ಡಿ.ಸಿ.ಪ್ರಕಾಶ್ ಸಂಪಾದಕರು
‘ದಿ ಕೇರಳ ಸ್ಟೋರಿ’ ಚಿತ್ರದ ಕಥೆಯು ಕೇರಳದ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಐಸ್‌ಐಸ್ ಸಂಘಟನೆಗೆ ಸೇರಿಸುವುದಾಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಕೇರಳ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದೆ. ಭಾರಿ ವಿವಾದವನ್ನು ಸೃಷ್ಠಿಸಿರುವ ಈ ಚಿತ್ರವು ಮೇ 5 ರಂದು ತೆರೆಗೆ ಬರಲಿದೆ. ಕೇರಳದ ಆಡಳಿತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಈ ಚಿತ್ರದ ಟೀಸರ್ ನವೆಂಬರ್ 2 ರಂದು ಬಿಡುಗಡೆಯಾಗಿದೆ. ಅದರಲ್ಲಿ ಕೇರಳದಲ್ಲಿ ಕಾಣೆಯಾಗಿರುವ 32,000 ಮಹಿಳೆಯರ ಹಿನ್ನೆಲೆಯನ್ನು ಚಿತ್ರ ಬಹಿರಂಗಪಡಿಸಲಿದೆ ಎಂದು ಹೇಳಲಾಗಿತ್ತು. ಸಾಮಾನ್ಯ ಮಹಿಳೆಯರನ್ನು ಭಯೋತ್ಪಾದಕರನ್ನಾಗಿಸುವ ಅಪಾಯಕಾರಿ ಆಟ ಕೇರಳದಲ್ಲಿ ಎಲ್ಲರ ಕಣ್ಮುಂದೆ ನಡೆಯುತ್ತಿದೆ ಎಂದೂ ಹೇಳಿದೆ.
ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಕೇರಳದ ಕಾಲೇಜು ಹಾಸ್ಟೆಲ್ ಒಂದರ ಕೊಠಡಿಯಲ್ಲಿ ನಾಲ್ವರು ಮಹಿಳೆಯರು ತಂಗಿರುತ್ತಾರೆ. ಅವರಲ್ಲಿ ಒಬ್ಬ ಮುಸ್ಲಿಂ ಮಹಿಳೆಯು ಇರುತ್ತಾಳೆ. ಆ ಮುಸ್ಲಿಂ ಮಹಿಳೆಯನ್ನು ಅನುಸರಿಸುವ ಉಳಿದ ಮಹಿಳೆಯರು ಸಹ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ನಂತರ ಐಸ್‌ಐಸ್ ಭಯೋತ್ಪಾದಕ ಸಂಘಟನೆಗೆ ಕೆಲಸ ಮಾಡಲು ಗಡಿಪಾರು ಮಾಡುವ ದೃಶ್ಯಗಳಿವೆ.
ಅದಾ ಶರ್ಮಾ ಹಿಂದೂ ಹುಡುಗಿ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ‘ಲವ್ ಜಿಹಾದ್’ ಮೂಲಕ ಆಕೆಯನ್ನು ಪ್ರೇಮದ ಬಲೆಗೆ ಬೀಳಿಸಿ, ಮುಸ್ಲಿಂ ಹುಡುಗಿ ಫಾತಿಮಾಳಾಗಿ ಪರಿವರ್ತಿಸಲಾಗುತ್ತದೆ. ನಂತರ ಶಾಲಿನಿ ಸೇರಿದಂತೆ 48 ಜನರನ್ನು ಐಸ್‌ಐಸ್ ಗಾಗಿ ಕೆಲಸ ಮಾಡಲು ವಿದೇಶಕ್ಕೆ ಕರೆದೊಯ್ಯುವ ದೃಶ್ಯಗಳು ಬರುತ್ತವೆ.
