ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Raj Bhavan Archives » Dynamic Leader
December 3, 2024
Home Posts tagged Raj Bhavan
ದೇಶ

ತಿರುವನಂತಪುರಂ: ಕೇರಳದಲ್ಲಿ ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಮತ್ತು  ಇಂಡಿಯಾ ಕಮ್ಯುನಿಸ್ಟ್ ನೇತೃತ್ವದ ಎಡಪಂಥೀಯ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಪಿಣರಾಯಿ ವಿಜಯನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಏತನ್ಮಧ್ಯೆ, ಕೇರಳ ಸರ್ಕಾರ ಮತ್ತು ರಾಜ್ಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿವಿಧ ವಿಷಯಗಳಲ್ಲಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೇರಳ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರದ ನೀತಿಗಳನ್ನು ಓದುವ ಬದಲು ಭಾಷಣದ ಕೊನೆಯ ಪ್ಯಾರಾವನ್ನು ಮಾತ್ರ ಓದಿ ವಿಧಾನಸಭೆಯಿಂದ ಹೊರನಡೆದರು. ಈ ಘಟನೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಘಾತವನ್ನುಂಟು ಮಾಡಿತ್ತು.

ಈ ವೇಳೆ, ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಪ್ರದೇಶದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಮಧ್ಯಾಹ್ನ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೊಟ್ಟಾರಕ್ಕರದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುವುದನ್ನು ವಿರೋಧಿಸಿ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಐಎಫ್‌) ಪ್ರತಿಭಟನೆ ನಡೆಸಿತು.

ನಿಲಮ್ಮಲ್ ಪ್ರದೇಶದಲ್ಲಿ ರಾಜ್ಯಪಾಲರ ಕಾರು ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಎಸ್ಐಎಫ್ ಕಾರ್ಯಕರ್ತರು ರಾಜ್ಯಪಾಲರ ಆಗಮನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಕಾರಿನಿಂದ ಇಳಿದು ರಸ್ತೆಯಲ್ಲಿ ನಡೆದರು.

ಜನನಿಬಿಡ ಎಂಸಿ ರಸ್ತೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರಿನಿಂದ ಇಳಿದು ಪ್ರತಿಭಟನಾಕಾರರ ಕಡೆಗೆ ಹೋದರು. ಈ ವೇಳೆ ರಸ್ತೆ ಬದಿ ಜಮಾಯಿಸಿದ್ದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಸ್ತೆ ಬದಿಯ ಟೀ ಅಂಗಡಿಗೆ ತೆರಳಿ ಆಸನದಲ್ಲಿ ಕುಳಿತು ಧರಣಿ ನಡೆಸಿದರು. ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರ ವಿರದ್ದವೂ ವಾಗ್ದಾಳಿ ನಡೆಸಿದರು.

ಅಲ್ಲದೆ, ಪ್ರತಿಭಟನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದರು. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ ಸಾಕ್ಷ್ಯ ಒದಗಿಸದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ ರಾಜ್ಯಪಾಲರು, ಉನ್ನತ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಅಥವಾ ಪ್ರಧಾನ ಮಂತ್ರಿ ಕಚೇರಿಗೆ ಕರೆ ಮಾಡಿ ಎಂದು ಸಹಾಯಕರಿಗೆ ಸೂಚಿಸಿದರು.

ತರುವಾಯ, ರಾಜ್ಯಪಾಲರು ಧರಣಿ ಕುಳಿತ ಪ್ರದೇಶಕ್ಕೆ ದೌಡಾಯಿಸಿದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 17 ಎಸ್ಐಎಫ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ ದಾಖಲೆಗಳನ್ನು ಅವರಿಗೆ ನೀಡಿದರು. ಇದರ ನಂತರ, ಟೀ ಅಂಗಡಿಯಲ್ಲಿ 2 ಗಂಟೆಗಳ ಕಾಲ ಧರಣಿ ಕುಳಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಧರಣಿ ಮುಗಿಸಿ ಕೊಟ್ಟಾರಕ್ಕರೆಗೆ ತೆರಳಿದರು.

ಈ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಂದಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ದೇಶ ರಾಜಕೀಯ

ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದ 8 ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ರಾಜ್ಯ ಸರ್ಕಾರ ಇಂದು (ನ.2) ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ಕೇರಳ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಬಹಳ ದಿನಗಳಿಂದ ವಾಗ್ವಾದ ನಡೆಯುತ್ತಿದ್ದು, ಇದೀಗ ರಾಜ್ಯಪಾಲರ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ‘ಜನರಿಂದ ಆಯ್ಕೆಯಾದ ಸರ್ಕಾರವು ಜನರ ಅನುಕೂಲಕ್ಕಾಗಿ ಜಾರಿಗೆ ತರುವ ಕಾನೂನುಗಳನ್ನು ಅನುಮೋದಿಸದೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ರಾಜ್ಯಪಾಲರ ಧೋರಣೆಯು ಕಾನೂನು ಮತ್ತು ಪ್ರಜಾಪ್ರಭುತ್ವ ಸೇರಿದಂತೆ ನಮ್ಮ ಸಂವಿಧಾನದ ಮೂಲ ಉದ್ದೇಶಗಳನ್ನು ಹಾಳುಮಾಡುವುದಾಗಿದೆ’ ಎಂದು ಹೇಳಿದೆ. ಮುಂದುವರಿದು, ‘ನಿಗದಿತ ಸಮಯದಲ್ಲಿ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು’ ಎಂದೂ ಕೋರಲಾಗಿದೆ.

