ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Mangalore Archives » Dynamic Leader
October 23, 2024
Home Posts tagged Mangalore
ರಾಜ್ಯ

ಮಂಗಳೂರು: ಸೇಂಟ್ ಜೆರೋಸಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯು ಶನಿವಾರ ಫೆಬ್ರವರಿ 10, 2024 ರಂದು ಅಲ್ಲಿನ ಇಂಗ್ಲಿಷ್ ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪಗಳ ಮೇಲೆ ದುರದೃಷ್ಟಕರ ಮತ್ತು ದುಖಃಕರ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಮಂಗಳೂರಿನ ಕ್ಯಾಥೋಲಿಕ ಧರ್ಮಪ್ರಾಂತ್ಯವು ಹೇಳಿದೆ.

ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಂಗಳೂರಿನ ಕ್ಯಾಥೋಲಿಕ ಧರ್ಮಪ್ರಾಂತ್ಯವು, ‘7ನೇ ತರಗತಿಯಲ್ಲಿ ಇಂಗ್ಲಿಷ್ ಟೀಚರ್ ಸಿಸ್ಟರ್ ಪ್ರಭಾ ಅವರು ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಎರಡು ಆಡಿಯೋ ಸಂದೇಶಗಳನ್ನು ಪ್ರಸಾರ ಮಾಡುವುದರೊಂದಿಗೆ ಇದು ಪ್ರಾರಂಭವಾಯಿತು’ ಎಂದು ಹೇಳಿದೆ.

‘ಸಾಮಾಜಿಕ ಮಾಧ್ಯಮ ಸಂದೇಶಗಳು ಹರುಡುತ್ತಿದ್ದಂತೆ, ನಾಲ್ವರು ಪೋಷಕರು ಮುಖ್ಯೋಪಾಧ್ಯಾಯಿನಿಯನ್ನು ಸಂಪರ್ಕಿಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಅವರು ಸತ್ಯವನ್ನು ಹೊರತರಲು ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆಯನ್ನು ನೀಡಿದ್ದಾರೆ.

ಈ ಹಿನ್ನಲೆಯಲ್ಲಿ, ಮಧ್ಯಾಹ್ನ 12:30ರ ವೇಳೆಗೆ ವ್ಯಕ್ತಿಗಳ ಗುಂಪು ಶಾಲೆಯ ಸುತ್ತಲೂ ಜಮಾಯಿಸಿತ್ತು. ಈ ಬಗ್ಗೆ ಸೂಕ್ತ ತನಿಖೆ ನದೆಸಲಾಗುವುದು ಎಂದು ಮುಖ್ಯ ಶಿಕ್ಷಕಿ ಭರವಸೆ ನೀಡಿದ್ದರು. ಮತ್ತು ಮಧ್ಯಾಹ್ನದ ನಂತರ, ಶಾಲೆಯ ಧರ್ಮ ಭಗಿನಿಯರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಆಡಿಯೋ ಸಂದೇಶಗಳು ಸತ್ಯಕ್ಕೆ ದೂರವಾಗಿವೆ ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಕ್ಷಣೆ ನೀಡುವಂತೆ ಕೋರಿದ್ದರು.

ಸೋಮವಾರ, ಫೆಬ್ರವರಿ 12 ರಂದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದಾಗ ಪರಿಸ್ಥಿತಿ ಉಲ್ಬಣಗೊಂಡಿತ್ತು. ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ಶಾಲೆಗೆ ಆಗಮಿಸಿದಾಗ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತ್ತು. ನ್ಯಾಯಯುತ ತನಿಖೆಯ ಸಾಂವಿಧಾನಿಕ ಪ್ರಕ್ರಿಯೆಯ ಬಗ್ಗೆ ನಿರ್ಲಕ್ಷ್ಯವನ್ನು ಪ್ರದರ್ಶಿಸಿದರು.

