ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
SC ST Archives » Dynamic Leader
November 21, 2024
Home Posts tagged SC ST
ದೇಶ

ನವದೆಹಲಿ: ಜೈಲುಗಳಲ್ಲಿ ಜಾತಿ ತಾರತಮ್ಯ ತೋರಿದರೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಪರಾಧಿಗಳನ್ನು ಅವರ ಜಾತಿ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಿಸುವುದು, ಜೈಲುಗಳಲ್ಲಿ ಕೆಟ್ಟದಾದ ಕೆಲಸಗಳನ್ನು ಮಾಡುವಂತೆ ಹೇಳುವುದು, ತಾರತಮ್ಯದಿಂದ ನಡೆಸಿಕೊಳ್ಳುವುದು ಮುಂತಾದವುಗಳೆಲ್ಲ ವಿವಿಧ ರಾಜ್ಯಗಳ ಜೈಲು ನಿಯಮಾವಳಿಗಳಲ್ಲಿಯೇ ಜಾರಿಯಲ್ಲಿರುವುದು ಕಂಡುಬಂದಿದೆ.

ತರುವಾಯ, 11 ರಾಜ್ಯಗಳ ಕಾರಾಗೃಹಗಳಲ್ಲಿನ ಜಾತಿ ಆಧಾರಿತ ಅನುಸಂಧಾನ ನಿಯಮಾವಳಿಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅದರಲ್ಲಿ, “ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಜಾತಿಯ ಆಧಾರದ ಮೇಲೆ ವರ್ಗೀಕರಿಸಬಾರದು. ಜಾತಿವಾರು ವರ್ಗೀಕೃತ ದಾಖಲೆಗಳು ಕಾನೂನು ಬಾಹಿರವಾದದ್ದು; ಅವುಗಳನ್ನು ನಾಶಗೊಳಿಸಬೇಕು.

ಕೆಲವು ರಾಜ್ಯಗಳು ಜಾರಿಗೊಳಿಸಿರುವ ಜೈಲು ನಿಯಮಾವಳಿಗಳು ಅಸಂವಿಧಾನಿಕ. ಪ್ರಸ್ತುತ ತೀರ್ಪಿನ ಪ್ರಕಾರ, ಜೈಲು ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ.

ಶಿಕ್ಷೆಯ ಕಡಿತ, ಜೈಲುಗಳನ್ನು ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಮುಂತಾದ ಕೆಲಸಗಳಲ್ಲಿ ಜಾತಿ ಭೇದ ಇರಬಾರದು. ಎಸ್‌ಸಿ, ಎಸ್‌ಟಿ ಸೇರಿದಂತೆ ಹಿಂದುಳಿದವರಿಗೆ ಜೈಲುಗಳಲ್ಲಿ ತಾರತಮ್ಯ ಮಾಡಬಾರದು. ಜೈಲುಗಳಲ್ಲಿ ಇಂತಹ ಜಾತಿ ತಾರತಮ್ಯ ತೋರಿದರೆ ಅದಕ್ಕೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು” ಎಂದು ಹೇಳಿದೆ.

ದೇಶ

ಡಿ.ಸಿ.ಪ್ರಕಾಶ್

ನವದೆಹಲಿ: “ಪರಿಶಿಷ್ಟ ಜಾತಿಗಳಿಗೆ ಆಂತರಿಕ ಕೋಟಾ ನೀಡಲು ಯಾವುದೇ ಅಡ್ಡಿ ಇಲ್ಲ,” ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಇಂದು ಐತಿಹಾಸಿಕವಾದ ತೀರ್ಪು ನೀಡಿದೆ.

ಪಂಜಾಬ್ ಸರ್ಕಾರವು ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕಾಯ್ದೆಯನ್ನು ಜಾರಿಗೆ ತಂದಿತು. ಪಂಜಾಬ್ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಲ್ಲಿ ವಾಲ್ಮೀಕಿ ಮತ್ತು ಮಜಾಬಿ ಸಿಖ್ ಸಮುದಾಯಗಳಿಗೆ 50% ಆಂತರಿಕ ಮೀಸಲಾತಿಯನ್ನು ಒದಗಿಸುವ ಕಾರ್ಯವಿಧಾನವನ್ನು ಪರಿಚಯಿಸಿತು.