ಮತ್ತೊಂದು ದೃಶ್ಯದಲ್ಲಿ, ಇತರ ಮಹಿಳೆಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿರುವ ಮುಸ್ಲಿಂ ರೂಪದ ಕೆಲವು ಯುವಕರು, ಮಹಿಳೆಯರನ್ನು ತಮ್ಮ ಬಳಿಗೆ ಒಪ್ಪಿಸುವಂತೆ ಹೇಳುತ್ತಾರೆ. ನಂತರ ಶಾಲಿನಿ ಉನ್ನಿಕೃಷ್ಣನ್ ಅವರನ್ನು ಮತಾಂತರಗೊಳಿಸಿ, ಮದುವೆಯಾಗಿ, ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡುವ ದೃಶ್ಯಗಳಿವೆ. ಇನ್ನು 20 ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ರಾಜ್ಯವಾಗಲಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿರುವ ಒಂದು ಸಾಲು ಟ್ರೈಲರ್ ನಲ್ಲಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಎಂಬ ನಾಲ್ಕು ಭಾಷೆಗಳಲ್ಲಿ ಮೇ 5 ರಂದು ಬಿಡುಗಡೆಯಾಗಲಿದೆ.
ಇಂತಹ ಚಿತ್ರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ. “ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್ ಜಾತ್ಯತೀತತೆಯ ನೆಲೆಗಟ್ಟಿನ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸಲು ಸಂಘಪರಿವಾರ ಹೊರಟಿದೆ. ಸಂಘಪರಿವಾರವು ನಕಲಿ ಕಥೆಗಳೊಂದಿಗೆ ಚಿತ್ರಗಳ ಮೂಲಕ ಪ್ರತ್ಯೇಕತಾವಾದಿ ರಾಜಕೀಯವನ್ನು ಹರಡಲು ಪ್ರಯತ್ನಿಸುತ್ತಿದೆ. ಅವರು ಯಾವುದೇ ಸತ್ಯ ಅಥವಾ ಪುರಾವೆಗಳಿಲ್ಲದೆ ಪುರಾಣಗಳನ್ನು ಹರಡುತ್ತಿದ್ದಾರೆ.
ಈ ಚಿತ್ರವು ಸುಳ್ಳನ್ನು ಹಬ್ಬಿಸುತ್ತಿರುವ ಸಂಘಪರಿವಾರದ ಕಾರ್ಖಾನೆಯ ಉತ್ಪನ್ನವಾಗಿದೆ. ಕೇರಳದಲ್ಲಿ ಚುನಾವಣಾ ರಾಜಕೀಯದಲ್ಲಿ ಲಾಭ ಗಳಿಸಲು ಸಂಘಪರಿವಾರವು ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ `ದಿ ಕೇರಳ ಸ್ಟೋರಿ’ ಸಿನಿಮಾ ಕೂಡ ಒಂದು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಿರುವನಂತಪುರಂ ಸಂಸದ ಶಶಿ ತರೂರ್, “ಇದು ನಿಮ್ಮ ಕೇರಳದ ಕಥೆಯಾಗಿರಬಹುದು. ಆದರೆ ಇದು ನಮ್ಮ ಕೇರಳದ ಕಥೆಯಲ್ಲ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೇರಳ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, “ಈ ಚಿತ್ರವು ಸುಳ್ಳಿನಿಂದ ಕೂಡಿದೆ. ಇದರಲ್ಲಿ ಮುಸ್ಲಿಮರನ್ನು ಬಹಳ ತಪ್ಪಾಗಿ ನಿರೂಪಿಸಲಾಗಿದೆ. ಸುಳ್ಳಿನ ಕಂತೆಯಾಗಿರುವ ಈ ಚಿತ್ರದಲ್ಲಿ ಕೇರಳದ 32,000 ಮಹಿಳೆಯರನ್ನು ಮತಾಂತರ ಮಾಡಿ ಐಸ್‌ಐಸ್ ಭಯೋತ್ಪಾದನಾ ಸಂಘಟನೆಗಳು ಇರುವ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.
ದ್ವೇಷದ ಬೀಜಗಳನ್ನು ಬಿತ್ತಿ, ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಕೇರಳದ ಕೀರ್ತಿಯನ್ನು ಕೆಡಿಸುವುದು ಅವರ ಉದ್ದೇಶವಾಗಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು” ಎಂದು ಹೇಳಿದ್ದಾರೆ.
ಇತ್ತೀಚೆಗೆ ‘ಲವ್ ಜಿಹಾದ್’ ಎಂಬ ಪದವನ್ನು ಕೇರಳದಲ್ಲೂ ಸೃಷ್ಟಿಸಲಾಗಿದೆ. ‘ಹಿಂದೂ ಯುವತಿಯರನ್ನು ಪ್ರೀತಿಸಿ, ಮತಾಂತರಕ್ಕೆ ಒತ್ತಾಯಿಸುವ ಮುಸ್ಲಿಂ ಯುವಕರು ಆ ಮಹಿಳೆಯರನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾದಂತಹ ದೇಶಗಳಿಗೆ ಕಳ್ಳಸಾಗಣೆ ಮಾಡಿ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ’ ಎನ್ನುವುದು ‘ಲವ್ ಜಿಹಾದ್’ ಅರ್ಥ ಎನ್ನಲಾಗುತ್ತಿದೆ.
ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿರುವಾಗಲೇ, ‘‘ನಮ್ಮ ಕಾನೂನಿನಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ. ಅಂತಹ ಯಾವುದೇ ಪ್ರಕರಣ ಎಲ್ಲಿಯೂ ವರದಿಯಾಗಿಲ್ಲ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ” ಎಂದು 2020ರಲ್ಲಿ ಸಂಸತ್ತಿನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.
ಈ ನಡುವೆ, ಕೇರಳದಲ್ಲಿ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಮತ್ತು ಹಿಂದೂ ಮಹಿಳೆಯರನ್ನು ಪ್ರೀತಿಸಿ, ಬಲವಂತವಾಗಿ ಮತಾಂತರಗೊಳಿಸಿ, ಅವರನ್ನು ಇಸ್ಲಾಮಿಕ್ ರಾಷ್ತ್ರಗಳಿಗೆ ಅಪಹರಣ ಮಾಡಲಾಗುತ್ತಿದೆ ಎಂದು ಚಲನಚಿತ್ರ ನಿರ್ಮಿಸಲಾಗಿದೆ. ಚಿತ್ರದ ನಿರ್ದೇಶಕರು, ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ಫೀಲ್ಡ್ ರಿಸರ್ಚ್ ಮಾಡಿ, ವಾಸ್ತವ ಮಾಹಿತಿ ಆಧರಿಸಿ ‘ದಿ ಕೇರಳ ಸ್ಟೋರಿ’ ಮಾಡಿದ್ದಾರೆ ಎಂದು ಚಿತ್ರತಂಡದವರು ಹೇಳುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸಚಿವರೇ ನಿರಾಕರಿಸಿರುವಾಗ ನಕಲಿ ಮಾಹಿತಿ ಬಳಸಿ ಸಿನಿಮಾ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿವೆ.
ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಆಡಳಿತಾರೂಢ ಮಾರ್ಕ್ಸ್‌ವಾದಿ ಪಕ್ಷದ ವಿರೋಧದಿಂದಾಗಿ ಕೇರಳದಲ್ಲಿ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಶಾಂತಿ, ಧಾರ್ಮಿಕ ಸೌಹಾರ್ದತೆ ಕದಡುವ ಸಿನಿಮಾ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.
ಹಿಂದಿ ಚಲನಚಿತ್ರ ದಿ ಕೇರಳ ಸ್ಟೋರಿ ಬಿಡುಗಡೆಯನ್ನು ತಡೆಯುವ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಗಮನಾರ್ಹ.