ಅವರು ಧರ್ಮ ಭಗಿನಿಯರಾಗಿದ್ದಾರೆ; ಮಹಿಳೆಯರೂ ಆಗಿದ್ದಾರೆ ಎಂದು ಕನಿಷ್ಟ ಸೌಜನ್ಯವನ್ನೂ ತೋರಿಸದೆ, ಅಲ್ಲಿ ನೆರದಿದ್ದ ಧರ್ಮ ಭಗಿನಿಯರು ಹಾಗೂ ಮಹಿಳಾ ಸಿಬ್ಬಂದಿಗಳ ಮೇಲೆ ಹರಿಹಾಯ್ದರು ಮತ್ತು ತಕ್ಷಣವೇ ಲಿಖಿತ ಕ್ಷಮೆ ಯಾಚನೆ ಹಾಗೂ ಶಿಕ್ಷಕಿಯನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದರು.

ಸಂಜೆ ವೇಳೆ ಮಕ್ಕಳು ಕ್ಯಾಂಪಸ್ ನಿಂದ ಹೊರಬರುತ್ತಿದ್ದಂತೆ ಶಾಸಕರು ಧಾರ್ಮಿಕ ಘೋಷಣೆಗಳನ್ನು ಕೂಗಿಸಿ, ಶಿಕ್ಷಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಲಾ ಆಡಳಿತ ಮಂಡಳಿಯು ಅಪಾರ ಒತ್ತಡಕ್ಕೆ ಮಣಿದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ವಿದ್ಯಾರ್ಥಿ ಸಮುದಾಯವು ಸುರಕ್ಷತೆಯನ್ನು ಖಾತ್ರಿಪಡಿಸಲು, ವಿಚಾರಣೆಗೆ ಬಾಕಿಯಿರುವವರೆಗೂ ಶಿಕ್ಷಕಿಯನ್ನು ಅಮಾನತುಗೊಳಿಸಿತು.

ನಿಜವಾಗಿ ಏನಾಯಿತು ಎಂಬುದರ ಕುರಿತು ಬೆಳಕು ಚೆಲ್ಲುವುದು ಮುಖ್ಯವಾಗಿದೆ. ಇಂಗ್ಲಿಷ್ ಟೀಚರ್ ರವೀಂದ್ರನಾಥ ಟ್ಯಾಗೂರ್ ಅವರ “Work is Worship” ಎಂಬ ಕವಿತೆಯನ್ನು ಕಲಿಸುತ್ತಿದ್ದರು. ಮತ್ತು ಅವರು “Whom dost thou worship in this lonely dark corner of the temple with doors all shut?” (“ದೇವಾಲಯದ ಬಾಗಿಲು ಮುಚ್ಚಿರುವ ಈ ಏಕಾಂಗಿ ಕತ್ತಲೆ ಮೂಲೆಯಲ್ಲಿ ಯಾರನ್ನು ಪೂಜಿಸುತ್ತೀರಿ?”) ಎಂಬ ಸಾಲುಗಳನ್ನು ವಿವರಿಸುತ್ತಿದ್ದರು. (7ನೇ ತರಗತಿಯ ರಾಜ್ಯ ಮಂಡಳಿಯ ಇಂಗ್ಲಿಷ್ ಪಠ್ಯಕ್ರಮ, ಕರ್ನಾಟಕ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತೆ ಅವರು ಯಾವದನ್ನೂ ಕಲಿಸಲಿಲ್ಲ ಅಥವಾ ಹೇಳಲಿಲ್ಲ’ ಎಂದು ಕ್ಯಾಥೋಲಿಕ ಧರ್ಮಪ್ರಾಂತ್ಯವು ಸ್ಪಷ್ಟ ಪಡಿಸಿದೆ.

ಈ ಘಟನೆಗಳ ಹಿನ್ನಲೆಯಲ್ಲಿ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಆಯೋಗವು ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಿ, ಮಹಿಳಾ ಶಿಕ್ಷಕರು ಮತ್ತು ಮಕ್ಕಳಿಗೆ ಶಾಸಕರಿಂದ ಆಗಿರುವ ಆಘಾತಕಾರಿ ವರ್ತನೆಯ ಬಗ್ಗೆ ತನಿಖೆ ನಡೆಸಬೇಕೆಂದು ಮಂಗಳೂರು ಕ್ಯಾಥೋಲಿಕ ಧರ್ಮಪ್ರಾಂತ್ಯವು ವಿನಂತಿಸಿರುತ್ತದೆ.

ಇಂಗ್ಲಿಷ್ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ತನಿಖೆ ಮಾಡಲು ಮತ್ತು ಶಿಕ್ಷಕಿ ಮಹಿಳೆಯಾಗಿದ್ದು ಅವರ ಘನತೆಯನ್ನು ಕಾಪಾಡಲು ಧರ್ಮಪ್ರಾಂತ್ಯವು ಅಧಿಕಾರಿಗಳನ್ನು ಒತ್ತಾಯಿಸಿದೆ. ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಹಿತಾಸಕ್ತಿಗಳನ್ನು ರಕ್ಷಿಸಲು ಸಂಬಂಧಿಸಿದ ಎಲ್ಲರನ್ನೂ ಧರ್ಮಪ್ರಾಂತ್ಯ ವಿನಂತಿಸಿದೆ.

ಮಂಗಳೂರು ಧರ್ಮಪ್ರಾಂತ್ಯವು ಚುನಾಯಿತ ಜನಪ್ರತಿನಿಧಿಯಾದ ಶಾಸಕ ವೇದವ್ಯಾಸ್ ಕಾಮತ್ ಮತ್ತು ಅವರ ಸಹದ್ಯೋಗಿಗಳಿಂದ ಶಿಕ್ಷಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಿನಿಮಾ

 ಅರುಣ್ ಜಿ

ಮಂಗಳೂರು: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ “ರವಿಕೆ ಪ್ರಸಂಗ” ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. “ರವಿಕೆ ಪ್ರಸಂಗ” ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ “ರವಿಕೆ ಪ್ರಸಂಗ”. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು “ರವಿಕೆ ಪ್ರಸಂಗ” ಸಿನಿಮಾದಲ್ಲಿ ಮಾಡಿದ್ದಾರೆ.

‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

ರವಿಕೆ ಪ್ರಸಂಗ ಸಿನಿಮಾವನ್ನು ‘ಮಾಷ್೯ ಡಿಸ್ಟ್ರಿಬ್ಯುಟರ್ಸ್’ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.

ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್  ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ, ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’.

ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.  ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ‘ರವಿಕೆಪ್ರಸಂಗ’ ರಾಜ್ಯಾದ್ಯಂತ ತೆರೆಕಾಣಲಿದೆ.

ರಾಜಕೀಯ

ಮಂಗಳೂರು: ಮಂಗಳೂರು ಐಜಿಪಿ ಕಛೇರಿ ವ್ಯಾಪ್ತಿಯ ಹಾಗೂ ಇಲ್ಲಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಪರಮೇಶ್ವರ್ ಅವರು ಪಶ್ಚಿಮ ವಲಯ ಐಜಿಪಿ ಕಛೇರಿ ವ್ಯಾಪ್ತಿಯ ಹಾಗೂ ಇಲ್ಲಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಗೃಹ ಸಚಿವರು, ‘ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇದು ನನಗೆ ಹೊಸ ಹುದ್ದೆ ಅಲ್ಲ. ಹೊಸ ಸವಾಲುಗಳು ಹುಟ್ಟಿಕೊಂಡಿವೆ ಮತ್ತು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ’ ಎಂದರು.

‘ನೈತಿಕ ಪೊಲೀಸ್​ಗಿರಿ ತಡೆಯಲು ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಘಟಕ ಸ್ಥಾಪಿಸುತ್ತೇವೆ. ಆ್ಯಂಟಿ ಕಮ್ಯುನಲ್ ವಿಂಗ್​ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದರು. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಅಂತಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್​ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ ಇಲಾಖೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್​ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು’ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಅಧಿವೇಶನದಲ್ಲಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಮಾತನಾಡಿದರು.

“ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗುವ ಮೇಲ್ಪಂಕ್ತಿಯನ್ನು ಎತ್ತಿಹಿಡಿವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸದನದ ಘನತೆ, ಗಾಂಭೀರ್ಯ, ಗೌರವವನ್ನು ಸ್ಪೀಕರ್ ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳ್ವತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ ಎಂದು ಆಶಿಸುತ್ತೇನೆ.

