ನ್ಯೂಯಾರ್ಕ್: ಬಿಜೆಪಿಯನ್ನು ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುವುದನ್ನೇ ರೂಡಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಮೆರಿಕಕ್ಕೆ ತೆರಳಿರುವ ಕಾಂಗ್ರೆಸ್‌ನ ಮಾಜಿ ನಾಯಕ ರಾಹುಲ್ ಗಾಂಧಿ, ನ್ಯೂಯಾರ್ಕ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ, “ನೀವು ಬಿಜೆಪಿಯನ್ನು ಏನೇ ಕೇಳಿದರೂ ಅದಕ್ಕೆ ಉತ್ತರ ಕೊಡದೆ, ಅದರಿಂದ ಹಾದುಹೋಗುವುದನ್ನು ಕಾಣಬಹುದು. ಒಡಿಶಾ ರೈಲು ಅಪಘಾತದ ಬಗ್ಗೆ ಬಿಜೆಪಿಯವರನ್ನು ಪ್ರಶ್ನೆ ಮಾಡಿ; 50 ವರ್ಷಗಳ ಹಿಂದಿನ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಬಳಿ ಇರುವ ತಕ್ಷಣದ ಉತ್ತರ ಏನು ಗೊತ್ತೆ? ಇತಿಹಾಸವನ್ನು ನೋಡಿ ಎಂಬುದೇ. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಇತರರನ್ನು ದೂಷಿಸುವ ಪ್ರವೃತ್ತಿಯನ್ನು ಹೊಂದಿದೆ.
ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ಸಂಭವಿಸಿದರೆ ತಕ್ಷಣವೇ ಸಚಿವರು ರಾಜೀನಾಮೆ ನೀಡುತ್ತಿದ್ದರು. ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸರಿಯಾದ ಕ್ರಮವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ನಡೆದಿವೆ; ಬ್ರಿಟಿಷರ ಆಡಳಿತವೇ ಅದಕ್ಕೆ ಕಾರಣ ಎಂದು ಹೇಳಿ, ಕಾಂಗ್ರೆಸ್ ಸರಕಾರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ, ಆರೆಸ್ಸೆಸ್, ಪ್ರಧಾನಿ ಮೋದಿ ಯಾರೇ ಆಗಲಿ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಹಿಂದಿನದನ್ನು ದೂಷಿಸುವುದನ್ನೇ ವಾಡಿಕೆಯಾಗಿ ಮಾಡಿಕೊಂಡಿದ್ದಾರೆ.
ಇತರರನ್ನು ದೂಷಿಸಿ ತಪ್ಪಿಸಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ (NRI) ಪಾತ್ರ ಪ್ರಮುಖವಾದದ್ದು. ಮಹಾತ್ಮಾ ಗಾಂಧಿಯವರು ಕೂಡ ಅನಿವಾಸಿ ಭಾರತೀಯರಾಗಿದ್ದರು. ನೆಹರೂ, ಅಂಬೇಡ್ಕರ್, ವಲ್ಲಭ ಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರೂ ಅನಿವಾಸಿ ಭಾರತೀಯರೇ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದರೂ ಸಹ ಅವರು ಒಟ್ಟಿಗೆ ಕೆಲಸ ಮಾಡಿದರು. ಇದನ್ನೇ ನಾನು ಭಾರತೀಯ ಸಮಾಜದಿಂದ ನಿರೀಕ್ಷಿಸುತ್ತೇನೆ” ಎಂದರು.