ಈ ಹಿಂದೆಯೂ ಇದೇ ರೀತಿಯಲ್ಲಿ ರಾಜ್ಯಪಾಲರು ಸರ್ಕಾರದ ಮಸೂದೆಗಳಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಮಿಳುನಾಡು ಸರ್ಕಾರ ರಾಜ್ಯಪಾಲ ಆರ್‌.ಎನ್.ರವಿ ವಿರುದ್ಧ ಮತ್ತು ಪಂಜಾಬ್ ಸರ್ಕಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ, ಕೇರಳ ಸರ್ಕಾರ ಕೂಡ ರಾಜ್ಯಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದು ಸಂಚಲನ ಮೂಡಿಸಿದೆ.

ದೇಶ ರಾಜಕೀಯ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ‘ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್’ ಸರಣಿಯ 3ನೇ ಆಡಿಯೋ ಇಂದು ಬಿಡುಗಡೆಯಾಗಿದೆ. ಅದರಲ್ಲಿ ಮಾತನಾಡಿರುವ ಎಂ.ಕೆ.ಸ್ಟಾಲಿನ್, “ರಾಜಭವನಗಳ ಮೂಲಕ ರಾಜ್ಯ ಸ್ವಾಯತ್ತತೆಯನ್ನು ಬಿಜೆಪಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತ ಒಂದು ಸಂಯುಕ್ತ ರಾಷ್ಟ್ರ. ವಿವಿಧ ಸುಂದರವಾದ ಹೂವುಗಳಿಂದ ತುಂಬಿದ ಅದ್ಭುತ ಉದ್ಯಾನ. ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಹಕ್ಕುಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಪ್ರಧಾನಿಯಾದ ಬಳಿಕ ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ.

ಬಿಜೆಪಿ, ರಾಜ್ಯಗಳನ್ನು ರದ್ದುಪಡಿಸಬೇಕೆಂದು ಬಯಸುತ್ತಿದೆ. ಸಿಎಜಿ ಮೂಲಕ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದ ಅಧಿಕಾರಿಗಳು ಎಲ್ಲರನ್ನೂ ಬಿಜೆಪಿ ಸರ್ಕಾರ ತ್ವರಿತವಾಗಿ ವರ್ಗಾವಣೆ ಮಾಡಿದೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ.

ರಾಜ್ಯಗಳನ್ನು ರಕ್ಷಿಸೋಣ, ಭಾರತವನ್ನು ರಕ್ಷಿಸೋಣ, ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸೋಣ. ಕೇಂದ್ರದಲ್ಲಿ ಒಕ್ಕೂಟ ಸರ್ಕಾರ; ರಾಜ್ಯಗಳಲ್ಲಿ ಸ್ವಾಯತ್ತತೆ ಸರ್ಕಾರ ಇದುವೇ ನಿಜವಾದ ಪ್ರಜಾಪ್ರಭುತ್ವ ಆಗಿರುತ್ತದೆ” ಎಂದು ಹೇಳಿದರು.

ದೇಶ

ನವದೆಹಲಿ: ಉಪಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರದ ಅಧಿಕಾರವೂ ಸೇರಿದಂತೆ 13 ಮಸೂದೆಗಳು ತಮಿಳುನಾಡು ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿವೆ.

ಈ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಮೊಕದ್ದಮೆ ಹೂಡಲಾಗಿದೆ. ತಮಿಳುನಾಡು ಸರ್ಕಾರವು ಕಳುಹಿಸಿದ ಮಸೂದೆಗಳನ್ನು ಅನುಮೋದಿಸಲು ವಿಳಂಬದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.

ತಮಿಳುನಾಡು ವಿಧಾನಸಭೆ ಅಂಗೀಕರಿಸಿರುವ ವಿಧೇಯಕಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮತ್ತು ಸರ್ಕಾರಿ ಆದೇಶಗಳನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದೂ ಮನವಿ ಮಾಡಲಾಗಿದೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು, ಆಡಳಿತ ನಡೆಸುತ್ತಿದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳೆಗಿಳಿಸಿತು. ನಂತರ ಮೇ 20 ರಂದು ಸಿದ್ದರಾಮಯ್ಯನವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರೊಂದಿಗೆ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಜನ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡರು.

