ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ: 3 ಬಾರಿ ಎಚ್ಚರಿಸಿದ್ದ ಗುಪ್ತಚರ ಇಲಾಖೆ… ನಟ ವಿಜಯ್ ಸಂತಾಪ!
• ಡಿ.ಸಿ.ಪ್ರಕಾಶ್
ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿಲ್ಲ ಎಂದು ವರದಿಯಾಗಿದೆ.
ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಡಿದು ಹತ್ಯೆ ಮಾಡಿದ್ದರು. ದಾಳಿಕೋರರಿಂದ ಹಲ್ಲೆಗೊಳಗಾದ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಆರ್ಮ್‌ಸ್ಟ್ರಾಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಆರ್ಮ್‌ಸ್ಟ್ರಾಂಗ್ ಹತ್ಯೆ ಖಂಡಿಸಿ ಬಹುಜನ ಸಮಾಜ ಪಕ್ಷದ ಸದಸ್ಯರು ರಸ್ತೆ ತಡೆ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ವೇಳೆ ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂಬಂಧಿಸಿದಂತೆ 8 ಮಂದಿ ಶರಣಾಗಿದ್ದಾರೆ. ತನಿಖೆ ಮುಂದುವರಿದಿದೆ.
ಅವರ ನಿಧನಕ್ಕೆ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಸಂತಾಪ ಸೂಚಿಸುತ್ತಿವೆ. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ, ‘ತಮಿಳುನಾಡು ವೆಟ್ರಿ ಕಳಗಂ’ ಅಧ್ಯಕ್ಷ ಮತ್ತು ನಟ ವಿಜಯ್ ಅವರು ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.
ಅಲ್ಲದೆ, ತಮಿಳುನಾಡು ಸರಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗ ಅವರು ಪ್ರಕಟಿಸಿರುವ ಟ್ವೀಟ್‌ನಲ್ಲಿ, “ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ.
ಆರ್ಮ್‌ಸ್ಟ್ರಾಂಗ್ ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪ. ಇನ್ನು ಮುಂದೆ ಇಂತಹ ಘೋರ ಅಪರಾಧಗಳು ನಡೆಯದಂತೆ ತಮಿಳುನಾಡು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಾಜಿ ಮಾಡಿಕೊಳ್ಳದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ಹಂತಕರು ಆರ್ಮ್‌ಸ್ಟ್ರಾಂಗ್ ಅವರ ಮೇಲೆ ನಿಗಾ ಇರಿಸಿದ್ದರು ಎಂದು ಹೇಳಲಾಗಿದೆ. ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಸೇವೆ ಮತ್ತು ಸಮಗ್ರ ಅಪರಾಧ ತನಿಖಾ ವಿಭಾಗ ಈಗಾಗಲೇ 3 ಬಾರಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.
ಗುಪ್ತಚರ ಸಂಸ್ಥೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸೆಂಬಿಯಂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.