ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಸಹಚರ ಮೀಸೆ ಮಾದಯ್ಯನ್ ಅನಾರೋಗ್ಯ ಕಾರಣದಿಂದ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 31 ವರ್ಷಗಳಿಂದ ಜೈಲಿನಲ್ಲಿದ್ದ ಮಾದಯ್ಯನ್ ಅನಾರೋಗ್ಯದ ಹಿನ್ನೆಲೆಯಲ್ಲಿ 11 ರಂದು ಪ್ರಜ್ಞೆ ತಪ್ಪಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
1993ರಲ್ಲಿ ಕರ್ನಾಟಕ ಪೊಲೀಸರಿಗೆ ಶರಣಾದ ಮಾದಯ್ಯನ್ ವಿರುದ್ಧ 4 ಟಾಡಾ ಪ್ರಕರಣಗಳು ದಾಖಲಾಗಿ ಮರಣದಂಡನೆ ವಿಧಿಸಲಾಯಿತು. ನಂತರ ಮೇಲ್ಮನವಿಯ ಮೇರೆಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದರೂ ಕರ್ನಾಟಕ ರಾಜ್ಯ ಸರ್ಕಾರ ಅವರನ್ನು ಬಿಡುಗಡೆ ಮಾಡಲಿಲ್ಲ.
ಮೀಸೆ ಮಾದಯ್ಯನ ಹಿನ್ನೆಲೆ:
ತಮಿಳುನಾಡಿನ ಹಕ್ಕುಗಳಿಗಾಗಿ ಮತ್ತು ಗುಡ್ಡಗಾಡು ಹಾಗೂ ಬುಡಕಟ್ಟು ಜನರ ಏಳಿಗೆಗಾಗಿ ಬದುಕಿದ್ದ ಕಾಡುಗಳ್ಳ; ದಂತ ಚೋರ ವೀರಪ್ಪನ್‌ನ ಸಹಚರರಲ್ಲಿ ಪ್ರಮುಖವಾದವರು ಮೀಸೆ ಮಾದಯ್ಯನ್. 1993ರಲ್ಲಿ ವೀರಪ್ಪನ್‌ನಿಂದ ಬೇರ್ಪಟ್ಟು ಸೇಂಗಪ್ಪಾಡಿಗೆ ಬಂದ ಮಾದಯ್ಯನ್ ಕರ್ನಾಟಕ ರಾಜ್ಯ ಪೊಲೀಸರಿಗೆ ಶರಣಾದರು. ಇವರೊಂದಿಗೆ ಪಿಲವೇಂದ್ರನ್, ಸೈಮನ್ ಮತ್ತು ಜ್ಞಾನಪ್ರಕಾಶಂ ಕೂಡ ಶರಣಾದರು.
ಈ ನಾಲ್ವರಿಗೂ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿ ತೀರ್ಪು ನೀಡಿತು. ರಾಷ್ಟ್ರಪತಿಗಳಿಗೆ ಕಳುಹಿಸಲಾದ ಕ್ಷಮಾದಾನ ಅರ್ಜಿಯನ್ನು ಕಾಲವಿಳಂಬಮಾಡಿ ಒಂಬತ್ತು ವರ್ಷಗಳ ನಂತರ ವಜಾಗೊಳಿಸಲಾಯಿತು. 2014ರಲ್ಲಿ ಮುಖ್ಯ ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ಸುಪ್ರೀಂ ಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಿ ನಾಲ್ವರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇವರೆಲ್ಲ 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರೂ ಕರ್ನಾಟಕ ರಾಜ್ಯ ಸರ್ಕಾರ ನಾಲ್ವರನ್ನು ಬಿಡುಗಡೆ ಮಾಡಲು ಮುಂದಾಗಲಿಲ್ಲ.
ಇದರಲ್ಲಿ ಸೈಮನ್ 2018ರಲ್ಲಿ ಮತ್ತು 2022ರಲ್ಲಿ ಪಿಲವೇಂದ್ರನ್ ಜೈಲಿನಲ್ಲಿ ನಿಧನರಾದರು. ಕಳೆದ ಫೆಬ್ರವರಿಯಲ್ಲಿ ಕಿಡ್ನಿ ವೈಫಲ್ಯದಿಂದ ಜ್ಞಾನಪ್ರಕಾಶ್ ಪೆರೋಲ್ ಮೇಲೆ ಹೊರಬಂದಿದ್ದರು. ಈ ಹಿನ್ನಲೆಯಲ್ಲಿ ಕಳೆದ 11 ರಂದು ಅನಾರೋಗ್ಯದ ಕಾರಣದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮೀಸೈ ಮಾದಯ್ಯನ್ ಇಂದು ಸಂಜೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೀರಪ್ಪನ್‌ನ ಗೆಳೆಯರಲ್ಲಿ ಕೊನೆಯದಾಗಿ ಜೈಲಿನಲ್ಲಿದ್ದ ವ್ಯಕ್ತಿ ಮೀಸೈ ಮಾದಯ್ಯನ್ ಎಂಬುದು ಗಮನಾರ್ಹ.