ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಮರು ಆಯ್ಕೆಯಾಗಿದ್ದಾರೆ. ದೆಹಲಿಯ ಹಳೆಯ ಪಾರ್ಲಿಮೆಂಟ್ ಸೆಂಟ್ರಲ್ ಹಾಲ್ ನಲ್ಲಿ ಕಾಂಗ್ರೆಸ್ ಸಂಸದರ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಅವರನ್ನು ಮರು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಅವರನ್ನು ಪ್ರಸ್ತಾಪಿಸಿದರು. ಗೌರವ್ ಗೊಗೊಯ್, ತಾರಿಕ್ ಅನ್ವರ್, ಸುಧಾಕರನ್ ಈ ಪ್ರಸ್ತಾಪವನ್ನುಅನುಮೋದಿಸಿ ಮಾತನಾಡಿದರು.
ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. ಒಬ್ಬ ಸ್ವತಂತ್ರ ಸದಸ್ಯರ ಬೆಂಬಲದಿಂದ ಪಕ್ಷದ ಬಲ 100ಕ್ಕೆ ಏರಿದೆ. ರಾಜಸ್ಥಾನದಲ್ಲಿ ಗೆದ್ದ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಇಂದು (ಜೂನ್ 08) ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ (CWC) ಸಭೆ ಹಾಗೂ ಸಂಸದೀಯ ಪಕ್ಷದ (CPP) ಸಭೆ ನಡೆದವು. ಈ ಸಭೆಯಲ್ಲಿ ರಾಹುಲ್ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.
ಈ ಹಿನ್ನೆಲೆಯಲ್ಲಿ, ಹಳೆ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಕಾಂಗ್ರೆಸ್ ಸಂಸದರ ಸಭೆ ನಡೆಯಿತು. ಪಕ್ಷದ ನಾಯಕರಾದ ಖರ್ಗೆ, ಸೋನಿಯಾ, ರಾಹುಲ್, ಪಕ್ಷದ ರಾಜ್ಯಸಭಾ ಸಂಸದರು, ಲೋಕಸಭೆಗೆ ಆಯ್ಕೆಯಾದ ಕಾಂಗ್ರೆಸ್ ಸಂಸದರು, ಪಕ್ಷದ ಹಲವು ಪ್ರಮುಖ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಕೊನೆಯಲ್ಲಿ ಸೋನಿಯಾ ಅವರನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಮರು ಆಯ್ಕೆ ಮಾಡಲಾಯಿತು.