ಸಂಸತ್ತಿನ ವಿಶೇಷ ಅಧಿವೇಶನ ಸೂಚನೆ; ಅವಧಿಪೂರ್ವ ಚುನಾವಣೆಯೇ? ಕೇಂದ್ರ ಬಿಜೆಪಿ ಸರ್ಕಾರದ ಯೋಜನೆ ಏನು?!
• ಡಿ.ಸಿ.ಪ್ರಕಾಶ್ ಸಂಪಾದಕರು
ಲೋಕಸಭೆ ಚುನಾವಣೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಕಾನೂನು ಕರಡು ತರಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮೈತ್ರಿಕೂಟದ ಮೂರನೇ ಸಭೆ ನಿನ್ನೆ ಮುಂಬೈನಲ್ಲಿ (ಆ. 31) ಆರಂಭವಾಗುತ್ತಿದ್ದಂತೆಯೇ ಸಂಸತ್ತಿನ ವಿಶೇಷ ಅಧಿವೇಶನ ಕುರಿತಾದ ಘೋಷಣೆಯನ್ನು ದಿಢೀರ್ ಎಂದು ಹೊರಡಿಸಲಾಗಿದೆ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಘೋಷಿಸಲಾಗಿದೆ. ‘ಇದು 17ನೇ ಲೋಕಸಭೆಯ 13ನೇ ಅಧಿವೇಶನವಾಗಿದ್ದು, ರಾಜ್ಯಸಭೆಯ 261ನೇ ಅಧಿವೇಶನವೂ ಆಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ!
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಒಂಬತ್ತೂವರೆ ವರ್ಷಗಳ ಆಡಳಿತದಲ್ಲಿ ಜಿಎಸ್‌ಟಿಯನ್ನು ಪರಿಚಯಿಸಿದಾಗ, ಜೂನ್ 10, 2017 ರಂದು ಮೊದಲ ಬಾರಿಗೆ ಸಂಸತ್ತಿನ ಉಭಯ ಸದನಗಳ ಜಂಟಿ ಸಭೆ ನಡೆಸಲಾಯಿತು. ಆ ಬಳಿಕ ಇದೀಗ ಎರಡನೇ ಬಾರಿಗೆ ಉಭಯ ಸದನಗಳ ಜಂಟಿ ಸಭೆ ನಡೆಯಲಿದೆ. ವರದಿಗಳ ಪ್ರಕಾರ ಸಂಸತ್ತಿನ ನೂತನ ಕಟ್ಟಡದಲ್ಲಿ ಈ ಸಭೆ ನಡೆಯಲಿದೆ.
ಆದರೆ, ಸಂಸದೀಯ ವ್ಯವಹಾರಗಳ ಸಚಿವಾಲಯ ಅಥವಾ ಉಭಯ ಸದನಗಳ ಕಚೇರಿಗಳು ಈ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗುತ್ತದೆ. ಉತ್ತರ ರಾಜ್ಯಗಳಲ್ಲಿ ಗಣೇಶ ಚತುರ್ಥಿಯನ್ನು ಆ ದಿನವೇ ಆಚರಿಸಲಾಗುತ್ತದೆ. ಹೀಗಾಗಿ ಈ ಸಭೆಯ ‘ಅಜೆಂಡಾ’ ಕುರಿತು ಊಹಾಪೋಹಗಳ ಆಧಾರದಲ್ಲಿ ರಾಜಕೀಯ ವಲಯದಲ್ಲಿ ನಾನಾ ಸುದ್ದಿಗಳು ಹರಿದಾಡುತ್ತಿವೆ.
ಇದನ್ನೂ ಓದಿ: ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿ ಕೂಟವು 14 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಿದೆ!
ಅದಾನಿ ವಿಚಾರ ಸೇರಿದಂತೆ ಬಿಜೆಪಿ ವಿರುದ್ಧ ಎದ್ದಿರುವ ಕೆಲವು ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳುತ್ತಿದ್ದಾರೆ. ಆದರೆ, ಬಹಿರಂಗವಾಗಿ ಪ್ರಸ್ತಾಪಿಸದ ಕೆಲವು ಪ್ರಮುಖ ಅಜೆಂಡಾಗಳನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಿದೆ ಎಂದು ದೆಹಲಿಯ ರಾಜಕೀಯ ಮೂಲಗಳು ಹೇಳುತ್ತವೆ.
ಪ್ರಸ್ತುತ ಲೋಕಸಭೆಯು ಮೇ 2024 ರಲ್ಲಿ ಕೊನೆಗೊಳ್ಳಲಿರುವುದರಿಂದ, ಸಂಸತ್ತಿನ ಸಾರ್ವತ್ರಿಕ ಚುನಾವಣೆಯನ್ನು ಮೊದಲೇ ನಡೆಸಲು ಬಿಜೆಪಿ ಯೋಜಿಸುತ್ತಿದೆ ಎಂಬ ವರದಿಗಳಿವೆ. ಅಲ್ಲದೇ ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಬಿಜೆಪಿ ಜಾರಿಗೆ ತರಲು ಹೊರಟಿದೆ ಎಂಬ ಸುದ್ದಿಯೂ ಇದೆ. ಅಂದರೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಈ ವಿಶೇಷ ಅಧಿವೇಶನದಲ್ಲಿ ವಿಧೇಯಕ ತರಲು ಹೊರಟಿದ್ದಾರೆ ಎಂದು ವರದಿಯಾಗಿದೆ.