ಬೆಂಗಳೂರು: “ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ಪ್ರಕರಣಗಳಿಗೆ ಕೊನೆ ಎಂದು? ದೇಶ ಸ್ವತಂತ್ರವಾಗಿ 76 ವರ್ಷಗಳಾದರೂ ಇನ್ನೂ ಮಹಿಳೆಯರಿಗೆ ತನ್ನ ಮಾನ, ಪ್ರಾಣ ಹಾಗೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಒದಗಿಸುವುದರಲ್ಲಿ ಸರಕಾರಗಳು ಸಂಪೂರ್ಣ ರೀತಿಯಲ್ಲಿ ವಿಫಲವಾಗಿವೆ. ರಾಜ್ಯ ಸರಕಾರ ಮಹಿಳೆಯ ಸುರಕ್ಷತೆಯ ಗ್ಯಾರೆಂಟಿ ಕೊಡುವುದು ಯಾವಾಗ”? ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಸಬೀಹಾ ಪಟೇಲ್ ಪ್ರಶ್ನಿಸಿದ್ದಾರೆ.
“ಧರ್ಮಸ್ಥಳದಲ್ಲಿ ಕಳೆದ ಎರಡು ದಶಕಗಳಿಂದ ನಿರಂತರ ನಡೆಯುತ್ತಿರುವ ಮಹಿಳೆಯರ ಅತ್ಯಾಚಾರ, ಕೊಲೆ, ದೌರ್ಜನ್ಯ, ಸ್ವಾಭಾವಿಕ ಮರಣಗಳು, ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ನಾಪತ್ತೆಯಾಗಿರುವ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಸರ್ಕಾರ ಇದಕ್ಕೆ ತೀವ್ರವಾದ ತನಿಖೆ ನಡೆಸುವುದರಲ್ಲಿ ವಿಫಲವಾಗಿದೆ” ಎಂದು ಹೇಳಿದ್ದಾರೆ.
“ಜುಲೈ 3 ರಂದು ವ್ಯಕ್ತಿಯೊಬ್ಬನು ಸಾಕ್ಷ್ಯ ಸಮೇತ ದೂರು ಸಲ್ಲಿಸಿದ್ದರೂ ಸರ್ಕಾರ ಎಚ್ಚೆತ್ತು ಕೊಳ್ಳಲಿಲ್ಲ. ಹಲವಾರು ಶವಗಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಲವಾರು ಹೋರಾಟಗಾರರು, ರಾಜಕೀಯ ಪಕ್ಷಗಳು ಒತ್ತಡವನ್ನು ಹಾಕಿದ ಮೇಲೆ ಸರ್ಕಾರ ಇದೀಗ ಎಸ್ಐಟಿಯನ್ನು ರಚನೆ ಮಾಡಿದೆ” ಎಂದಿದ್ದಾರೆ.
“ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ರಚಿಸಿರುವ ರಾಜ್ಯ ಸರ್ಕಾರ ಪಾರದರ್ಶಕತೆಯಿಂದ ಹಾಗೂ ಅತ್ಯಂತ ತೀವ್ರವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಧರ್ಮಸ್ಥಳದ ಭಾಗದಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮುಂದೆ ಇಂತಹ ಯಾವುದೇ ಅತ್ಯಾಚಾರ ಕೊಲೆ ಪ್ರಕರಣಗಳು ವರದಿಯಾಗದಂತೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು” ಕರ್ನಾಟಕ ಸರ್ಕಾರವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಹಿಳಾ ಅಧ್ಯಕ್ಷೆ ಸಾಬಿಹಾ ಪಟೇಲ್ ಅಗ್ರಹಿಸಿದ್ದಾರೆ.