ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Press Meet Archives » Dynamic Leader
November 21, 2024
Home Posts tagged Press Meet
ರಾಜಕೀಯ

ಬೆಳಗಾವಿ: ಬೆಳಗಾವಿಯಲ್ಲಿ ಇಂದು ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್.ಎಸ್.ಎಸ್ ಹೇಳುತ್ತಿದ್ದು, ಇವರಿಂದ ಸಂವಿಧಾನ ಉಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಹಾಗಾಗಿ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ನೀಡಿರುವ ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ, ಸಮ ಸಮಾಜದ ಗ್ಯಾರಂಟಿ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು.

ರಾಜ್ಯದ ಬಡ ಜನರ ತುತ್ತಿನ ಚೀಲ ತುಂಬಿಸುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಸಲು ಕೋರಿದಾಗ, ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಅಕ್ಕಿ ಬದಲು ಕೆಜಿಗೆ 34 ರೂ.ನಂತೆ 5 ಕೆ.ಜಿಗೆ 170 ರೂ. ಹಾಗೆ ಜುಲೈ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ ಎಂದು ಹೇಳಿದರು.

ಗೃಹಜ್ಯೋತಿಯನ್ನು ಜುಲೈ ತಿಂಗಳಲ್ಲಿ ಜಾರಿ ಮಾಡಲಾಯಿತು. 1.60 ಕೋಟಿ ಫಲಾನುಭವಿಗಳಿಗೆ ಅಂದರೆ ರಾಜ್ಯದ ಸುಮಾರು 92% ಜನರಿಗೆ ಇದರಿಂದ ಲಾಭವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಲಾ 2,000 ರೂ.ನಂತೆ ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲಾಯಿತು.

ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದವರಿಗೆ ತಲಾ 2000 ರೂ. ನೀಡುವ ಯುವನಿಧಿ ಯೋಜನೆಯನ್ನು ವಿವೇಕಾನಂದರ ಜನ್ಮದಿನಾಚರಣೆಯಂದು ಜಾರಿ ಮಾಡಲಾಯಿತು. ಈ ಅವಧಿಯಲ್ಲಿ ಬೇಡಿಕೆಯಿರುವ ತರಬೇತಿಯನ್ನು ಯುವಜನರಿಗೆ ನೀಡಿ, ಅವರಿಗೆ ಉದ್ಯೋಗ ದೊರೆಯಲು ಶಕ್ತಿ ತುಂಬಲಾಗುವುದು.

ಹಿಂದೆಯೂ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ನೀಡಿದ್ದು ಜನರಿಗೆ ವಿಶ್ವಾಸ ಬಂದಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಎಂದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ. ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52,009 ಕೋಟಿ ರೂ.ಗನ್ನು ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿಗಳನ್ನೂ ಸೇರಿದಂತೆ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೇವೆ.

ನಮ್ಮ ಸರ್ಕಾರದ ಬಜೆಟ್ ಗಾತ್ರ 3.71 ಲಕ್ಷ ಕೋಟಿ, ಬೊಮ್ಮಾಯಿಯವರ ಬಜೆಟ್ 23-24ರಲ್ಲಿ 3.09 ಲಕ್ಷ ಕೋಟಿ. ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಜನರಿಗೆ ಕಾಂಗ್ರೆಸ್ ನ ಮೇಲೆ ವಿಶ್ವಾಸ ಕಡಿಮೆಯಾಗಲಿ ಎಂದು ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಕಂಡರೆ ಆಗುವುದಿಲ್ಲ. ಅದನ್ನು ನಿಲ್ಲಿಸಬೇಕೆಂಬುದು ಅವರ ಪಿತೂರಿಯಾಗಿದೆ. ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಏಳಿಗೆ ಅವರಿಗೆ ಮುಖ್ಯವಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಿಂದ ಯಾವುದೇ ಸಾಧನೆಗಳನ್ನು ಮಾಡಿಲ್ಲ. 2014ರಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಮೋದಿಯವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣ, ಧರ್ಮದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿ ಅವರು ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಾಗೂ ನ್ಯಾಯ ಯಾತ್ರೆ ಮಾಡಿದರು. ದೇಶ ವಿಭಜನೆ ಮಾಡಲು ಮೋದಿಯವರು ಮಾಡಿರುವ ಪ್ರಯತ್ನಗಳಿಂದ ಬೇಸತ್ತಿದ್ದ ಜನರ ಒಡೆದ ಮನಸ್ಸನ್ನು ಒಗ್ಗೂಡಿಸಲು ಯಾತ್ರೆ ಕೈಗೊಂಡು ಯಶಸ್ವಿಯಾದರು ಎಂದು ಭಾರತ್ ಜೋಡೋ ಯಾತ್ರೆಗಳನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷ ನೀಡಿರುವ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಯವರು ಸಹಿ ಮಾಡಿ ಹಂಚಿದ್ದಾರೆ. ಬಡಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಮಹಾಲಕ್ಷ್ಮಿ ಯೋಜನೆ, ಯುವನ್ಯಾಯದಡಿ ಮೊದಲ ಉದ್ಯೋಗದ ಜೊತೆಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಯೋಜನೆ, ರೈತರ ಬೆಳೆಗೆ ನ್ಯಾಯಯುತ ಬೆಲೆ, ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಬೇಡಿಕೆಗಳನ್ನು ಈಡೇರಿಸುವ ‘ರೈತ ನ್ಯಾಯ’ ಯೋಜನೆಗಳ ಭರವಸೆ ನೀಡಿದರು.