ಅದೇ ರೀತಿ 2009ರಲ್ಲಿ ತಮಿಳುನಾಡು ಸರ್ಕಾರವು ಅರುಂಧತಿಯವರಿಗೆ ಮೀಸಲಾತಿ ನೀಡುವ ಕಾನೂನನ್ನು ಜಾರಿಗೆ ತಂದಿತು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿದಂತೆ ಆರು ನ್ಯಾಯಾಧೀಶರು ಪಂಜಾಬ್ ಸರ್ಕಾರದ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ನೀಡಿದರು. ಅದೇ ಸಮಯದಲ್ಲಿ, ಒಬ್ಬ ನ್ಯಾಯಾಧೀಶರು ಮಾತ್ರ ವಿಭಿನ್ನವಾಗಿ ತೀರ್ಪು ನೀಡಿದ್ದಾರೆ.

ಅದರಂತೆ 6 ನ್ಯಾಯಾಧೀಶರು ನೀಡಿರುವ ತೀರ್ಪಿನಲ್ಲಿ, “ಪರಿಶಿಷ್ಟ ಜಾತಿಯವರಿಗೆ ಆಂತರಿಕ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದವರಿಗೆ ಒಳ ಮೀಸಲಾತಿ ಒದಗಿಸಲು ಪಂಜಾಬ್ ಸರ್ಕಾರ ತಂದಿರುವ ಕಾನೂನಿಗೆ ತಡೆಯಿಲ್ಲ.

ಒಳ ಮೀಸಲಾತಿಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. ಪರಿಶಿಷ್ಟ ವರ್ಗದ ವ್ಯಾಖ್ಯಾನದಿಂದ ಯಾವುದೇ ಪರಿಶಿಷ್ಟ ಉಪವಿಭಾಗಗಳನ್ನು ಹೊರಗಿಡದ ಕಾರಣ ಒಳ ಮೀಸಲಾತಿಯನ್ನು ಒದಗಿಸಬಹುದು. ಆದಾಗ್ಯೂ, ರಾಜ್ಯಗಳು ತಮ್ಮ ಸ್ವಂತ ಇಚ್ಛೆಯಿಂದ ಅಥವಾ ರಾಜಕೀಯ ಅಗತ್ಯದಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ರಾಜ್ಯಗಳ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ.

ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳ ಮೀಸಲಾತಿಯನ್ನು ಒದಗಿಸಬಹುದು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳು ಸರಿಯಿದೆ” ಎಂದು ಅವರು ಸರ್ವಾನುಮತದಿಂದ ತೀರ್ಪು ನೀಡಿದ್ದಾರೆ.

ಇದೇ ವೇಳೆ, ಆಂಧ್ರದ ಇ.ವಿ.ಚಿನ್ನಯ್ಯ ಎಂಬುವರು, “ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡಬಾರದು. ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ, “ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು 2005ರಲ್ಲಿ ತೀರ್ಪು ನೀಡಿತ್ತು.

ಈ ಹಿನ್ನೆಲೆಯಲ್ಲಿ, ಇಂದಿನ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠವು ಸುಪ್ರೀಂ ಕೋರ್ಟ್ 2005ರ ತೀರ್ಪನ್ನು ರದ್ದುಗೊಳಿಸಿದೆ. ಸದರಿ ಪ್ರಕರಣದಲ್ಲಿ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಮಾತ್ರ ಭಿನ್ನವಾದ ತೀರ್ಪು ನೀಡಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಫೆಬ್ರವರಿ 8, 2024 ರಂದು ಈ ಕುರಿತು ತಮ್ಮ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಿ, ವಿಕ್ರಮ್ ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೂ ಒಳಗೊಂಡಿದೆ.

“ಐತಿಹಾಸಿಕ ಮತ್ತು ಪ್ರಾಯೋಗಿಕ ಪುರಾವೆಗಳು ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಲ್ಲ ಎಂದು ಸೂಚಿಸುತ್ತವೆ” ಎಂದು ತೀರ್ಪನ್ನು ಓದುವಾಗ ಸಿಜೆಐ ಹೇಳಿದರು.

ರಾಜ್ಯ

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಕುರಿತಾದ ನಿಯಮ‌ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.  

“ವಾಲ್ಮಿಕಿ ನಿಗಮದ ಪ್ರಕರಣದಲ್ಲಿ ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ವಿಶೇಷ ತನಿಖಾ ತಂಡವನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್.ಐ.ಟಿ ಬಗ್ಗೆ ಹೀಗೆ ಹೇಳಿದ್ದೀರಾ? ಎಂಬುದನ್ನು ಅವರಲ್ಲಿ ಕೇಳಬಯಸುತ್ತೇನೆ” ಎಂದು ಹೇಳಿದರು.

“ಮೇ 26 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಎಂದು ಮಾತನಾಡಿದ್ದಾರೆ” ಎಂದರು.

