ಡಿ.ಸಿ.ಪ್ರಕಾಶ್ ಸಂಪಾದಕರು
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಅದಾನಿ ಸಮೂಹವು ತನ್ನ ಸಾಲವನ್ನು ಇನ್ನೂ ಪೂರ್ಣವಾಗಿ ಇತ್ಯರ್ಥಪಡಿಸಿಲ್ಲ ಎಂಬ ವರದಿಗಳ ಕುರಿತು ಅದಾನಿಯಿಂದ ವಿವರಣೆ ಕೇಳಿದೆ.
ಅದಾನಿ ಗ್ರೂಪ್ ಕಂಪನಿಗಳು ಲೆಕ್ಕಪತ್ರ ವಂಚನೆ, ತೆರಿಗೆ ವಂಚನೆ ಮತ್ತು ಅಕ್ರಮ ಹಣ ರವಾನೆಯಲ್ಲಿ ತೊಡಗಿವೆ ಎಂದು ಹೆಸರಾಂತ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಎಲ್‌ಎಲ್‌ಸಿ ಆರೋಪಿಸಿತ್ತು. ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗುವ ಮೂಲಕ ತನ್ನ ಕಂಪನಿಯ ಷೇರು ಬೆಲೆಯನ್ನು ಹೆಚ್ಚಿಸಿಕೊಂಡಿದೆ ಎಂದು ತನ್ನ ವರದಿಯಲ್ಲಿ ಆರೋಪಿಸಿತ್ತು.
ಈ ವರದಿಯ ನಂತರ, ಅದಾನಿ ಕಂಪನಿಗಳ ಷೇರು ಮೌಲ್ಯಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದರಿಂದಾಗಿ ಅದಾನಿ ಕಂಪನಿಯ ಮೌಲ್ಯವು ಹಲವು ಕೋಟಿ ರೂಪಾಯಿಗಳ ಕುಸಿತವನ್ನು ಕಂಡಿತು. ಇದರಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ 28ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಆಸ್ತಿ ಮೌಲ್ಯ ಲಕ್ಷ ಕೋಟಿಗಳಷ್ಟು ಕುಸಿದಿದೆ ಎಂದು ವರದಿಯಾಗಿದೆ.
ಅದಾನಿ ಷೇರುಗಳ ಈ ಕುಸಿತದಿಂದ ಅದಾನಿಯಲ್ಲಿ ಹೂಡಿಕೆ ಮಾಡಿದ್ದ LIC ಸೇರಿದಂತೆ ಸಾರ್ವಜನಿಕ ವಲಯದ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿವೆ. ಎಲ್ಐಸಿ ಸಂಸ್ಥೆಯು ಅದಾನಿಯ ಕಂಪನಿಗಳಲ್ಲಿ ರೂ.30,127 ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿತ್ತು. ಜನವರಿ 24 ರಂದು ಇದರ ಮೌಲ್ಯ 72,193.87 ಕೋಟಿ ರೂಪಾಯಿಯಾಗಿತ್ತು. ಆದರೆ ಈಗ ಅದಾನಿ ಕಂಪನಿಗಳ ಷೇರು ಮೌಲ್ಯವು ಕಡಿಮೆಯಾಗುತ್ತಿರುವುದರಿಂದ ಈಗ ಅದರ ಮೌಲ್ಯವು ರೂ.26,861.88 ಕೋಟಿಗೆ ಕುಸಿದಿದೆ ಎಂದು ವರದಿಯಾಗಿದೆ.
ಆ ನಂತರ ಭಾರತದಲ್ಲಿ ಉದ್ಯೋಗಿಗಳ PF ಹಣದ ಮೌಲ್ಯವೂ ಅದಾನಿಯಿಂದ ಕಡಿಮೆಯಾಗಿದೆ ಎಂಬ ಅಘಾತಕಾರಿ ಸುದ್ಧಿಯೂ ಈಗ ಹೊರಬರುತ್ತಿದೆ. ಅದಾನಿ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸ್ ಮತ್ತು ಅದಾನಿ ಪೋರ್ಟ್‌ನ ಷೇರುಗಳಲ್ಲಿ EPFO ಗಣನೀಯ ಪ್ರಮಾಣದ PF ಹಣವನ್ನು ಹೂಡಿಕೆ ಮಾಡಿದೆ. ಇದೀಗ ಅದಾನಿ ಕಂಪನಿಗಳಲ್ಲಿನ ನಷ್ಟದಿಂದಾಗಿ ಈ ಪಿಎಫ್ ಹಣವೂ ಮೌಲ್ಯ ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಅದಾನಿ ಕಂಪನಿಗಳಲ್ಲಿ ಹೂಡಿರುವ ಪಿಎಫ್ ಹಣವನ್ನು ವಾಪಸ್ ನೀಡುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.
ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಮುಂಬೈ ಷೇರುಪೇಟೆ (BSE) ಅದಾನಿ ಸಮೂಹವು ತನ್ನ ಸಾಲವನ್ನು ಸಂಪೂರ್ಣವಾಗಿ ಇತ್ಯರ್ಥಗೊಳಿಸಿಲ್ಲ ಎಂಬ ಮಾಹಿತಿಗೆ ಸಂಬಂಧಿಸಿದಂತೆ ಅದಾನಿಯಿಂದ ವಿವರಣೆ ಕೇಳಿದೆ. ಅದಾನಿ ಷೇರುಗಳು ಕುಸಿದಿರುವ ಹಿನ್ನಲೆಯಲ್ಲಿಯೇ ಕಂಪನಿಯು ಅವರ ಸಾಲವನ್ನು ತೀರಿಸಲು ಮುಂದಾಯಿತು.
ಆ ನಂತರ ಅದಾನಿ ಕಂಪನಿ ಸಾಲ ಮರುಪಾವತಿಯಾಗಿದೆ ಎಂದು ಹೇಳಿಕೊಂಡಿದ್ದರೂ ಅದಾನಿ ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಿಲ್ಲ ಎಂದು ‘ದಿ ಕೆನ್’ (The Ken) ಕಂಪನಿ ತಿಳಿಸಿದೆ. ಅದಾನಿ ಗ್ರೂಪ್ ಇದುವರೆಗೆ ತನ್ನ ಅರ್ಧದಷ್ಟು ಸಾಲವನ್ನು ಮಾತ್ರ ಮರುಪಾವತಿ ಮಾಡಿದೆ. ಆದ್ದರಿಂದಲೇ ಆ ಕಂಪನಿಯ ಷೇರುಗಳನ್ನು ಇನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ ಎಂದು ‘ದಿ ಕೆನ್’ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲೇ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಮುಂಬೈ ಷೇರುಪೇಟೆ (BSE) ಅದಾನಿ ಅವರಿಂದ ವಿವರಣೆ ಕೇಳಿವೆ. ಅದಾನಿ ಗ್ರೂಪ್ ತನ್ನ ಷೇರುಗಳನ್ನು ಅಡಮಾನವಿಟ್ಟು ಪಡೆದ 21.5 ಬಿಲ್ಲಿಯನ್ ಡಾಲರ್ ಸಾಲವನ್ನು ಪಾವತಿಸಿದೆ ಎಂದು ಈಗಾಗಲೇ ಹೇಳಿಕೊಂಡಿದ್ದ ಹಿನ್ನಲೆಯಲ್ಲಿ, ಈಗ ಈ ವರದಿ ಹೊರಬಂದು ಕಂಪನಿಯ ನಿಜವಾದ ಸ್ಥಿತಿಯನ್ನು ಬಹಿರಂಗಪಡಿಸಿದೆ.