ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Vidhana Soudha Archives » Dynamic Leader
October 23, 2024
Home Posts tagged Vidhana Soudha
ರಾಜ್ಯ

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಡೆಗೂ ಜನಾಕ್ರೋಶಕ್ಕೆ ಮಣಿದು ಮೂರು ಆರೋಪಿಗಳನ್ನು ಬಂಧಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

FSL ವರದಿಯಲ್ಲಿ ಘೋಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರ್ಕಾರ ಇನ್ನೂ FSL ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸರ್ಕಾರ ಈ ಮೂವರು ಆರೋಪಿಗಳನ್ನು ಬಂಧಿಸಿದರೆ ಸಾಲದು, ಇವರ ಮೇಲೆ IPC ಯ ಸೆಕ್ಷನ್ 124A ಅಡಿ ದೇಶದ್ರೋಹ ಪ್ರಕರಣ ದಾಖಲಿಸಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ಸಹ ಈ ಪ್ರಕರಣದಲ್ಲಿ ಶಾಮೀಲು ಮಾಡಬೇಕು. ಇದರ ಜೊತೆಗೆ 25 ಜನರಿಗೆ ಪಾಸ್ ನೀಡಿ ಸುಮಾರು ನೂರು ಜನ ಬೆಂಬಲಿಗರಿಗೆ ವಿಧಾನಸೌಧದ ಒಳಗೆ ಪ್ರವೇಶ ನೀಡಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

FSL ವರದಿ ಬರುವ ಮುನ್ನವೇ ಮಾಧ್ಯಮಗಳ ಮೇಲೆ ಪಕ್ಷಪಾತ, ವಿಡಿಯೋ ತಿರುಚಿರುವ ಆರೋಪ ಹೊರಿಸಿದರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ ದೇಶ ವಿಭಜಕರ ಭಜನೆ ಮಾಡುವ ನಿಮಗೆ ಸಚಿವರಾಗಿ, ಶಾಸಕರಾಗಿ ಮುಂದುವರೆಯುವ ಯಾವ ಅರ್ಹತೆ, ನೈತಿಕತೆ, ಯೋಗ್ಯತೆ ಉಳಿದಿದೆ? ದೇಶದ ಸಾರ್ವಭೌಮತೆಯ ಬಗ್ಗೆ ನಿಷ್ಠೆ ಹೊಂದಿರುತ್ತೇನೆ, ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ದೇಶದ್ರೋಹಿಗಳ ಪರ ವಹಿಸಿಕೊಳ್ಳುವ ತಾವು ಸಂವಿಧಾನ ದ್ರೋಹಿ, ದೇಶದ್ರೋಹಿ ಅಲ್ಲದೆ ಮತ್ತೇನು? ಎಂದು ಪ್ರಿಯಾಂಕ್ ಖರ್ಗೆ ಅವರನ್ನು ತರಟೆಗೆ ತೆಗೆದುಕೊಂಡಿದ್ದಾರೆ.

FSL ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಯೇ ಇಲ್ಲ ಅಂತ ನಿಮ್ಮ ಬ್ರದರ್ಸ್ ಪರ ತೀರ್ಪು ಕೊಟ್ಟುಬಿಟ್ಟರಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ದೇಶದ್ರೋಹಿಗಳನ್ನು ರಕ್ಷಿಸಲು ಹೆತ್ತ ತಾಯಿಯಂತಹ ಭಾರತ ಮಾತೆಗೇ ದ್ರೋಹ ಬಗೆಯುವುದು ಮಹಾ ಪಾಪವಲ್ಲವೇ? ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಇಡೀ ಪ್ರಕರಣ ಕಾಂಗ್ರೆಸ್ ಪಕ್ಷದ ದೇಶಪ್ರೇಮಕ್ಕೆ, ರಾಷ್ಟ್ರ ನಿಷ್ಠೆಗೆ ಒಂದು ಅಗ್ನಿ ಪರೀಕ್ಷೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ನಡೆಯನ್ನ ಬರೀ ಕರ್ನಾಟಕ ಅಲ್ಲ, ಇಡೀ ದೇಶದ ಜನತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಅಹವಾಲುಗಳನ್ನು ಹೊತ್ತು ಜನಸ್ಪಂದನಕ್ಕೆ ಆಗಮಿಸಿದ್ದಾರೆ. ಇಂದು ಇಡೀ ದಿನ ಇವರೆಲ್ಲರ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ಮೂಲಕ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹೇಳಿದರು.