“ಸಂವಿಧಾನದಲ್ಲಿ ಪರಿಶಿಷ್ಟ ಜಾತಿ/ವರ್ಗ ಎನ್ನುವ ಉಲ್ಲೇಖ ಇದೆ. ಇಬ್ಬರೂ ಸೇರಿ 24.1% ಜನಸಂಖ್ಯೆ ಇದ್ದಾರೆ. ಇವರ ಅಭಿವೃದ್ಧಿ ಆದರೆ ಮಾತ್ರ ಸಮ ಸಮಾಜದ ಆಶಯ ಈಡೇರುತ್ತದೆ. ಈ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆ ಇರುವವರೆಗೂ ಸಮಾನತೆ ಸಾಧ್ಯವಿಲ್ಲ. ಸಂವಿಧಾನ ಬಂದು 70 ವರ್ಷ ಆದರೂ ಸಮಾನತೆ ಸಿಕ್ಕಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ವಾಲ್ಮಿಕಿ, ಬೋವಿ, ಆದಿಜಾಂಭವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ಅಭಿವೃದ್ಧಿ ನಿಗಮಗಳನ್ನು ಆರಂಭಿಸಲಾಗಿದೆ. ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ” ಎಂದು ಹೇಳಿದರು.

“2013ರ ಡಿಸೆಂಬರ್ ನಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ಜಾರಿಗೆ ಕೊಟ್ಟಿದ್ದು ನಮ್ಮ‌ ಸರ್ಕಾರ. ಬಜೆಟ್‌ನ 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ವಿಪಕ್ಷಗಳು ಬರೀ ಮೊಸಳೆ ಕಣ್ಣೀರು ಹರಿಸುತ್ತಿವೆ” ಎಂದು ಹೇಳಿದರು.

“1949ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಜನವರಿ 26-1950ಕ್ಕೆ ಸಂವಿಧಾನ ಜಾರಿಗೆ ಬರುತ್ತಿದೆ. ನಾವೆಲ್ಲರೂ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ’ ಎಂದು ಚರಿತ್ರಾರ್ಹವಾದ ಭಾಷಣದಲ್ಲಿ ಹೇಳಿದ್ದರು. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ. ಇಲ್ಲಿ ಇನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಸಮಾನತೆ ಉಳಿದುಕೊಂಡಿರುವುದರಿಂದ ಅದನ್ನು ನಿವಾರಣೆ ಮಾಡದಿದ್ದರೆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆಂಬ ಎಚ್ಚರಿಕೆ ಕೊಟ್ಟಿದ್ದರು” ಎಂದು ಹೇಳಿದರು.

“ಇಡೀ ದೇಶದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ತಂದವರು ನಾವು. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಈ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ? ಇಡೀ ದೇಶದಲ್ಲಿ ನಾವು ಮಾತ್ರ ಇಂಥಾ ಪರಿಣಾಮಕಾರಿ ಕಾಯ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗಾಗಿ ಜಾರಿ ಮಾಡಿದ್ದೇವೆ.

ಗುತ್ತಿಗೆಯಲ್ಲೂ ಎಸ್.ಸಿ / ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿರುವುದು ನಾವು ಮಾತ್ರ. ಇಂಥದ್ದನ್ನು ಬಿಜೆಪಿಯವರು ಇದುವರೆಗೂ ಏಕೆ ಜಾರಿ ಮಾಡಿಲ್ಲ?” ಎಂದು ಪ್ರಶ್ನಿಸಿದರು.

“ಎಸ್.ಸಿ / ಎಸ್.ಟಿ ಉದ್ದಿಮೆಗಳಿಗೆ / ಉದ್ಯಮಗಳಿಗೆ ವಿಶೇಷ ಸಾಲದ ಸವಲತ್ತು , KIADB ಭೂಮಿ ವಿಚಾರದಲ್ಲಿ ಈ ಸಮುದಾಯಗಳಿಗೆ ಅನುಕೂಲ ಮಾಡಿ ಕಾನೂನು ತಂದವರು ನಾವು. ನಾವು ಎಸ್.ಸಿ / ಎಸ್.ಟಿ ಸಮುದಾಯದವರ ವಿರೋಧಿಯಾಗಿದ್ದರೆ ಇಷ್ಟೆಲ್ಲವನ್ನೂ ಜಾರಿ ಮಾಡುತ್ತಿದ್ದೆವಾ?

ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧರು. ವಿಪಕ್ಷಗಳಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಕಿಡಿಕಾರಿದರು.

ಬೆಂಗಳೂರು ರಾಜಕೀಯ ರಾಜ್ಯ

ಮಂಜುಳಾ ರೆಡ್ಡಿ, ವರದಿಗಾರರು

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಹಿಂದುಳಿದ ಅಲೆಮಾರಿ ಬುಡುಕಟ್ಟುಗಳಿಗೂ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ / ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ.

ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಿವಾನಂದ ಲಕ್ಷ್ಮಣ ಪಾಚಂಗಿ ಹಾಗೂ ಟಿ.ವಿ.ಗೋಪಲಕೃಷ್ಣ ‘ಅಲೆಮಾರಿ / ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯದವರು ಒಟ್ಟು 46 ಜಾತಿಗಳಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದವರಾಗಿರುತ್ತಾರೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಮ್ಮ 46 ಜಾತಿಗಳು ಬರುತ್ತಿದ್ದವು. ತದನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ  ವರ್ಗಾಯಿಸಲಾಯಿತು. ಸರ್ಕಾರದ ಆದೇಶ ಪ್ರಕಾರ ನಾವುಗಳು ಬುಡಕಟ್ಟು ಜನಾಂಗದವರಾಗಿದ್ದು, ಈಗ ಬುಡಕಟ್ಟು ಇಲಾಖೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನಮ್ಮ 46 ಜಾತಿಗಳನ್ನು ಸರ್ಕಾರ ಬುಡಕಟ್ಟು ಕಲ್ಯಾಣ ಇಲಾಖೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು. ನಮ್ಮ 46 ಜಾತಿಗಳು ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿರುವ ಕಾರಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕೆಂದು ಒತ್ತಾಯಿಸಿದರು.

ಶಿವಾನಂದ ಲಕ್ಷ್ಮಣ ಪಾಚಂಗಿ ಮಾತನಾಡುತ್ತಾ ‘ಹಿಂದುಳಿದ ಅಲೆಮಾರಿ ಬುಡಕಟ್ಟುಗಳ ನಿಗಮಗಳಿಗೆ ಅಧ್ಯಕ್ಷರನ್ನಾಗಿ ಅಲೆಮಾರಿ ಬುಡಕಟ್ಟು ಸಮುದಾಯದವರನ್ನು ನೇಮಕ ಮಾಡುತ್ತಿಲ್ಲ. ಸರ್ಕಾರ ಮುಂದಿನ ದಿನಗಳಲ್ಲಿ ಈ ರೀತಿಯ ಅನ್ಯಾಯಗಳಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ಬೇಸರ ವ್ಯಕ್ತಪಡಿಸಿದರು. ಅಲೆಮಾರಿ ನಿಗಮಕ್ಕೆ ಕೇವಲ ಆರು ಕೋಟಿ ಮಾತ್ರ ಬಿಡುಗಡೆಗೊಳಿಸಿದ್ದು, ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಇದರಿಂದ ಬಹಳ ತೊಂದರೆಯಾಗಿದೆ.

ಈ ಹಿಂದೆ ನೂರು ಕೋಟಿಗಳಷ್ಟು ಅನುದಾನ ಪಡೆಯುತ್ತಿದ್ದಾಗಲೂ ಹಿಂದುಳಿದ ಅಲೆಮಾರಿ ಬುಡಕಟ್ಟುಗಳಿಗೆ ಸರಿಯಾದಸೌಲಭ್ಯಗಳು ದೊರೆಯುತ್ತಿರಲಿಲ್ಲ. ಈ ಅನುದಾನವನ್ನು ಇನ್ನೂ ಹೆಚ್ಚು ಮಾಡದೆ, ಅನುದಾನವನ್ನು ಕಡಿತಗೊಳಿಸಿರುವುದು ಎಷ್ಟು ಸರಿ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದ 46 ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಕೂಡಲೇ ಸರ್ಕಾರ ಸರಿಪಡಿಸಬೇಕೆಂದು ಒತ್ತಾಯ ಮಾಡಿದರು.

ಪತ್ರಿಕಾ ಘೋಷ್ಠಿಯಲ್ಲಿ ಟಿ.ವಿ.ಗೋಪಾಲಕೃಷ್ಣ, ಪಾಚಂಗಿ, ಆರ್.ರಂಗಪ್ಪ, ಶ್ರೀರಾಮಕೃಷ್ಣ, ಪ್ರಕಾಶ್ ಬೈಲಪತ್ತರ್, ಸುನಿಲ್ ಕಾಂತ ಹೇಳವರ್, ಚಿದಾನಂದಪ್ಪ, ಜಯಲಕ್ಷ್ಮಿ, ಗಿರಿಯಪ್ಪ ಜಿ.ಗೊಲ್ಲರ್ ಮುಂತಾದವರು ಉಪಸ್ಥಿತಿಯಿದ್ದರು