ಮೇ 28 ರಂದು ದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ, ಸಿಪಿಎಂ ಮತ್ತು ಸಿಪಿಐ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.
ಇದು ಸಂವಿಧಾನ ಬಾಹಿರ. ಪ್ರಧಾನಿ ಮೋದಿಯವರ ಬದಲಿಗೆ ಸಂಸತ್ತಿನ ಅಧ್ಯಕ್ಷರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಬೇಕು. ಅವರನ್ನು ಆಹ್ವಾನಿಸಬೇಕಿತ್ತು ಎಂದು ವಾದಿಸಿದ್ದಾರೆ.
ಕಾಂಗ್ರೆಸ್ ತನ್ನ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಪಕ್ಷವು ಸಮಾರಂಭವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ವಿರೋಧ ಪಕ್ಷಗಳು ಸಮಾರಂಭವನ್ನು ಜಂಟಿಯಾಗಿ ಬಹಿಷ್ಕರಿಸುವ ಹೇಳಿಕೆಯನ್ನು ನೀಡಬಹುದು ಎಂದು ವರದಿಗಳಾಗಿವೆ. ಡಿಸೆಂಬರ್ 2020ರಲ್ಲಿ ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದವು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾದ ಅದೇ ದಿನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಘೋಷಿಸಿದವು.
ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರೇನ್ ಅವರು, “ಸಂಸತ್ತು ಕೇವಲ ಕಟ್ಟಡವಲ್ಲ; ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯ. ಪ್ರಧಾನಿ ಮೋದಿಗೆ ಇದು ಅರ್ಥವಾಗುತ್ತಿಲ್ಲ. ಭಾನುವಾರ ನಡೆಯುವ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವು ನಾನು… ನಾನೇ ಎಂಬುದನ್ನು ಎತ್ತಿ ತೋರಿಸುತ್ತದೆ” ಎಂದರು.
ಮತ್ತು ಪಕ್ಷದ ಮತ್ತೊಬ್ಬ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್, “ಇದು ಅಸಭ್ಯವಾದದ್ದು” ಎಂದು ಬಣ್ಣಿಸಿದ್ದಾರೆ. “ಬಿಜೆಪಿ ಪಕ್ಷವು ಮಹಿಳೆ ಮತ್ತು ಬುಡಕಟ್ಟು ಜನಾಂಗದ ರಾಷ್ಟ್ರಪತಿಗಳನ್ನು ನೇರವಾಗಿ ಅವಮಾನಿಸುತ್ತಿದೆ. ಕಟ್ಟಡವೂ ಇನ್ನೂ ಪೂರ್ಣಗೊಂಡಿಲ್ಲ. ಹಾಗಾದರೆ ಉದ್ಘಾಟನೆಗೆ ಈ ಧಾವಂತ ಏನನ್ನು ವಿವರಿಸುತ್ತದೆ? ಮೇ 28 (VD) ಸಾವರ್ಕರ್ ಅವರ ಜನ್ಮದಿನವಾಗಿದೆ ಎಂಬುದಕ್ಕಾಗಿಯೆ”? ಎಂದು ಪ್ರಶ್ನಿಸಿದ್ದಾರೆ.
ಆಮ್ ಆದ್ಮಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು “ಮುರ್ಮು ಅವರನ್ನು ಆಹ್ವಾನಿಸದಿರುವುದು ಅವರಿಗೆ ಹಾಗೂ ದೇಶದ ದಲಿತರು, ಆದಿವಾಸಿಗಳು ಮತ್ತು ದೀನದಲಿತ ವರ್ಗಗಳಿಗೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ. “ರಾಷ್ಟ್ರಪತಿಗಳಿಗೆ ಆಹ್ವಾನ ನೀಡದಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಅವರು “ಸಮಾರಂಭವನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳಲ್ಲಿ ಅಗಾಧ ಒಮ್ಮತವಿದೆ” ಎಂದು ತಿಳಿಸಿದ್ದಾರೆ. “ಭಾರತ ದೇಶಕ್ಕೆ ರಾಷ್ಟ್ರಪತಿಗಳೇ ಅಧ್ಯಕ್ಷರು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಪ್ರಧಾನಿ ಸರ್ಕಾರದ ಮುಖ್ಯಸ್ಥರು” ಎಂದರು. “ರಾಷ್ಟ್ರಪತಿಗಳ ಬಹಿಷ್ಕಾರವನ್ನು ಒಪ್ಪಲಾಗದು” ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಡಿಎಂಕೆ ಬಹಿಷ್ಕಾರ ಘೋಷಿಸಿದೆ: ದೆಹಲಿಯಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ಡಿಎಂಕೆ ನಿರ್ಧರಿಸಿದೆ. 28 ರಂದು ನಡೆಯಲಿರುವ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಡಿಎಂಕೆ ಸಂಸದ ತಿರುಚ್ಚಿ ಶಿವ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.