ಕಳೆದ ಬಾರಿಯ ಜನಸ್ಪಂದನದ ಅಭೂತಪೂರ್ವ ಯಶಸ್ಸು ಈ ಬಾರಿ ನಿರೀಕ್ಷೆಗೂ ಮೀರಿದಷ್ಟು ಜನರನ್ನು ಕರೆತಂದಿದೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುತ್ತೇವೆ, ಆಗಮಿಸಿರುವ ಬಂಧುಗಳು ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ನವೆಂಬರ್‌ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.98ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಹೇಳಿದರು.

ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು. ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ‘ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ’ ಎಂದಿದ್ದರು. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ, ಅಸಮಾನತೆ ನಿವಾರಿಸುವ ಕಾರ್ಯಕ್ರಮ ಎಂದು ವಿರೋಧ ಪಕ್ಷಗಳನ್ನು ಕುಟುಕಿದರು.

ನಾವು ಸಂವಿಧಾನದಲ್ಲಿ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಮಾಜದಲ್ಲಿ ಭ್ರಾತೃತ್ವ ಬೆಳೆಯಬೇಕು, ಸಮಾನತೆ ಮೂಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ದರೆ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ-ಬದಲಾವಣೆ ತರಲು ಜನಸ್ಪಂದನ ಅಗತ್ಯವಾಗಿದೆ ಎಂದು ಹೇಳಿದರು.

ರಾಜಕೀಯ

ಬೆಂಗಳೂರು: ನವೆಂಬರ್ 17 ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ, ಘೋಷಣೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದರು.

“ನವೆಂಬರ್ 17 ಶುಕ್ರವಾರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಕೇಂದ್ರ ವೀಕ್ಷಕರು ಬರಲಿದ್ದಾರೆ. ಮಾಹಿತಿ ಪ್ರಕಾರ ಇಬ್ಬರು ವೀಕ್ಷಕರು ಬರಲಿದ್ದಾರೆ. ಯಾರು ಬರುತ್ತಾರೆ ಎಂಬುದು ನಾಳೆ ತಿಳಿಯಲಿದೆ” ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ಹೇಳಿದರು. ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಶೂದ್ರ ಮತ್ತು ಮಹಿಳೆಯರನ್ನು ಶತ- ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು. 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದರು.

ಸಹಾಯ ಧನ ಪಡೆಯುತ್ತಿರುವ ಇವರೆಲ್ಲರೂ ಅಸಂಘಟಿತ ಕಾರ್ಮಿಕರ ಮಕ್ಕಳು. ಶೇ.83ರಷ್ಟು ಕಾರ್ಮಿಕರು ಇವತ್ತಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯವನ್ನು ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕ ಸಮುದಾಯ. ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟ ಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು. ಈ ವಿಭಜಕರು ಶೂದ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರುವುದನ್ನು ವಿರೋಧಿಸುತ್ತಾರೆ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರನ್ನು ನಾವು ವಿರೋಧಿಸಬೇಕು ಎಂದು ಹೇಳಿದರು.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ರಾಜಕೀಯ

ಬೆಂಗಳೂರು: ಕಾವೇರಿ ಜಲವಿವಾದ ಕುರಿತಂತೆ ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು:

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈ ವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೆವು. ತುರ್ತಾಗಿ ಆಯೋಜನೆಯಾದ ಈ ಸಭೆಗೆ ಕೆಲವರು ಪೂರ್ವನಿರ್ಧಾರಿತ ಕಾರ್ಯಕ್ರಮಗಳ ಕಾರಣ ಗೈರಾಗಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುವುದು. ಈಗ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ; ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು! – ಹೆಚ್.ಡಿ.ಕುಮಾರಸ್ವಾಮಿ

ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. 18 ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು. ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ವಿಶಾಲ್ ಪಾಟೀಲ್ ಎಂಬುವವನು ತಾನು ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಎಂದು ಸರ್ಕಾರಿ ನೌಕರರುಗಳಿಗೆ ಕರೆ ಮಾಡಿ, ನಿಮ್ಮ ವಿರುದ್ದ ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಸಂಬಂಧಪಟ್ಟ ಮಾಹಿತಿಗಳುಳ್ಳ ಕೇಸಿನ ಕಡತ ನನ್ನ ಬಳಿ ಇದೆ ಎಂದು ಬೆದರಿಕೆ ಹಾಕಿ, ಕೇಸನ್ನು ಮುಕ್ತಾಯ ಮಾಡಲು ಹಣ ನೀಡಬೇಕು ಇಲ್ಲದಿದ್ದರೆ, ನಿಮ್ಮ ವಿರುದ್ದ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುತ್ತೇನೆಂದು ಸುಳ್ಳು ಹೇಳಿ ಹಣಕ್ಕೆ ಒತ್ತಾಯ ಮಾಡುತ್ತಿದ್ದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯೋನ್ಮುಖರಾದ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನು ಸರ್ಕಾರಿ ನೌಕರರ ಬಳಿ ಹೋಗಿ ಹೆದರಿಸಿ, ಹಣವನ್ನು ಪಡೆದುಕೊಂಡು ಬರುತ್ತಿದ್ದಾಗಿ, ತನಿಖಾ ಸಮಯದಲ್ಲಿ ಕಂಡು ಬಂದಿರುತ್ತದೆ. ಲೋಕಾಯುಕ್ತ ಡಿವೈಎಸ್‌ಪಿ ಎಂದು ಕರೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯು ತಲೆ ಮಾರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿರುತ್ತದೆ.