ಖಾದರ್ ಅವರು ಸಭಾದ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ, ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ. ಹೊಸದಾಗಿ ಆರಿಸಿ ಬಂದ ಸದಸ್ಯರಿಗೆ ಅಭಿನಂದನೆಗಳು. ಸರ್ಕಾರವಾಗಿ ತಮಗೆ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ.

ರಾಜಕಾರಣದ ಕುಟುಂಬದಿಂದ ಬಂದಿರುವ ಯು.ಟಿ.ಖಾದರ್ ಅವರು ತಮ್ಮ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾದ ಖಾದರ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2018ರಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಸದನವೀರ” ಪ್ರಶಸ್ತಿಯೂ ದೊರೆತಿತ್ತು.

ಯು.ಟಿ.ಖಾದರ್ ಅವರು ಮಾದರಿ ಶಾಕಸರಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕರಾಗಿ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಾತ್ಯಾತೀತ ಮನೋಭಾವ ಉಳ್ಳವರು ಕೂಡ.

ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲ ಸದಸ್ಯರೂ ಬಯಸುತ್ತಾರೆ. ವಿಧಾನಸಭೆಯಲ್ಲಿ ಈ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆ ಹೋಗಲಾಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. “ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ”. ಇಲ್ಲಿ ಏಳು ಕೊಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು.

ಸದನದ ಅಧ್ಯಕ್ಷರಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಸದನದ ಚರ್ಚೆಯಲ್ಲಿ ಅನೇಕ ವಿಚಾರಗಳು ಬರುತ್ತವೆ. ಚರ್ಚೆಯಲ್ಲಿ ಭಾಗವಹಿಸುವಾಗ ಪದಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಅಸಂವಿಧಾನಾತ್ಮಕ ಪದಬಳಕೆಗೆ ಅವಕಾಶವಿರಬಾರದು. ರಚನಾತ್ಮಾಕವಾದ ಸಲಹೆಗಳನ್ನು ನೀಡಲು ಎಲ್ಲರಿಗೂ ಅವಕಾಶ ಹಾಗೂ ಹಕ್ಕುಗಳಿವೆ.

ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕ. ವಿಧಾನಸಭೆಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಇರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆಯಾಗುವುದಿಲ್ಲ. ಬಂಡವಾಳ ಹೂಡಿಕೆಯಾಗದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗದಿದ್ದರೆ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕವಾಗಿದೆ” ಎಂದು ಹೇಳಿದರು.

ರಾಜ್ಯ

ಸ್ವಯಂ ಘೋಷಿತ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು.

ಬೆಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಹಿಂದೂ ವಿರೋಧಿ, ಭ್ರಷ್ಟಾಚಾರ ಚಟುವಟಿಕೆ ಹಾಗೂ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 1) ರಾಜೇಶ್ ಪವಿತ್ರನ್, 2) ಎಲ್.ಕೆ.ಸುವರ್ಣ, 3) ಸುಂದರ್ ಜೀ, 4) ವಿವೇಕನಂದ, 5) ಕಿಶೋರ್ ಕುಮಾರ್ ಮುಂತಾದವರ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ (ಕರ್ನಾಟಕ) ರಾಜಾಧ್ಯಕ್ಷ ಡಾ.ಮನೋಜ್ ಆಲುಂಗಲ್ ಕೆಂಡಕಾರಿದ್ದಾರೆ.

ಇಂದು ಬೆಂಗಳೂರು ಪ್ರಸ್‍ಕ್ಲಬ್‍ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಡಾ.ಮನೋಜ್ ಆಲುಂಗಲ್ ‘ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷವು ಭಾರತದ ಪ್ರಪ್ರಥಮ ರಾಜಕೀಯ ಪಕ್ಷವಾಗಿದೆ. ಈ ಪಕ್ಷವು ವಿನಾಯಕ ದಾಮೋದರ್ ಸಾವರ್ಕರ್ ಅವರಿಂದ 1907ರಲ್ಲಿ ಸ್ಥಾಪಿಸಲ್ಪಟ್ಟಿದ್ದು. ಇಂದಿನ ಆಯ್ದ ಹಲವು ಪ್ರತಿಷ್ಠಿತ ಪಕ್ಷಗಳು ಇಲ್ಲಿಂದಲೇ ಹುಟ್ಟಿಕೊಂಡಿರುತ್ತದೆ.

