ಗಿರೀಶ್ ಕುಮಾರ್, ಯಾದಗಿರಿ
ಯಾದಗಿರಿ: (ವಡಗೇರಾ) ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ರೈತ ಸಂಘವು ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, “ಈ ಹಿಂದೆ ಒಂದು ವಾರಗಳ ಗಡವು ನೀಡಲಾಯಿತು. ಆದರೂ ಕೂಡಾ ಹಣ ಬಿಡುಗಡೆ ಮಾಡದೆ ರೈತರನ್ನು ವಂಚಿಸುತ್ತಿರುವ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಡೆಯನ್ನು ಖಂಡಿಸುತ್ತಿದ್ದೇವೆ” ಎಂದು ದೂರಿದರು.
“ಕಲಬುರಗಿ, ಬಿಜಾಪುರ, ಯಾದಗಿರಿ, ಬೀದರ್ ಜಿಲ್ಲೆ ಹಾಗೂ ಇನ್ನಿತರ ಜಿಲ್ಲೆಯ ರೈತರು ಇಲ್ಲಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ನಿಡಿದ್ದು, ಸುಮಾರು ನಾಲ್ಕೈದು ತಿಂಗಳು ಕಳೆದರೂ ಕೂಡಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸಮಯಕ್ಕೆ ಕಬ್ಬಿನ ಹಣ ನಿಡದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ನೂರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ” ಎಂದು ಹೇಳಿದರು.
“ರೈತರು ಈಗಾಗಲೇ ಸಾಲ ಮಾಡಿ ಕಬ್ಬನು ಬೆಳೆದಿದ್ದಾರೆ. ರೈತರು ತುಂಬಾ ಸಂಕಷ್ಟದಲ್ಲಿದ್ದು, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈ ಕುರಿತು ಸ್ಪಂದಿಸಿ, ರೈತರ ಬಾಕಿ ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಹೋರಾಟ ನಡೆಸಲಾಗುವುದು” ಎಂದು ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ ತಡಿಬಿಡಿ, ಚಂದ್ರಕಾಂತ್ ಹೆಗ್ಗಣದೊಡ್ಡಿ, ನೂರಾರು ರೈತರು ಎಚ್ಚರಿಸಿದ್ದಾರೆ.