ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮುಸ್ಲಿಂ ಚಿಂತಕರ ಚಾವಡಿ Archives » Dynamic Leader
October 23, 2024
Home Posts tagged ಮುಸ್ಲಿಂ ಚಿಂತಕರ ಚಾವಡಿ
ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನೂತನ ರಾಜ್ಯ ಸರ್ಕಾರದ ಮೊದಲ ಬಜೆಟ್‍ನಲ್ಲಿ, ರಾಜ್ಯದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ, ಈ ಹಿಂದೆ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಅನುದಾನ ನೀಡಬೇಕೆಂದು ಒತ್ತಾಯಿಸಿ, ನಾಡಿನ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಮುಸ್ಲಿಂ ಚಿಂತಕರ ಚಾವಡಿ’ಯ ನಿಯೋಗವು, ಗುರುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಖುದ್ದು ಮನವಿಯನ್ನು ಸಲ್ಲಿಸಿತು.

ಮನವಿ ಸಲ್ಲಿಕೆಗೂ ಮುನ್ನ ನಿಯೋಗದ ಸದಸ್ಯರು, ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರವನ್ನು ಹಂಚಿಕೊಂಡರು. ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಸಮಿತಿ ಕಾರ್ಯದರ್ಶಿ ಅನಿಸ್ ಪಾಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಸ್ಲಿಂ ಚಿಂತಕರ ಚಾವಡಿಯ ನಿಯೋಗದ ಸದಸ್ಯರನ್ನು ಪರಿಚಯಿಸಿ, ಚಾವಡಿಯ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿಕೊಟ್ಟರು.

ನಿಯೋಗದ ಹಿರಿಯ ಸದಸ್ಯರಾದ ಬರಹಗಾರ್ತಿ, ಹಾಸನದ ಬಾನು ಮುಷ್ತಾಕ್ ಅವರು, ರಾಜ್ಯದ ಮುಸ್ಲಿಂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಆಗಬೇಕಾದ ಸಹಾಯ ಹಾಗೂ ಯೋಜನೆಗಳನ್ನು ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. 

ನಿಯೋಗದಲ್ಲಿ ಹಾಜರಿದ್ದು ಮಾತನಾಡಿದ ಕಾಂಗ್ರೆಸ್ ಮುಖಂಡ, ರಾಯಚೂರಿನ ಡಾ.ರಜಾಕ್ ಉಸ್ತಾದ್ ಅವರು, ಮುಸ್ಲಿಂ ಸಮುದಾಯ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಈ ಹಿಂದಿನ ಸರ್ಕಾರ ನಿಲ್ಲಿಸಿದ ಯೋಜನೆಗಳು, ಸವಲತ್ತುಗಳ ಬಗ್ಗೆ ವಿವರಿಸಿದರು. ಶಿಕ್ಷಣ, ಉದ್ಯೋಗ, ಕೈಗಾರಿಕೆ, ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. 

ವಿಜಯನಗರ ಜಿಲ್ಲೆಯ ಪ್ರೊ.ರಹಮತ್ ತರೀಕೆರೆ ಹಾಗೂ ಮೈಸೂರಿನ ಪ್ರೊ.ಮುಜಾಫರ್ ಅಸ್ಸಾದಿ ಅವರು ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿ ಹೇಗೆ ಕುಂಠಿತ ಆಗಿದೆ. ರಾಜ್ಯ ಸರ್ಕಾರ ಮುಸ್ಲಿಮರ ಅಭಿವೃದ್ಧಿಗೆ ಈ ಹಿಂದೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಹೆಚ್ಚಿನ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. 

ದಾವಣಗೆರೆಯ ಬರಹಗಾರ ಜೆ.ಕಲೀಂಭಾಷಾ, ಬೀದರ್ ನ ಸಾಮಾಜಿಕ ಕಾರ್ಯಕರ್ತ ಮಸ್ತಾನ್ ಬಿರಾದಾರ್, ವಿಜಯನಗರದ ಬರಹಗಾರ ಬಿ.ಪೀರ್ ಬಾಷ ಸೇರಿದಂತೆ ಹಲವರು ನಿಯೋಗದಲ್ಲಿದ್ದರು. ನಿಯೋಗದ ಸದಸ್ಯರ ಎಲ್ಲ ಅಭಿಪ್ರಾಯಗಳನ್ನು ಮುಕ್ತವಾಗಿ ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ಚುನಾವಣೆ ವೇಳೆ ಭರವಸೆ ನೀಡಿರುವಂತೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ರೀತಿಯ ಅನುದಾನ ನೀಡಲು ಪ್ರಯತ್ನಿಸುವೆ. ಈಗಾಗಲೇ ಬಜೆಟ್ ತಯಾರಿ ಬಹುತೇಕ ಪೂರ್ಣ ಆಗಿರುವ ಹಿನ್ನೆಲೆಯಲ್ಲಿ ಮತ್ತು ಐದು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲು ಮುಂದಾಗಿದ್ದು, ಈ ಸಾಲಿನಲ್ಲಿ ಸಾಧ್ಯವಾದಷ್ಟೂ ಅನುದಾನವನ್ನು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ತಾವೆಲ್ಲ ಒತ್ತಾಯ ಮಾಡಿರುವಂತೆ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್ ಹಾಜರಿದ್ದರು.