ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Rupayi Chitra Archives » Dynamic Leader
November 22, 2024
Home Posts tagged Rupayi Chitra
ಸಿನಿಮಾ

ಅರುಣ್ ಜಿ.,

ದುಡ್ಡೊಂದಿದ್ರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿಯ ಹುಡುಗರು. ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜ. ಹಾಗಂತ ಅದನ್ನು ಹೇಗೆ ಬೇಕಾದರೂ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ದುಡ್ಡಿನ ಕುರಿತು ನಾನಾ ಮಜಲುಗಳನ್ನು ತೆರೆದು ತೋರಿಸುವ ಸಿನಿಮಾ ʻರೂಪಾಯಿʼ.

ಎಲ್ಲೆಲ್ಲಿಂದಲೋ ಬಂದು ಒಂದು ಕಡೆ ಸೇರಿದವರ ಮನಸ್ಥಿತಿ, ಪರಿಸ್ಥಿತಿಗಳು ಬೇರೆಯದ್ದೇ ಆಗಿರುತ್ತದೆ. ಆದರೆ ಎಲ್ಲರ ಅಗತ್ಯ ಮಾತ್ರ ದುಡ್ಡು. ಇವರೊಂದಿಗೆ ದೊಡ್ಡ ಮಟ್ಟದ ಹಣ ಕೂಡಾ ಜರ್ನಿ ಮಾಡುತ್ತಿರುತ್ತದೆ. ಆದರೆ ಅದು ಇವರಿಗೆ ಗೊತ್ತೇ ಇರೋದಿಲ್ಲ. ಆ ಹಣವನ್ನು ಇನ್ಯಾರೋ ಬೆನ್ನಟ್ಟಿರುತ್ತಾರೆ. ಮನುಷ್ಯ ಹಣದ ಹಿಂದೆ ಓಡೋದನ್ನು ಇಲ್ಲಿ ರೂಪಕಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಬದುಕಿನ ಅನಿವಾರ್ಯಗಳಿಗಾಗಿ ದೇಹವನ್ನೇ ಬಂಡವಾಳ ಮಾಡಿಕೊಂಡ ಹೆಣ್ಣುಮಕ್ಕಳ ಕತೆ ಕೇಳಿರ್ತೀವಿ. ನೀವಿಲ್ಲಿ ಗಂಡು ವೇಶ್ಯೆಯನ್ನೂ ನೋಡಬಹುದು. ಒಟ್ಟಾರೆ ಜೀವನದ ವಾಸ್ತವಗಳನ್ನು ಅಷ್ಟೇ ತಮಾಷೆ ರೀತಿಯಲ್ಲಿ ಅನಾವರಣಗೊಳಿಸಿರುವ ಸಿನಿಮಾ ರೂಪಾಯಿ!

ವಿಜಯ್ ಜಗದಾಲ್ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ರೂಪಾಯಿ’. ಆದರೆ ಇದು ಇವರ ಮೊದಲ ಸಿನಿಮಾ ಅಂತಾ ಅನ್ನಿಸೋದೇ ಇಲ್ಲ.  

‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ತರಿಸುತ್ತದೆ. ಸಡನ್ನಾಗಿ ಹಣ ಸಿಕ್ಕಿಬಿಟ್ಟರೆ ಸಂಬಂಧಗಳು ಹೇಗೆ ಹದಗೆಡುತ್ತವೆ ಎನ್ನುವ ವಿಚಾರದೊಂದಿಗೆ ಕ್ರಿಕೆಟ್ ಹಗರಣದ ಎಳೆಯೂ ಇಲ್ಲಿ ಬಂದು ಹೋಗುತ್ತದೆ. 

ವಿಜಯ್ ಜಗದಾಲ್ ಜೊತೆಗೆ ಕೃಷಿ ತಾಪಂಡ, ಯಶ್ವಿಕ್, ‘ಮೈತ್ರಿ’ ಜಗದೀಶ್, ಶಂಕರ್ ಮೂರ್ತಿ, ರಾಮ್ ಚಂದನ್, ಚಂದನಾ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಾಕ್ಲೈನ್ ಸುಧಾಕರ್, ಮೋಹನ್ ಜನೇಜ ಮುಂತಾದವರು ಪಾತ್ರಕ್ಕೆ ಹೇಗೆ ಬೇಕೋ ಹಾಗೆ ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಅವರ ಸಂಗೀತ, ಆರ್.ಡಿ.ನಾಗಾರ್ಜುನ್ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನ ಕೂಡಾ ಅಚ್ಚುಕಟ್ಟಾಗಿದೆ.

ಸಿನಿಮಾ ರೇಟಿಂಗ್: 3.5/5