ಈ ಪಕ್ಷದ ಈಗಿನ ರಾಷ್ಟ್ರಾಧ್ಯಕ್ಷರು ಚಕ್ರಪಾಣಿ ಮಹಾರಾಜ್ ರವರು, ಕರ್ನಾಟಕ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ನನಗೆ ನೀಡಿರುತ್ತಾರೆ. ನಾನು ಈಗ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷನಾದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಲ್ಲಿ ನಾವೆಲ್ಲರು ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನು ಸಾರುತ್ತ, ಎಲ್ಲರೂ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತೇವೆ.

ಈ ಹಿನ್ನಲೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದ ಕೆಲವು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಸರಿಯಾದ ರೀತಿಯಲ್ಲಿ ಪಕ್ಷದ ಕಾರ್ಯವೈಕರಿಗಳನ್ನು ಮುಂದುವರೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದ್ದರೂ ಅವರುಗಳು ತಮ್ಮ ಹಿಂದಿನ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದ ಕಾರಣದಿಂದ ಪಕ್ಷದ ರಾಷ್ಟ್ರಾಧ್ಯಕ್ಷರ ಗಮನಕ್ಕೆ ತಂದು, ಅವರ ಆದೇಶದ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿರುತ್ತದೆ.

ನಂತರದಲ್ಲಿ ಕೆಲವು ಪಕ್ಷದ ಪದಾಧಿಕಾರಿಗಳು, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಹೆಸರಿನಡಿಯಲ್ಲಿ ಸ್ವಯಂ ಘೋಷಿತ ರಾಜ್ಯಾಧ್ಯಕ್ಷರುಗಳಾಗಿ ಸಮಾಜದ ಜನತೆಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಹಿಂದೂ ವಿರೋಧಿ, ಭ್ರಷ್ಟಾಚಾರ ಚಟುವಟಿಕೆ ಹಾಗೂ ಸಮಾಜ ವಿರೋಧಿ ಕಾರ್ಯಗಳಲ್ಲಿ ಪಾಲ್ಗೊಂಡಿರುತ್ತಾರೆ. ಮತ್ತು ತಮ್ಮ ಈ ಎಲ್ಲಾ ಕಾರ್ಯಗಳಿಗೂ ಅಖಿಲ ಭಾರತ ಹಿಂದೂ ಮಾಹಾಸಭಾ ಪಕ್ಷದ ಹೆಸರು, ಬಾವುಟ, ಹಾಗೂ ಲಾಂಛನವನ್ನು ಉಪಯೋಗಿಸುತ್ತಿದ್ದಾರೆ. ಇದು ದರಾದೃಷ್ಟಕರ ಸಂಗತಿಯಾಗಿದೆ.

ಇಂತಹ ಕಾರ್ಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾವು, ಈ ರೀತಿಯಾದಂತಹ ಅವ್ಯವಹಾರಗಳನ್ನು ತಡೆಗಟ್ಟುವ ಹಾಗೂ ಪಕ್ಷದ ಹೆಸರಿಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹಿತಾಸಕ್ತಿಯಿಂದ ಕಾನೂನಾತ್ಮಕ ಹೋರಾಟವನ್ನು ಮಾಡಲು ಮುಂದಾಗಿ 1) ರಾಜೇಶ್ ಪವಿತ್ರನ್, 2) ಎಲ್.ಕೆ.ಸುವರ್ಣ, 3) ಸುಂದರ್ ಜೀ, 4) ವಿವೇಕನಂದ, 5) ಕಿಶೋರ್ ಕುಮಾರ್ ಮುಂತಾದವರ ವಿರುದ್ಧ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತೇವೆ. ಆದರೂ ರಾಜೇಶ್ ಪವಿತ್ರನ್ ಹಾಗೂ ಆತನ ಸಹಚರರು ಪಕ್ಷದ ಹೆಸರನ್ನು ನಮೂದಿಸಿ, ಸಭೆ ಸಮಾರಂಭಗಳನ್ನು ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ: 16.12.2022 ರಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಿರುತ್ತೇವೆ’. ಎಂದು ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಪಕ್ಷದ ಹಲವಾರು ಪ್ರಮುಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.