ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹೆಚ್.ಡಿ.ಕುಮಾರಸ್ವಾಮಿ Archives » Dynamic Leader
December 3, 2024
Home Posts tagged ಹೆಚ್.ಡಿ.ಕುಮಾರಸ್ವಾಮಿ
ದೇಶ

ತಿರುಚ್ಚಿ: ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದರು.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ಸಮಸ್ಯೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇದುವರೆಗೆ ಯಾವ ಸರಕಾರಕ್ಕೂ ಸಾಧ್ಯವಾಗಿಲ್ಲ. ಕಾವೇರಿ ವಿಚಾರದಲ್ಲಿ ಎರಡು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ರಾಜಕೀಯ ಮಾಡುತ್ತಿದೆ ಎಂದು ತಮಿಳುನಾಡಿನ ರೈತರು ಆರೋಪ ಮಾಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ಕಾವೇರಿ ಸಮಸ್ಯೆ ತಲೆದೋರುತ್ತದೆ.

ಈ ಹಿನ್ನೆಲೆಯಲ್ಲಿ, ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದರ್ಶನ ನೀಡಿದ್ದಾರೆ. ಅದರಲ್ಲಿ, “ಶಾಸನಬದ್ಧ ಕಾವೇರಿ ವಿತರಣಾ ಯೋಜನೆಯು ಬರಗಾಲದಲ್ಲಿ ಕಾವೇರಿ ನೀರಿನ ಸಮಸ್ಯೆಗೆ ಸಹಾಯ ಮಾಡುವುದಿಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಎರಡು ರಾಜ್ಯ ಸರ್ಕಾರಗಳು ಚರ್ಚಿಸಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಕಾವೇರಿ ಸಮಸ್ಯೆಗೆ Give and take policy ನೀತಿಯೊಂದೇ ಪರಿಹಾರ” ಎಂದು ಹೇಳಿದರು

ರಾಜ್ಯ

ಮಂಡ್ಯ: ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿ ಕೆರೆ ಕಟ್ಟೆಗೆ ಇಂದು ಭೇಟಿ ನೀಡಿದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಲ್ಲಿ ಪರಿಶೀಲನೆ ನಡೆಸಿದರು.

ಕೆರೆ ಏರಿ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ನಾಶವಾಗಿದೆ. ನೊಂದ ರೈತರಿಗೆ ಧೈರ್ಯ ಹೇಳಿ, ಪರಿಹಾರ ಕೊಡಿಸುವ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ, ಮಾಜಿ ಸಚಿವ ಸಾರಾ ಮಹೇಶ್, ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಹಾಗೂ ಇನ್ನಿತರೆ ನಾಯಕರೊಂದಿಗೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ದೇಶ

ಛತ್ತಿಸಗಢ,

ಛತ್ತಿಸಗಢದ ಭಿಲಾಯ್ ಉಕ್ಕು ಕಾರ್ಖಾನೆ (Bhilai Steel Plant)ಗೆ ಭೇಟಿ ನೀಡಲು ಬಂದಿದ್ದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ‘ಭಿಲಾಯ್ ಕನ್ನಡ ಸಂಘ’ದ ಸದಸ್ಯರು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿರುವುದಕ್ಕೆ ಸಚಿವರು ಧನ್ಯವಾದಗಳನ್ನು ತಿಳಿಸಿದ್ದಾರೆ.

“ಅವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಅನಂತ ಧನ್ಯವಾದಗಳು” ಎಂದು ಹೇಳಿದ್ದಾರೆ.

ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಮುಂತಾದವರು ಉಪಸ್ಥಿತರಿದ್ದರು ಎಂದು ಸಚಿವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜಕೀಯ

ಬೆಂಗಳೂರು: ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಸಿದ್ದರಾಮಯ್ಯ ನವರೇ.. ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ. ಹಾಗಾದರೆ, ಇದರಲ್ಲಿ ‘ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ?’ ‘ಸುಳ್ಳು ಸಂಶೋಧಕ ಸಿದ್ದರಾಮಯ್ಯ’ನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ ಎಂದು ಕಿಡಿಕಾರಿದ್ದಾರೆ.