ನರೇಂದ್ರ ಮೋದಿ ಅವರು ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಆದರೆ ಅಂಬಾನಿ, ಅದಾನಿಗಳಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳಿತಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದೆಂಬುದು ಬಿಜೆಪಿ ಅವರ ಹಿಡೆನ್ ಅಜೆಂಡಾ ಎಂದು ಕಿಡಿಕಾರಿದರು.

ಅವಕಾಶ ವಂಚಿತರಿಗೆ ನ್ಯಾಯ ನೀಡಲು, ಸರ್ಕಾರದ ಅನುಕೂಲ ದೊರಕಿಸಿಕೊಡಲು ಜಾತಿಗಣತಿ ಅತಿ ಮುಖ್ಯ. ಪಾಲುದಾರಿಕೆ ನ್ಯಾಯ, ಶ್ರಮಿಕ ನ್ಯಾಯ ಯೋಜನೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಹೀಗೆ ದೇಶಾದ್ಯಂತ ಜಾರಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ 100 ರೂ.ಗೆ ಕೇವಲ 13 ರೂ. ಮರಳಿ ಬರುತ್ತಿದೆ. 11,495 ಕೋಟಿ ರೂ.ಗಳನ್ನು 15ನೇ ಹಣಕಾಸು ಆಯೋಗ ನಿರ್ಧರಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಇಷ್ಟೆಲ್ಲಾ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಮೋದಿಯವರ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದ್ದರು.

ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 23 ರಂದು ಬರಪರಿಹಾರಕ್ಕೆ ಮನವಿ ಮಾಡಲಾಗಿದೆ. ರೂ.18,172 ಕೋಟಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಳಿದೆವು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ. ಕೇಂದ್ರ ತಂಡ ಬರಪರಿಹಾರ ಅಧ್ಯಯನ ಮಾಡಿದ್ದಾರೆ. ರಾಜ್ಯದ ಮಂತ್ರಿಗಳು, ನಾನು ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೋರಿದರೂ ಮನ್ನಣೆ ಸಿಗಲಿಲ್ಲ. ಆದ್ದರಿಂದ ಮನವಿ ಸಲ್ಲಿಸಿದ 7 ತಿಂಗಳ ನಂತರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆವು. ಸುಪ್ರೀಂ ಕೋರ್ಟ್ ಚಾಟಿ ಬೀಸುವ ತನಕ ಒಂದು ರೂ. ಕೊಡಲಿಲ್ಲ. ರೂ.3,454 ಕೋಟಿ ನಂತರ ಕೊಟ್ಟರು.

ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಬದಲಿಸಲು ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಮೋದಿಯವರು ಕೇವಲ ಚೊಂಬು ನೀಡಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ತಮ್ಮ ಮತಗಳ ಮೂಲಕ ಛಾಟಿ ಬೀಸುತ್ತಾರೆ. ಈ ಬಾರಿ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಮೋದಿಯವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನರಿಗೆ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ರಾಜಕೀಯ

ನವದೆಹಲಿ: ಖಾಸಗಿ ಕಂಪನಿಗಳ ಮೇಲೆ ದಾಳಿ ಮಾಡಿ, ಅವುಗಳ ಮೂಲಕ ಬಿಜೆಪಿಗೆ ದೇಣಿಗೆ ಸಂಗ್ರಹಿಸಲಿಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್, ‘ಕಳೆದ ಹಣಕಾಸು ವರ್ಷಗಳ 2018-19 ಮತ್ತು 2022-23ರ ನಡುವೆ ಬಿಜೆಪಿಗೆ ಒಟ್ಟು 335 ಕೋಟಿ ರೂ ದೇಣಿಗೆ ನೀಡಿರುವ ಸುಮಾರು 30 ಕಂಪನಿಗಳು, ಅದೇ ಅವಧಿಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆಗಳನ್ನು ಎದುರಿಸಿರುತ್ತದೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಬಿಜೆಪಿ ಅವರ ಹಣಕಾಸಿನ ಮೂಲಗಳ ಬಗ್ಗೆ ಸ್ವೇತ ಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ಅನುಮಾನಾಸ್ಪದ ದೇಣಿಗೆಗಳನ್ನು ತನಿಖೆ ಮಾಡಲು ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ, ‘ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐ ಮುಂತಾದ ಕೇಂದ್ರೀಯ ಗುಪ್ತಚರ ಸಂಸ್ಥೆಗಳ ತನಿಖೆಯನ್ನು ಎದುರಿಸಿದ ನಂತರ, ಹಲವು ಖಾಸಗಿ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಇದು ಕೇಂದ್ರ ಗುಪ್ತಚರ ಸಂಸ್ಥೆಯ ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ 3 ತನಿಖಾ ಸಂಸ್ಥೆಗಳ ಪೈಕಿ 2 ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತವೆ.

ಗುಪ್ತಚರ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಹೇಗೆ ನಿಯಂತ್ರಿಸುತ್ತದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ರಾಜಕಾರಣಿಗಳ ಮೇಲಿನ ಜಾರಿ ನಿರ್ದೇಶನಾಲಯದ ಪ್ರಕರಣಗಳು 2014 ರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಶೇಕಡಾ ಶೇ.95ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವೇ ಆಗಿವೆ.

ಬಿಜೆಪಿಗೆ ಒಟ್ಟು 187.58 ಕೋಟಿ ರೂ.ನೀಡಿದ 30 ಕಂಪನಿಗಳ ಪೈಕಿ, 23 ಕಂಪನಿಗಳು, 2014 ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರುವುದಿಲ್ಲ. ಆದರೆ ಅದರ ನಂತರ ದೇಣಿಗೆಯನ್ನು ನೀಡಿದೆ. ಈಗಾಗಲೇ ದೇಣಿಗೆ ನೀಡುತ್ತಿದ್ದ ಸಂಸ್ಥೆಗಳು ದಾಳಿಯ ನಂತರ ಹೆಚ್ಚಿನ ದೇಣಿಗೆಗಳನ್ನು ನೀಡಿವೆ.

ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳು ಅಕ್ರಮ ಎಂದು ನಾವು ಹೇಳುತ್ತಿಲ್ಲ. ಆದರೆ ಈ ಕಂಪನಿಗಳು ತನಿಖೆ ಎದುರಿಸಿದ ನಂತರ ಬಿಜೆಪಿಗೆ ಏಕೆ ದೇಣಿಗೆ ನೀಡುತ್ತಿವೆ ಎಂಬುದು ತನಿಖೆಯಾಗಬೇಕಾದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಕ್ರಮದ ನಂತರ ಅವರು ಬಿಜೆಪಿಗೆ ದೇಣಿಗೆ ನೀಡುತ್ತಿರುವುದು ಕೇವಲ ಕಾಕತಾಳೀಯವೇ? ನಾವು ಈ ವಿಷಯವನ್ನು ನ್ಯಾಯಾಂಗ ಮತ್ತು ಜನರ ಬಳಿಗೆ ಕೊಂಡೊಯ್ಯುತ್ತೇವೆ. ಎರಡೂ ಕಡೆಯೂ ನಿಮ್ಮನ್ನು ಸೋಲಿಸುತ್ತೇವೆ’ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ದೇಶ ರಾಜಕೀಯ

ಪಾಟ್ನಾ: ಇನ್ನು ಕೆಲವು ಪಕ್ಷಗಳು “ಇಂಡಿಯಾ” ಮೈತ್ರಿಕೂಟಕ್ಕೆ ಸೇರಲಿವೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗುತ್ತಿವೆ. ಅದರಂತೆ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 26 ಪಕ್ಷಗಳು “ಇಂಡಿಯಾ” ಮೈತ್ರಿಕೂಟವನ್ನು ರಚಿಸಿವೆ. ಅದೇ ಸಮಯದಲ್ಲಿ, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) 38 ಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಸನಾತನ ಧರ್ಮವು ಓದುವುದನ್ನು ತಡೆಮಾಡಿತು; ದ್ರಾವಿಡ ಮಾದರಿ ಸರ್ಕಾರ ಹಸಿವು ನೀಗಿಸಿ ಓದುವಂತೆ ಮಾಡಿದೆ!

ಇಂಡಿಯಾ ಮೈತ್ರಿಕೂಟದ ಮೊದಲ ಸಭೆ ಕಳೆದ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದಿದ್ದು, ಎರಡನೇ ಸಭೆ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿತ್ತು. ಮೈತ್ರಿಕೂಟದ ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇಂಡಿಯಾ ಮೈತ್ರಿಕೂಟ ಕಠಿಣ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟಕ್ಕೆ ಇನ್ನೂ ಕೆಲವು ಪಕ್ಷಗಳು ಸೇರಲಿವೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, “ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಿದ್ದೇವೆ. ಅಲ್ಲದೆ ಕ್ಷೇತ್ರ ಹಂಚಿಕೆ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಕೆಲವು ರಾಜಕೀಯ ಪಕ್ಷಗಳು ನಮ್ಮ ಮೈತ್ರಿಗೆ ಸೇರಲಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನಾನು ಗರಿಷ್ಠ ಪಕ್ಷಗಳನ್ನು ಒಗ್ಗೂಡಿಸಲು ಬಯಸುತ್ತೇನೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ನನಗೆ ಆಸೆ ಇಲ್ಲ.” ಎಂದು ಹೇಳಿದರು.