ಗಿರೀಶ್ ಕುಮಾರ್, ಯಾದಗಿರಿ
ಯಾದಗಿರಿ: “ವಿವಿಧ ಭಾಷೆ, ಧರ್ಮ, ಸಮಾಜ, ಆಚಾರ, ವಿಚಾರ, ಭೌಗೋಳಿಕ ವಿಭಿನ್ನತೆ ಹೊಂದಿರುವ ಭಾರತಕ್ಕೆ ಯಾರೊಬ್ಬರೂ ಅಪಸ್ವರ ಎತ್ತದಂತಹ ಶ್ರೇಷ್ಠ ಸಂವಿಧಾನವನ್ನು ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದಾರೆ” ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದ್ದಾರೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವಾರ್ಪನೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಭಾರತ ವೈವಿಧ್ಯಮಯ ದೇಶವಾಗಿದೆ. ವಿವಿಧ ಧರ್ಮ, ಭಾಷೆ, ಆಚಾರ, ವಿಚಾರಗಳನ್ನು ಹೊಂದಿರುವಂತಹ ಹಲವು ಸಮಾಜ, ಜನಾಂಗಗಳ ದೇಶವಾಗಿದೆ. ವಿವಿಧ ರೀತಿಯ ಭೌಗೋಳಿಕತೆಯನ್ನು ಸಹ ಹೊಂದಿರುವಂತಹ ಇಂತಹ ರಾಷ್ಟ್ರಕ್ಕೆ ಉತ್ಕೃಷ್ಟವಾದ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದಾರೆ. ಅದರಲ್ಲಿಯೂ ಯಾರೊಬ್ಬರ ಅಪಸ್ವರ ವಿಲ್ಲದಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿರುವುದು ನಮ್ಮ ದೇಶದ ಅಖಂಡತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಲಬುರಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ಜಯದೇವಿ ಗಾಯಕವಾಡ ಅವರು, “ಶತ-ಶತಮಾನಗಳ ನೋವು ಅನುಭವಿಸಿ ಶೋಷಿತ ವರ್ಗಗಳಿಗೆ ಸಂವಿಧಾನದ ಮೂಲಕ ನ್ಯಾಯ ಒದಗಿಸುವ ಕಾರ್ಯವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ಮಾಡಿದ್ದಾರೆ. ಶ್ರಮಿಕರು, ಕಾರ್ಮಿಕರು, ಮಹಿಳೆಯರು, ರೈತರು ಹಾಗೂ ಬಡ ಜನರಿಗೆ ನ್ಯಾಯ ಒದಗಿಸಿದ್ದಾರೆ. ಶೋಷಿತರ ಹಕ್ಕುಗಳಿಗಾಗಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಅವರು ಸಮಾನತೆ ಮತ್ತು ಸ್ವಾತಂತ್ರ್ಯವನ್ನು ದೇಶಕ್ಕೆ ತಿಳಿ ಹೇಳಿದ್ದಾರೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು, “ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಸ್ತಾವನೆಯಲ್ಲಿಯೇ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಮೀಗಿಲಾದ ಧ್ಯೇಯವನ್ನು ವಿವರಿಸಿದ್ದಾರೆ. ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು. ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ್ ಮಾಲಿ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಕ್ ಶಂಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಯಂತೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಅನ್ವರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ, ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಮರೆಯಪ್ಪ ಚಟ್ಟೇರಕರ್, ಮಲ್ಲಪ್ಪ ಗೋಗಿ, ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಎಸ್.ಎಸ್ ಅವರು ಸ್ವಾಗತಿಸಿದರು. ಜ್ಯೋತಿಲತಾ ತಡಬೀಡಿ ಕಾರ್ಯಕ್ರಮ ನಿರ್ವಹಿಸಿದರು. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ವಂದಿಸಿದರು. ಶರಣಬಸಪ್ಪ ವಟಾರ್ ಪ್ರಾರ್ಥಿಸಿದರು.