ಕೋಲ್ಕತ್ತಾ: ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೋದಿ ಮತ್ತು ಅದಾನಿ ವಿರುದ್ಧ ಪ್ರಬಲವಾಗಿ ವಾದ ಮಂಡಿಸುತ್ತಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪ್ರಮುಖರು. ಇವರು, ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ಹಿರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ.
ಅಲ್ಲದೆ, ಹಿರಾನಂದಾನಿ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಲೋಕಸಭೆಯ ವೆಬ್‌ಸೈಟ್ ಮತ್ತು ತಮ್ಮ ಲಾಗಿನ್ ಐಡಿಯನ್ನು ಮಹುವಾ ಮೊಯಿತ್ರಾ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದ ನಂತರ, ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಸಂಸದೀಯ ನೈತಿಕ ಸಮಿತಿ, ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಆದೇಶ ಮಾಡಿತು.
ಈ ಹಿನ್ನಲೆಯಲ್ಲಿ, ನನ್ನನ್ನು ಸಂಸತ್ತಿನಿಂದ ಹೊರಹಾಕಲು ಬಯಸುವವರು ನನ್ನ ತಲೆ ಕೂದಲನ್ನೂ ಮುಟ್ಟಲಾಗದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವಾಗಿ ಉಡುಗೊರೆ ಪಡೆದಿರುವ ಆರೋಪಕ್ಕೆ ಮೇಲಿನಂತೆ ಮಹುವಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.