‘ಮೂಡಾ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಮುಕ್ಕಿ ತಿಂದಿದೆ’ ಎಂದು ಇಡೀ ದೇಶ ಮಾತನಾಡುತ್ತಿದೆ. ದಾಖಲೆಗಳು ಹಾದಿಬೀದಿಯಲ್ಲಿ ಹೊರಳಾಡುತ್ತಿವೆ! ನಿಮ್ಮ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ.. ಇದೆಲ್ಲವೂ ಕಳಚಿಬಿದ್ದಿದೆ. ಅಸಹ್ಯವಾಗುವಷ್ಟು ಅನಾಚಾರ ಮಾಡಿ ಅಹಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿರುವ ನಿಮ್ಮ ಅಸಹಾಯತೆ ನನಗೆ ಅರ್ಥವಾಗುತ್ತದೆ. ಪಾಪ.. ನಿಮ್ಮ ಪಕ್ಷದವರೇ ನಿಮಗೆ ‘ಶರಪಂಜರ’ ಸೃಷ್ಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎನ್ನುತ್ತೀರಿ. ಅದು ನನಗೆ ಗೊತ್ತಿದೆ. ನಾನು ಕೇಂದ್ರ ಸಚಿವನಾಗಿ ಇನ್ನೂ ಎರಡು ತಿಂಗಳಾಗಿಲ್ಲ. ರಾಜ್ಯದ ಕೆಲಸ ಮಾಡೋಣ ಎಂದರೆ ನಿಮ್ಮ ಅಸಹಕಾರ, ಅಸೂಯೆ ಅಡ್ಡಿ. ಒಂದು ನಾಲಿಗೆ ಮೇಲೆ ಸಹಕಾರ, ಅಸಹಕಾರ.. ಇದು ಹೇಗೆ ಸಾಧ್ಯ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿ.. ನಿಮ್ಮ ಐಡಿಯಾಲಜಿ! ಆ ಸಿದ್ದಾಲಜಿ (Siddalogy) ನನಗೆ ಗೊತ್ತಿಲ್ಲದಲ್ಲ ಸಿದ್ದರಾಮಯ್ಯನವರೇ.. ರಾಜ್ಯಕ್ಕೆ ಒಳ್ಳೆಯದಾಗಲಿ ಎನ್ನುವ ಆಶಯ ಇರಲಿ, ನನ್ನ ಮೇಲೆ ಅಸೂಯೆ ಏಕೆ? ನಿಮ್ಮ ಸಕಲ ಗುಣಗಳ ಸಿದ್ದಾಲಜಿ ನನಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: 2024ರ ಸಂಸತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿ ಗೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾಸ್ವಾಮಿ, 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಸಿಕೊಂಡ ನರೇಂದ್ರ ಮೋದಿ ಸರ್ಕಾರದಲ್ಲಿ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಅವರನ್ನು ಜೆಡಿಎಸ್ ಕಾರ್ಯಕರ್ತರು, ವಿಮಾನ ನಿಲ್ದಾಣದ ಬಳಿ ಅತ್ಯಂತ ಪ್ರೀತಿಯಿಂದ ಬರ ಮಾಡಿಕೊಂಡರು.

ಅದೇ ರೀತಿ ಕೇಂದ್ರ ಸರಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿಯನ್ನು ಪಕ್ಷದ ನಾಯಕರು, ಕಾರ್ಯಕರ್ತರು ವಿಶೇಷ ಅದರಾಭಿಮಾನದಿಂದ ಬರಮಾಡಿಕೊಂಡರು.

ಈ ಬಗ್ಗೆ ತಮ್ಮ ಎಕ್ಸ್ ಜಾಲತಾಣದಲ್ಲಿ, “ಎಲ್ಲರ ವಿಶ್ವಾಸ, ಅಭಿಮಾನಕ್ಕೆ ನಾನು ಋಣಿ. ಮುಖ್ಯವಾಗಿ ಈ ಅವಿಸ್ಮರಣೀಯ ಕ್ಷಣಗಳಿಗೆ ನೇರ ಕಾರಣರಾದ ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ, ಸಮಸ್ತ ಕನ್ನಡಿಗರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ರಾಜಭವನಕ್ಕೆ ತೆರಳಿ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿದರು.

ಕೇಂದ್ರ ಸಚಿವರಾದ ಮೇಲೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿಯಾದ ತಂದೆ ಹೆಚ್.ಡಿ.ದೇವೇಗೌಡರನ್ನು ಮತ್ತು ತಾಯಿಯನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

ದೇಶ

ನವದೆಹಲಿ: ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರಕಾರದ ಸಂಪುಟದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಲಾಗಿದೆ.

ಈ ಕುರಿತು ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು “ಸತತವಾಗಿ 3ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರಕಾರದ ಸಂಪುಟದಲ್ಲಿ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ನನಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ್ದು, ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು” ಎಂದು ಹೇಳಿದ್ದಾರೆ.

I am deeply grateful to the Hon’ble Prime Minister, Shri.Narendramodi for appointing me as the Minister of Steel and Heavy Industries in the National Democratic Alliance (NDA) government, in its third consecutive term.

ರಾಜ್ಯ

ಬೆಂಗಳೂರು: ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಹೆಸರಿಗೆ ಅನ್ನದಾತ; ಆದರೆ ಅವರ ಕಣ್ಣೀರು ಒರೆಸಿ, ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಕೈಕಟ್ಟಿ ಕೂತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ;  ಖಂಡನೀಯ. ಮೊದಲೇ ತೀವ್ರ ಬರ, ಬೆಳೆನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದು ಎಂದರೆ ತಪ್ಪಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಕೂಡಲೇ ಸಾಲ ನೀಡಿರುವ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು. ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು ಎನ್ನುವುದು ನನ್ನ ಆಗ್ರಹ ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಹಗರಣದಿಂದ ನಾಡಿನ ಜನತೆ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ  ಅನೈತಿಕ ವ್ಯವಹಾರವನ್ನು ಹಿಡಿದು ಎರಡು ಪಕ್ಷಗಳು ಆರೋಪ ಪ್ರತ್ಯರೋಪ ಮಾಡುತ್ತಾ ಮಾತಿನ ಸಮರ ನಡೆಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.

ಹಣ, ಅಧಿಕಾರ ಬಳಸಿ ಅನೈತಿಕ ಸಂಬಂಧ ಬೆಳೆಸಿದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ರಾಜ್ಯದ ಮಾನ ಹರಾಜಾಗಿದೆ. ದೇಶದಾದ್ಯಂತ ಈ ಪ್ರಕರಣ ಸುದ್ದಿಯಾಗಿದೆ. ಅತ್ಯಾಚಾರ ಆರೋಪಿ ಪ್ರಜ್ವಲ್ ನನ್ನು ಹಿಡಿದು ಹೆಡೆಮುರಿಕಟ್ಟಿ ಬಂಧಿಸಿ ರಾಜ್ಯದ ಗೌರವ ಕಾಪಾಡುವ ಬದಲು, ಪೆನ್ ಡ್ರೈವ್ ಬಹಿರಂಗ ಪಡಿಸಿದವರು ಯಾರು ಎಂಬ ಚರ್ಚೆಯಾಗುತ್ತಿರುವುದು ಹಾಸ್ಯಾಸ್ಪದ. ರಾಜಕೀಯ ಪ್ರಭಾವ ಬಳಸಿ ದೇಶದಿಂದ ಆರೋಪಿಗಳು ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ.

ಇಂತಹ ಬೆಳವಣಿಗೆಗಳಿಗೆ ಅಂತ್ಯ ಹಾಡಬೇಕು. ಮೊದಲು ಆರೋಪಿ ಸ್ಥಾನದಲ್ಲಿರುವವರನ್ನು ಬಂಧಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪಕ್ಷಗಳು ಪ್ರಯತ್ನಿಸಬೇಕಾಗಿದೆ. ಎಷ್ಟೇ ಪ್ರತಿಷ್ಠಿತ ಕುಟುಂಬವಾದರೂ ಸರಿ, ಇಂತಹ ಅನಾಗರಿಕ ಹಗರಣದ ಆರೋಪಿಗಳನ್ನು ಯಾರೂ ಬೆಂಬಲಿಸಬಾರದು. ಕನ್ನಡ ನಾಡಿನ ಮಾನಕ್ಕೆ ದಕ್ಕೆ ತಂದಿರುವ ಪ್ರಕರಣದಲ್ಲಿ ರಾಜಕೀಯವನ್ನು ಬದಿಗಿಟ್ಟು, ಪ್ರಾಮಾಣಿಕವಾಗಿ… ನ್ಯಾಯಬದ್ದವಾಗಿ… ವರ್ತಿಸಿ, ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಂಡು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಾಹೇರ್ ಹುಸೇನ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ರಾಜಕೀಯ

ಬೆಂಗಳೂರು: ಹಾಸನದ  ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣದಿಂದ ರಾಜ್ಯವು ದೇಶದ ಮುಂದೆ ತಲೆತಗ್ಗಿಸುವಂತೆ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಇಂತಹ ವಿಕೃತಿ ಹೊಂದಿರುವವ ಜನ ಪ್ರತಿನಿಧಿಯಾಗಿರುವುದು ಸಂಸತ್ತಿನ ಇತಿಹಾಸಕ್ಕೆ ಕಪ್ಪು ಚುಕ್ಕೆ. ನೈತಿಕ ಅ ಅಧಃಪತನದ ಪರಮಾವಧಿಯಿದು. ಇಂತಹ ಜನಪ್ರತಿನಿಧಿಯಿಂದ ಸಮಾಜ ದೇಶ ಹೇಗೆ ಉದ್ದಾರವಾದೀತು?

