ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ದುರುಪಯೋಗಪಡಿಸಿ ಪ್ರತಿಷ್ಠಿತ ಉಬರ್ ಮತ್ತು ರ‍್ಯಾಪಿಡೋ ಸಂಸ್ಥೆಗಳಿಗೆ ವಂಚನೆ! » Dynamic Leader
November 24, 2024
ಕ್ರೈಂ ರಿಪೋರ್ಟ್ಸ್

ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ದುರುಪಯೋಗಪಡಿಸಿ ಪ್ರತಿಷ್ಠಿತ ಉಬರ್ ಮತ್ತು ರ‍್ಯಾಪಿಡೋ ಸಂಸ್ಥೆಗಳಿಗೆ ವಂಚನೆ!

ಬೆಂಗಳೂರು: ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆ ಅಧಿಕಾರಿಗಳು ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ದುರುಪಯೋಗಪಡಿಸಿ, ಪ್ರತಿಷ್ಠಿತ ಕ್ಯಾಬ್ (Cab Aggregators) ಆಪರೇಟಿವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ 3 ಆರೋಪಿಗಳನ್ನು ಬಂಧಸಿದ್ದಾರೆ. 1055 ಫ್ರೀ ಆಕ್ಟಿವೇಟೆಡ್ ಮೊಬೈಲ್ ಸಿಮ್ ಕಾರ್ಡುಗಳು, 15 ಮೊಬೈಲ್ ಪೋನ್, 4 ಲ್ಯಾಪ್‌ಟಾಪ್, 1 ಕಂಪ್ಯೂಟರ್ ಸಿಸ್ಟಮ್ ಅನ್ನು ವಸಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರದಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಹೆಸರಾಂತ ಕಂಪನಿಗಳಾದ ಉಬರ್ ಮತ್ತು ರ‍್ಯಾಪಿಡೋ ಕಂಪನಿಗಳಿಗೆ ಡ್ರೈವರ್‌ಗಳನ್ನು ಮತ್ತು ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್‌ಶಿಪ್ ಪಡೆದು, ಆನ್‌ಲೈನ್ ಮೂಲಕ ಡ್ರೈವರ್ ಮತ್ತು ವಾಹನಗಳನ್ನು ಅಟಾಚ್ ಮಾಡಿಸಿ, ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾವಿರಾರು ಮೊಬೈಲ್ ಸಿಮ್ ಕಾರ್ಡುಗಳನ್ನು ಉಪಯೋಗಿಸಿ, ಯಾವುದೇ ಸಂಚಾರ ಸೇವೆಯನ್ನು ನೀಡದೆ, ಸಾಪ್ಟ್ ವೇರ್ ದುರುಪಯೋಗಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ಮಾಡಿ ಕಂಪನಿಗಳಿಂದ ಬರುತ್ತಿದ್ದ ಸಾವಿರಾರು ರೂಪಾಯಿಗಳ ಇನ್ ಸೆಂಟಿವ್ ಹಣವನ್ನು ಪಡೆದು, ಕಂಪನಿಗಳಿಗೆ ಮೋಸ ಮಾಡುತ್ತಿದ್ದ 3 ಆಸಾಮಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಇವರುಗಳಲ್ಲಿ ಎ1 ಆರೋಪಿಯು ಉಬರ್ ಮತ್ತು ರ‍್ಯಾಪಿಡೋ ಕಂಪೆನಿಗಳ ವೆಂಡರ್‌ಶಿಪ್ ಪಡೆದಿದ್ದು, ಈತನ ಸ್ನೇಹಿತನಾದ ಎ2 ಫೈನಾನ್ಸ್ ಕಂಪನಿಯಲ್ಲಿ ಲೋನ್ ಕೊಡಿಸುವ ಕೆಲಸ ಮಾಡಿಕೊಂಡಿದ್ದು, ಎ3 ಆರೋಪಿಯು ವೋಡಾ ಪೋನ್ ಕಂಪನಿಯಲ್ಲಿ ಸಿಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ಮೂರು ಜನರು ಸೇರಿ ಸುಲುಭವಾಗಿ ಹಣ ಮಾಡುವ ಸಲುವಾಗಿ, ದುರುದ್ದೇಶದಿಂದ ಒಳ ಸಂಚು ರೂಪಿಸಿ, ಎ1 ಹೊಂದಿದ್ದ ಉಬರ್ ಮತ್ತು ರ‍್ಯಾಪಿಡೋ ವೆಂಡರ್‌ಶಿಪ್ನ ಸಹಾಯದಿಂದ ಎ2 ಒದಗಿಸುತ್ತಿದ್ದ ದಾಖಲಾತಿಗಳನ್ನು ಬಳಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಎ3 ನೀಡುತ್ತಿದ್ದ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ಬಳಸಿಕೊಂಡು ಕಾರು / ಬೈಕುಗಳು ಓಡುವ ರೀತಿಯಲ್ಲಿ ಮೊಬೈಲ್ ಪೋನ್, ಲ್ಯಾಪ್‌ಟಾಪ್‌ಗಳ ಮೂಲಕ ಸಾಪ್ಟ್ ವೇರ್ ಬಳಸಿ ಯಾವುದೇ ವಾಹನವನ್ನು ಚಲಿಸದೇ ಇದ್ದರೂ ವಾಹನಗಳು ಚಲಿಸಿದ ರೀತಿಯಲ್ಲಿ ಡಾಟಾ ಸೃಷ್ಟಿಸಿ, ಕಂಪನಿಗಳಿಂದ ವೆಂಡರ್‌ಗೆ ಬರುವ ಇನ್‌ಸೆಂಟಿವ್ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಹಂಚಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.

ಮೇಲ್ಕಂಡ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳ ವಿಚಾರಣೆ ಮಾಡಿ ಅವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ 1055 ಫ್ರೀ ಆಕ್ಟಿವೇಟೆಡ್ ಮೊಬೈಲ್ ಸಿಮ್‌ಗಳು, 15 ಮೊಬೈಲ್ ಪೋನ್‌ಗಳು, 4 ಲ್ಯಾಪ್‌ಟಾಪ್, 1 ಕಂಪ್ಯೂಟರ್ ಸಿಸ್ಟಮ್ ಮತ್ತು ಒಂದು ಬಯೋಮೆಟ್ರಿಕ್ ಡಿವೈಸ್ ಇವುಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಗಳ ವಿರುದ್ಧ ಐಪಿಸಿ, ಟೆಲಿಗ್ರಾಫ್ ಆಕ್ಟ್ ಹಾಗೂ ಐಟಿ ಆಕ್ಟ್ ಗಳಡಿಯಲ್ಲಿ ತನಿಖೆ ಮುಂದುವರಿದಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳಿಂದ ತಿಳಿದುಬಂದಿದೆ.     

Related Posts