ಮುಂದುವರಿದು, ಮೇ 22 ರಿಂದ 24 ರವರೆಗೆ 3 ದಿನಗಳ ಕಾಲ ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯಿತು. ಇದರಲ್ಲಿ ನೂತನ ಶಾಸಕರುಗಳು ಪ್ರಮಾಣವಚನ ಸ್ವೀಕರಿಸಿಕೊಂಡರು. ಮೇ 24 ರಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದರು.

ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಅವರ ನಿವಾಸದಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ಒಟ್ಟು ಶಾಸಕರ ಪೈಕಿ ಶೇ.15ರಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಬಹುದು ಎಂಬುದು ನಿಯಮ. ಅದರಂತೆ ಕರ್ನಾಟಕದಲ್ಲಿ 224 ಶಾಸಕರಿರುವುದರಿಂದ 34 ಮಂದಿ ಸಚಿವರಾಗಬಹುದು. ಈ ಪೈಕಿ 10 ಹುದ್ದೆಗಳು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, 24 ಹುದ್ದೆಗಳು ಖಾಲಿ ಉಳಿದಿವೆ.

ಈ ಹಿನ್ನಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ 24 ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ನಿನ್ನೆ ರಾತ್ರಿ ಬಿಡುಗಡೆ ಮಾಡಿದರು. ಇದರ ಬೆನ್ನಲ್ಲೇ ಇಂದು ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ನೂತನ ಸಚಿವರಾಗಿ ದಿನೇಶ್ ಗುಂಡೂರಾವ್ (ಗಾಂಧಿನಗರ), ಈಶ್ವರ್ ಖಂಡ್ರೆ (ಭಾಲ್ಕಿ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಶಿವಾನಂದ ಪಾಟೀಲ್ (ಬಸವನ ಬಾಗೇವಾಡಿ), ಶರಣಬಸಪ್ಪ ದರ್ಶನಾಪುರ (ಶಹಾಪುರ), ಎಚ್.ಸಿ.ಮಹದೇವಪ್ಪ (ಟಿ.ನರಸೀಪುರ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಎಸ್.ಎಸ್.ಮಲ್ಲಿಕಾರ್ಜುನ್ (ದಾವಣಗೆರೆ), ಭೈರತಿ ಸುರೇಶ್ (ಹೆಬ್ಬಾಳ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ),

ರಹೀಂ ಖಾನ್ (ಬೀದರ್ ಉತ್ತರ), ಡಾ.ಎಂ.ಸಿ.ಸುಧಾಕರ್ (ಚಿಂತಾಮಣಿ), ಡಿ.ಸುಧಾಕರ್ (ಹಿರಿಯೂರು), ಎಚ್.ಕೆ.ಪಾಟೀಲ್ (ಗದಗ), ಚೆಲುವರಾಯಸ್ವಾಮಿ (ನಾಗಮಂಗಲ), ಕೆ.ಎನ್.ರಾಜಣ್ಣ (ಮಧುಗಿರಿ), ಸಂತೋಷ್ ಲಾಡ್ (ಕಲಘಟಗಿ), ಮಧು ಬಂಗಾರಪ್ಪ (ಸೊರಬ), ಮಂಕಾಳ ವೈದ್ಯ (ಭಟ್ಕಳ), ಶಿವರಾಜ್ ತಂಗಡಕಿ (ಕನಕಗಿರಿ), ಆರ್.ಬಿ.ತಿಮ್ಮಾಪುರ (ಮುಧೋಳ), ಡಾ.ಶರಣಪ್ರಕಾಶ್ ಪಾಟೀಲ (ಸೇಡಂ), ಎನ್.ಎಸ್.ಬೋಸರಾಜು (ಮಾನ್ವಿ), ಬಿ.ನಾಗೇಂದ್ರ (ಬಳ್ಳಾರಿ ಉಪನಗರ) ಸ್ಥಾನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಇಂದು ಸಂಜೆ ವೇಳೆಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 2 ಪ್ರಮುಖ ಖಾತೆಗಳು ಸಿಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸರ್ಕಾರದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ. ಕಾರಣ ಕೊಟ್ಟಿರುವ ವಾಗ್ದಾನಗಳು ಆ ರೀತಿಯಾಗಿದೆ. ಚುನಾವಣೆ ಮುಗಿದು 17 ದಿನಗಳು ಕಳೆದೋಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವಾರಗಳು ಆಗಿವೆ. ವಿರೋಧಪಕ್ಷಗಳು “ಕರೆಂಟ್ ಬಿಲ್ ಕಟ್ಟಬೇಡಿ; ಬಸ್ ಟಿಕೆಟ್ ತೆಗೆಯಬೇಡಿ” ಎಂದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಬಹುಮತ ಸರ್ಕಾರ ಹಾಗೂ ಪೂರ್ಣವಾದ ಮಂತ್ರಿಮಂಡಲ ಇನ್ನು ಕಾಲವಿಳಂಬ ಮಾಡದೆ, ಬೇಗನೆ ಟೇಕಪ್ ಆದರೆ, ಅದು ಸರಕಾರಕ್ಕೆ ಒಳ್ಳೆಯದು; ಜನರಿಗೂ ಒಳ್ಳೆಯದು!