ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂದಿನ ವಾರ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉತ್ತರಾಖಂಡದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಅಲ್ಲಿ ಅಧಿಕಾರವನ್ನು ಉಳಿಸಿಕೊಂಡ ನಂತರ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾನ್ಯ ನಾಗರಿಕ ಸಂಹಿತೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನ್ ದೇಸಾಯಿ ನೇತೃತ್ವದ ಸಮಿತಿಯನ್ನು ಸ್ಥಾಪಿಸಿದರು.
ಸಮಿತಿಯು ವಿವಿಧ ಸಮಾಲೋಚನೆಗಳ ನಂತರ ಸಾಮಾನ್ಯ ನಾಗರಿಕ ಕಾನೂನಿನ ಕರಡು ವರದಿಯನ್ನು ಸಿದ್ಧಪಡಿಸಿದೆ. ಒಂದೆರೆಡು ದಿನದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ಈ ಕುರಿತು ರಾಜ್ಯ ಸರ್ಕಾರದ ಮೂಲಗಳ ಪ್ರಕಾರ, ರಂಜನ್ ದೇಸಾಯಿ ಅವರ ವರದಿ ನಂತರ ವಿಶೇಷ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು ಅದರಲ್ಲಿ, ಸಾಮಾನ್ಯ ನಾಗರಿಕ ಸಂಹಿತೆಯನ್ನು ಮಂಡಿಸಿ, ಅನುಮೋದನೆ ಪಡೆಯಲಾಗುದು. ಆ ಬಳಿಕ ಕಾನೂನು ಜಾರಿಗೊಳಿಸಲಾಗುವುದು.
ಕರಡು ವರದಿಯಲ್ಲಿ ಬಹುಪತ್ನಿತ್ವದ ವಿವಾಹಗಳನ್ನು ನಿಷೇಧಿಸುವುದು, ‘ಲಿವ್-ಇನ್’ ದಂಪತಿಗಳ ನೋಂದಣಿಯನ್ನು ಕಡ್ಡಾಯಗೊಳಿಸುವುದು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕುಗಳನ್ನು ನೀಡುವುದು ಮುಂತದ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕಾನೂನು ಜಾರಿಗೆ ಬಂದರೆ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಈ ರಾಜ್ಯವನ್ನು ಅನುಸರಿಸಿ ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್ ರಾಜ್ಯವೂ ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ.