ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 6 ದಿನಗಳ ಎಸ್.ಐ.ಟಿ ಕಸ್ಟಡಿಗೆ ನ್ಯಾಯಾಲಯ ಆದೇಶಿಸಿದೆ. ಜಾತ್ಯತೀತ ಜನತಾದಳದ ರಾಷ್ಟ್ರೀಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನದ ಸಂಸದರಾಗಿದ್ದಾರೆ. ಮತ್ತೆ ಅದೇ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಕೆಲವು ಮಹಿಳೆಯರನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾರೆ. ಸಾಕಷ್ಟು ಅಶ್ಲೀಲ ವಿಡಿಯೋಗಳನ್ನು ಹೊಂದಿದ್ದಾರೆ ಎಂದು ಕಳೆದ ತಿಂಗಳು ಹಲವು ಫೋಟೋ ಮತ್ತು ವಿಡಿಯೋಗಳು ಪೆನ್ ಡ್ರೈವ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದವು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಕಳೆದು ಏಪ್ರಿಲ್ 26 ರಂದು ಹಾಸನದಲ್ಲಿ ಮೊದಲ ಹಂತದ ಚುನಾವಣೆ ನಡೆದ ನಂತರ ಪ್ರಜ್ವಲ್ ಜರ್ಮನಿಗೆ ಪಲಾಯನ ಮಾಡಿದರು.
ಸಂತ್ರಸ್ತ ಮಹಿಳೆಯರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾದವು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡವಾದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ನಿನ್ನೆ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವಿಶೇಷ ತನಿಖಾ ತಂಡ, 14 ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ನಡೆಸಲು ಅನುಮತಿ ಕೋರಿತ್ತು. ನ್ಯಾಯಾಧೀಶರು 6 ದಿನ ಮಾತ್ರ ರಿಮಾಂಡ್‌ಗೆ ಅನುಮತಿ ನೀಡಿದ್ದು, ಜೂನ್ 6 ರಂದು ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು.