಭಿಸಿದ ಯೋಗರಾಜ್ ಭಟ್, ಈಗಲೂ ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಹೇಳುವ ಕೊನೆಯ ಮಂಗಳಗೀತೆಯೂ ಹೌದು. ಈ ಶೀರ್ಷಿಕೆ ನಾಲ್ಕು ವರ್ಷಗಳಿಂದ ನನ್ನ ಹತ್ತಿರವಿತ್ತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಯೋಗಿ ಗೌಡ ಮತ್ತು ನಿರ್ದೇಶನ ಮಾಡುತ್ತಿರುವ ಶ್ರೇಯಸ್ ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ಈ ಶೀರ್ಷಿಕೆ ಇಡಲು ಹೇಳಿದೆ. ಅವರು ಒಪ್ಪಿದರು. ನಾನು, ಸಂತೋಷ್ ಕುಮಾರ್ ಹಾಗೂ ವಿದ್ಯಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಮನು ಮಡೆನೂರ್ ನಾಯಕನಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ ಪ್ರಮುಖ ಪಾತ್ರಧಾರಿಗಳಾಗಿ ನಟಿಸುತ್ತಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನ ಹಾಗೂ ನಿರಂಜನ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.
ಇದು 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮೊದಲು ಮನು ಮಡೆನೂರ್ ಅವರಿಗೆ ಕಾಮಿಡಿ ಜಾನರ್ ನ ಕಥೆ ಮಾಡುವುದು ಅಂದುಕೊಂಡಿದ್ದೆ. ಮನು ಅವರನ್ನು ಈಗಾಗಲೇ ಕಾಮಿಡಿ ಮೂಲಕವೇ ಜನರು ಗುರುತಿಸಿದ್ದಾರೆ. ಹಾಗಾಗಿ ಆ ಜಾನರ್ ಬೇಡ. ಬೇರೆ ಜಾನರ್ ನ ಕಥೆ ಮಾಡೋಣ ಅಂದುಕೊಂಡು ಈ ಕಥೆ ಸಿದ್ದಮಾಡಿಕೊಂಡಿದ್ದೇನೆ. ಚಿತ್ರದ ಕಥೆ ಸಿದ್ದವಾಯಿತು. ಕ್ಲೈಮ್ಯಾಕ್ಸ್ ಬಗ್ಗೆ ಯೋಚಿಸುತ್ತಿದ್ದೆ. ಗುರುಗಳಾದ ಯೋಗರಾಜ್ ಭಟ್ ಅವರು ಅದ್ಭುತ ಕ್ಲೈಮ್ಯಾಕ್ಸ್ ನೀಡಿದ್ದಾರೆ ಎಂದರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಯೋಗಿ ಗೌಡ.
ನನಗೆ ಮಧ್ಯರಾತ್ರಿ ಸಮಯದಲ್ಲಿ ಯೋಗರಾಜ್ ಸಿನಿಮಾಸ್ ನಿಂದ ಕರೆಮಾಡಿ ನೀವೇ ಈ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಹೇಳಿದಾಗ ಆಶ್ಚರ್ಯವಾಯಿತು. ಅವರು ನಂಬಿ ಕೊಟ್ಟಿರುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದಾಗಿ ನಿರ್ದೇಶಕ ಶ್ರೇಯಸ್ ರಾಜ್ ಶೆಟ್ಟಿ ಹೇಳಿದರು.
ನಾನು ಈ ಮಟ್ಟಕ್ಕೆ ಏರಲು ಕಾರಣ “ಕಾಮಿಡಿ ಕಿಲಾಡಿಗಳು” ಕಾರ್ಯಕ್ರಮ. ಈ ಸಂದರ್ಭದಲ್ಲಿ ನಾನು ಜಗ್ಗೇಶ್, ರಕ್ಷಿತ ಹಾಗೂ ಯೋಗರಾಜ್ ಭಟ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು ನನ್ನ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಯೋಗರಾಜ್ ಭಟ್, ಸಂತೋಷ್ ಕುಮಾರ್ ಹಾಗೂ ವಿದ್ಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ನಾಯಕ ಮನು ಮಡೆನೂರ್ ತಿಳಿಸಿದರು.
ನಾಯಕಿ ಸೋನಾಲ್ ಮೊಂತೆರೊ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ, ಸಂಗೀತ ನಿರ್ದೇಶಕ ಮನೋಮೂರ್ತಿ, ನಿರ್ಮಾಣ ಸಾರಥ್ಯ ಹೊತ್ತಿರುವ ರೇಣುಕಾ ಯೋಗರಾಜ್ ಭಟ್ ಈ ಚಿತ್ರದ ಬಗ್ಗೆ ಮಾತನಾಡಿದರು.
ಯೋಗರಾಜ್ ಭಟ್ ಅವರ ಜೊತೆ ಸಿನಿಮಾ ನಿರ್ಮಿಸುತ್ತಿರುವುದಕ್ಕೆ ನಿರ್ಮಾಪಕರಾದ ಸಂತೋಷ್ ಕುಮಾರ್ ಹಾಗೂ ವಿದ್ಯಾ ಸಂತೋಷ ವ್ಯಕ್ತಪಡಿಸಿದರು.