ಇದನ್ನೂ ಓದಿ: ಜಾತಿ ತಾರತಮ್ಯದ ವಿರುದ್ಧ ಕಾನೂನು ರೂಪಿಸಿದ ಕ್ಯಾಲಿಫೋರ್ನಿಯಾ; ಕರಾಳ ದಿನವೆಂದ ಅಮೆರಿಕಾ ಹಿಂದೂ ಒಕ್ಕೂಟ!

ಈ ಯಶಸ್ವಿ ಕಾರ್ಯಚರಣೆಯನ್ನು ಶ್ರೀನಿವಾಸಗೌಡ ಆರ್, ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ಅವರ ಮಾರ್ಗದರ್ಶನದಲ್ಲಿ ಸಿ.ಬಾಲಕೃಷ್ಣ, ಸಹಾಯಕ ಪೊಲೀಸ್ ಆಯುಕ್ತರು, ಕಬ್ಬನ್ ಪಾರ್ಕ್ ಉಪ ವಿಭಾಗ ರವರ ನೇತೃತ್ವದಲ್ಲಿ ಎಸ್.ಪಿ.ಕುಮಾರಸ್ವಾಮಿ, ಪೊಲೀಸ್ ಇನ್ಸ್​ಪೆಕ್ಟರ್ ಹಾಗೂ ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತದೆ.

ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಬೆಂಗಳೂರು ರಾಜಕೀಯ

ಬೆಂಗಳೂರು: ಜುಲೈ 3 ರಿಂದ 14 ರವರೆಗೆ ವಿಧಾನಸೌಧದಲ್ಲಿ ಜಂಟಿ ಮತ್ತು ಬಜೆಟ್ ಅಧಿವೇಶನ ನಡೆಯಲಿದೆ. ಈ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮೆರವಣಿಗೆ, ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಿಧಾನಸೌಧ ಮುತ್ತಿಗೆ ಇತ್ಯಾದಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇರುತ್ತವೆ.

ಇದರಿಂದ ಅಧಿವೇಶನದ ಕಾರ್ಯ-ಕಲಾಪಗಳಿಗೆ ಅಡಚಣೆ ಉಂಟಾಗುವುದಲ್ಲದೆ, ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಗಳು ಇರುವುದರಿಂದ ಮತ್ತು ವಿಶೇಷ ಅಧಿವೇಶನದ ಕಲಾಪಗಳು ಸುಗುಮವಾಗಿ ನಡೆಯುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಐಪಿಎಸ್ ಅವರು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದ್ದಾರೆ.

ದಂಡ ಪ್ರಕ್ರಿಯಾ ಸಂಹಿತೆ ಕಲಂ 144ನೇ ಪ್ರಕರಣದ ಅನ್ವಯ ದಿನಾಂಕ: 03.07.2023 ರಿಂದ ದಿನಾಂಕ: 14.07.2023 ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ ವ್ಯಾಪ್ತಿಯಲ್ಲಿ (ಅನುಮತಿ ಪಡೆದು ಫ್ರೀಡಂ ಪಾರ್ಕ್ ನಲ್ಲಿ ನಡೆಸುವ ಪ್ರತಿಭಟನೆಗಳನ್ನು ಹೊರತುಪಡಿಸಿ) ಈ ಕೆಳಕಂಡ ನಿಬಂಧನೆಗಳಿಗೆ ಒಳಪಡುವಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

  1. ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಿದೆ.
  2. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದೆ.
  3. ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನು ಉಂಟುಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
  4. ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಸಾಗಾಟ ಮತ್ತು ಶೇಖರಿಸುವುದನ್ನು ನಿಷೇಧಿಸಿದೆ.
  5. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷನೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.