ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಕುರಿತಾಗಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಇಂದು ಸಭೆ ನಡೆಸಿ, ಚರ್ಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಭೆಯ ಮುಖ್ಯಾಂಶಗಳು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿರಲಿದೆ.
ಹಿಂದಿನ ಸರ್ಕಾರ ಸುಮಾರು 40 ಸಾವಿರ ಕೋಟಿ ರೂ. ಬಾಕಿ ಬಿಲ್ಲುಗಳನ್ನು ಉಳಿಸಿ ಹೋಗಿದೆ. ಇದು ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡಿದೆ. ಸರ್ಕಾರದ ಇತಿಮಿತಿಯ ಒಳಗಾಗಿ ಬೇಡಿಕೆಗಳನ್ನು ಪರಿಶೀಲಿಸಲಾಗುವುದು.
ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿದಂತೆ ಎಲ್ಲಾ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆ ಕುರಿತಾಗಿ ಇನ್ನೊಮ್ಮೆ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆಯನ್ನು ಆದಷ್ಟು ಬೇಗನೆ ಕರೆಯಲಾಗುವುದು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಂಸ್ಥೆಗೆ ರೂ.4 ಸಾವಿರ ಕೋಟಿಯಷ್ಟು ಮೊತ್ತವನ್ನು ಹಿಂದಿನ ಸರ್ಕಾರ ಬಾಕಿ ಉಳಿಸಿ ಹೋಗಿತ್ತು. ಸಂಸ್ಥೆಯನ್ನು ಬಲಪಡಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ನೌಕರರಿಗೆ ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ 350 ಕೋಟಿ ಸಾಲವನ್ನು ಪಡೆಯಲು ಸಂಸ್ಥೆಗೆ ಅನುಮತಿ ನೀಡಲಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು 2 ಸಾವಿರ ಬಸ್‌ಗಳನ್ನು ಹೊಸದಾಗಿ ಖರೀದಿ ಮಾಡಲಾಗುವುದು.
ಚಾಲಕ ಮತ್ತು ನಿರ್ವಾಹಕರ ಮಾದರಿಯಲ್ಲಿ ಮೆಕ್ಯಾನಿಕ್ ಗಳ ನೇಮಕಾತಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಗೃಹ ಸಚಿವರಾದ ಜಿ.ಪರಮೇಶ್ವರ್, ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜ್, ನಸೀರ್ ಅಹ್ಮದ್, ಸಾರಿಗೆ ನಿಗಮಗಳ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್, ರಾಜು ಕಾಗೆ, ಕಾರ್ಮಿಕ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.