ಹಿಂದೂ ಹೆಣ್ಣು ಮಕ್ಕಳ ವಕ್ತಾರರಂತೆ ಪೋಸು ಕೊಟ್ಟು ಮಾಧ್ಯಮಗಳ ಮುಂದೆ ನಾಲಗೆ ಹರಿಯ ಬಿಡುವ ಬಿಜೆಪಿಯ ವಾಕ್ಚತುರ ಹೋರಾಟಗಾರರು ಏಕೆ ಮೌನವಾಗಿದ್ದಾರೆ? ಅಲ್ಪಸಂಖ್ಯಾತ ವರ್ಗದ ಯುವಕರಿಂದ ಲೈಂಗಿಕ ಅಪರಾಧ ನಡೆದರೆ ಮಾತ್ರ ಹೋರಾಟವೇ? ಈ ಸಂತ್ರಸ್ತ ಹೆಣ್ಮಕ್ಕಳ ಪರ ಹೋರಾಡದೆ ಏಕೆ ಇವರೆಲ್ಲ ತೆಪ್ಪಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂತ್ರಸ್ತ ಮಹಿಳೆಯರು ಪ್ರಜ್ವಲ್ ಜೊತೆಗೆ ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಮೇಲೆಯೂ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಬುಗಿಲೆದ್ದ ಪ್ರತಿಭಟನೆಗಳಿಂದ ಪಾರಾಗಲು ಕಾಟಾಚಾರದ ತನಿಖೆ ಆಗಬಾರದು. ಯಾಕೆಂದರೆ ಇಂತಹ ತನಿಖೆಗಳು ದಡ ಸೇರಿದ್ದು ವಿರಳ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಹಣದಿಂದ ಗ್ರಾಮೀಣ ಹೆಣ್ಣು ಮಕ್ಕಳು ಅಡ್ಡ ದಾರಿ ಹಿಡಿಯುತ್ತಾರೆಂಬ ಅರ್ಥದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲು ತಮ್ಮ ಪರಿವಾರದ ಕಡೆಗೆ ತಿರುಗಿ ನೋಡಲಿ. ನಂತರ  ಬಡ ಹೆಣ್ಣುಮಕ್ಕಳ ಬಗ್ಗೆ ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಹೆಣ್ಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸತ್ಯಾಸತ್ಯತೆ ಹೊರ ಬರಲೇಬೇಕು. ತಪ್ಪು ಮಾಡಿ ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡುವುದು ಇಂದು ಸಾಮಾನ್ಯವಾಗಿದೆ. ಈ ವಿದೇಶ ಪಲಾಯನದಲ್ಲಿ ಯಾರದ್ದಾದರೂ ಪ್ರಭಾವ ಇದೆಯೇ ಎಂಬ ಕುರಿತೂ ತನಿಖೆ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ದೇಶ

ನವದೆಹಲಿ: ದೇವೇಗೌಡರ ಪುತ್ರನ ಅಶ್ಲೀಲ ವಿಡಿಯೋ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಶ್ನೆ ಎತ್ತಿದ್ದಾರೆ.

ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಮಗ ರೇವಣ್ಣ, ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವೀಡಿಯೋ ಪ್ರಕರಣ ರೂಪ ಪಡೆದುಕೊಂಡಿದೆ. ವಿಚಾರಣೆಗೆ ಹೆದರಿ ಅವರು ಜರ್ಮನಿಗೆ ಪಲಾಯನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ವಿಶೇಷ ತನಿಖಾ ಸಮಿತಿ (SIT) ಯನ್ನು ರಚಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಿಯಾಂಕಾ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “10 ದಿನಗಳ ಹಿಂದೆ ಪ್ರಧಾನಿ ಕೈಕುಲುಕಿ, ಭುಜ ತಟ್ಟಿ ಕರ್ನಾಟಕ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಈಗ ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಬದುಕನ್ನು ಹಾಳು ಮಾಡಿದ್ದಾರೆ.

ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಮಾಡಿದ ಅಪರಾಧಗಳನ್ನು ಕೇಳಿದರೆ ಹೃದಯ ಕಂಪಿಸುತ್ತದೆ. ಈ ಬಗ್ಗೆ ಪ್ರಧಾನಿ ಮೋದಿ ಬಾಯಿ ತೆರೆಯುತ್ತಾರಾ? ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಏಕೆ? ಎಂದು ಪ್ರಧಾನಿ ಮೋದಿಯನ್ನು ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಶ್ನಿಸಿದ್ದಾರೆ.